ಕೋವಿಡ್-19 ಸಮಯದಲ್ಲಿ ರಾಜಸ್ಥಾನ ರಾಜಕಾರಣದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ನಿಜಕ್ಕೂ ಬೇಸರ ಹುಟ್ಟಿಸುವಂಥದ್ದು. ಅಶೋಕ್ ಗೆಹಲೋಟ್ ಮತ್ತವರ ತಂಡ ಸಚಿನ್ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ, ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಲು ಸಫಲವಾಗಿದೆ. 2014ರಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಲ್ಲಿ ಗಟ್ಟಿಯಾಗಿಸಿದ ಸಚಿನ್ ಪೈಲಟ್, 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಪ್ರಮುಖವಾಗಿ ಕಾರಣವಾದವರು.
ಆ ಸಮಯದಲ್ಲೇ ಅವರನ್ನು ಮುಖ್ಯಮಂತ್ರಿಯಾಗಿಸಬೇಕು ಎಂಬ ಧ್ವನಿಗಳು ಜೋರಾಗಿದ್ದವು. ಆದರೆ ಸಿಎಂ ಕುರ್ಚಿ ಗೆಹಲೋಟ್ ಅವರ ಪಾಲಾಯಿತು. ಈಗ ಗೆಹಲೋಟ್ ಅವರಿಗೆ ಪಕ್ಷದಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿರುವವರೆಂದರೆ ಸಚಿನ್‌ಪೈಲಟ್ ಮಾತ್ರ, ಹೀಗಾಗಿ ಏನಕೇನ ಅವರನ್ನು ಪಕ್ಷದಿಂದ ದೂರಮಾಡಬೇಕೆಂಬ ಇರಾದೆ ಮುಖ್ಯಮಂತ್ರಿಗಳಿಗಿದೆ ಎಂಬ ವಾದವೂ ಇದೆ. ಇದೇ ವೇಳೆಯಲ್ಲೇ ಸಚಿನ್ ಪೈಲಟ್ ತಾವು ಮಾತ್ರ ಕಾಂಗ್ರೆಸ್ ಬಿಡುವುದಿಲ್ಲವೆಂದು ಹೇಳಿದ್ದಾರೆ. ಸಚಿನ್ ನಿಜಕ್ಕೂ ಪಕ್ಷದಲ್ಲೇ ಇರುತ್ತಾರಾ, ಬಿಜೆಪಿ ಸೇರುತ್ತಾರಾ ಅಥವಾ ಸ್ವಂತ ಪಕ್ಷ ಸ್ಥಾಪಿಸುತ್ತಾರಾ ಎನ್ನುವುದು ಬೇರೆ ವಿಷಯ. ಆದರೆ ಅದೇಕೆ ಕಾಂಗ್ರೆಸ್ ತನ್ನ ಕಾಲಿಗೆ ತಾನೇ ಕೊಡಲಿ ಪೆಟ್ಟು ಕೊಟ್ಟುಕೊಳ್ಳುತ್ತಿದೆ ಎನ್ನುವುದು ಮಾತ್ರ ಅಚ್ಚರಿ ಹುಟ್ಟಿಸುವ ಸಂಗತಿ. ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ಬೆನ್ನಿಗೆ ನಿಂತ ಕಾಂಗ್ರೆಸ್ ಹೈಕಮಾಂಡ್, ಪಕ್ಷ ಅಧಿಕಾರ ಕ್ಕೇರಲು ಹಗಲಿರುಳು ಶ್ರಮಿಸಿದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾರನ್ನು ದೂರ ಮಾಡಿಕೊಂಡಿತು.
ಈಗ ರಾಜಸ್ಥಾನದಲ್ಲಿ ಗೆಹಲೋಟ್ ಅವರ ಮಾತನ್ನಷ್ಟೇ ಕೇಳಿಸಿಕೊಳ್ಳುತ್ತಾ ಪೈಲಟ್ ಅವರನ್ನು ಅವಗಣಿಸುತ್ತಿದೆ. ಎಲ್ಲವೂ ತಹಬದಿಗೆ ಬರಬಹುದು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರಾದರೂ ಪರಿಸ್ಥಿತಿ ಯಾವಾಗ ತಿರುವುಮುರುವಾಗುತ್ತದೋ ತಿಳಿಯದು. ಕಾಂಗ್ರೆಸ್‌ನ ಈ ತಪ್ಪುಹೆಜ್ಜೆಗಳ ಬಗ್ಗೆ ಈಗ ಖುದ್ದು ಆ ಪಕ್ಷದ ಕೆಲವು ಹಿರಿಯ ನಾಯಕರೂ ಸಹ ಎಚ್ಚರಿಕೆ ನೀಡಲಾರಂಭಿಸಿದ್ದಾರೆ. ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಸ್ಥಿತಿ ಹೇಳಿಕೊಳ್ಳುವಂತೇನೂ ಇಲ್ಲ. ಯಾವ ರಾಜ್ಯಗಳಲ್ಲಿ ಆ ಪಕ್ಷ ಬಹಳ ಸಮಯದಿಂದ ಅಧಿಕಾರದಿಂದ ದೂರವಿದೆಯೋ ಅಲ್ಲಿ ಅದರ ಪರಿಸ್ಥಿತಿ ಹದಗೆಟ್ಟಿದೆ. ಇನ್ನು ಯಾವ ರಾಜ್ಯದಲ್ಲಿ ಅದು ಯಾವುದೇ ರೀತಿಯಲ್ಲಿ ಅಧಿಕಾರದಲ್ಲಿ ದೆಯೋ ಅಲ್ಲಿಯೂ ಅದಕ್ಕೆ ಸಂಕಷ್ಟವಿದೆ. ಇಂಥ ರಾಜ್ಯಗಳಲ್ಲಿ ಸರಕಾರವನ್ನು ಉಳಿಸುವುದು, ನಾಯಕರನ್ನು ಹಿಡಿದಿಡುವುದೇ ಅದಕ್ಕೆ ಬೃಹತ್ ಸವಾಲಾಗಿಬಿಟ್ಟಿದೆ. ಕಾಂಗ್ರೆಸ್ ನಾಯಕರ ರಾಜೀನಾಮೆಗಳು ಈಗಾಗಲೇ ಅನೇಕ ರಾಜ್ಯಗಳಲ್ಲಿ ರಾಜ್ಯಸಭೆ ಚುನಾವಣೆಯ ಸಮೀಕರಣವನ್ನೇ ಹಾಳು ಮಾಡಿದ್ದನ್ನು ನೋಡಿದ್ದೇವೆ.
2014ರಿಂದ ದೇಶದಲ್ಲಿ ರಾಜಕೀಯ ಶಕ್ತಿ ಸಮೀಕರಣದ ಸ್ವರೂಪವೇ ಬದಲಾಗಿದೆ. ಇವಿಷ್ಟೂ ವರ್ಷಗಳಲ್ಲಿ ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳಲ್ಲಿ ಯುವ ನಾಯಕತ್ವಕ್ಕೆ ಬಲ ತುಂಬುವ ಕೆಲಸಗಳಾಗುತ್ತಿವೆ. ಆದರೆ ಕಾಂಗ್ರೆಸ್ ಮಾತ್ರ, ಏಕೆ ತನ್ನಲ್ಲಿನ ಯುವ ನಾಯಕರನ್ನು ಹೀಗೆ ನಡೆಸಿಕೊಳ್ಳುತ್ತಿದೆಯೋ ತಿಳಿ ಯದು. ಪಕ್ಷದಲ್ಲಿ ಬೇರೆ ಯಾವ ಯುವ ನಾಯಕತ್ವವೂ ಪರ್ಯಾಯವಾಗಿ ಬೆಳೆಯ ಬಾರದೆಂಬ ಕಾರಣಕ್ಕೇನು?, ಅಲ್ಲ ಎನ್ನುವುದು ಉತ್ತರವಾಗಿದ್ದರೆ ಈ ವಿಚಾರದಲ್ಲಿ ಕಾಂಗ್ರೆಸ್ ಈಗಲೇ ಎಚ್ಚೆತ್ತುಕೊಳ್ಳುವುದು ಒಳಿತು.