ಜೈಪುರ: ನೂತನ ಕೃಷಿ ಕಾಯ್ದೆಗಳ ವಿರೋಧಿ ಹೋರಾಟ ಬಿಜೆಪಿ ಅಲೆಯನ್ನು ಕೊಂಚವೂ ತಗ್ಗಿಸಲಿಲ್ಲ. ರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ “ಗ್ರಾಮೀಣ ಮತಸಮರ’ದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ದಾಖಲಿಸಿದ್ದು, ರೈತಮತಗಳನ್ನೇ ಹೆಚ್ಚಾಗಿ ಗೆದ್ದಿದೆ.
ಪಂಚಾಯತ್ ಸಮಿತಿ, ಜಿಲ್ಲಾ ಪರಿ ಷತ್ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. 21 ಜಿಲ್ಲಾ ಪರಿಷತ್‌ಗಳಿಗೆ ನಡೆದ ಚುನಾವಣೆ ಯಲ್ಲಿ ಬಿಜೆಪಿ 14ರಲ್ಲಿ ಪಾರಮ್ಯ ಸಾಧಿ ಸಿದ್ದು, ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆದ್ದಿದೆ.
ಜಿಲ್ಲಾ ಪರಿಷತ್ ಮಟ್ಟದ 635 ಸ್ಥಾನ ಗಳಲ್ಲಿ 353 ಬಿಜೆಪಿ ಹುರಿಯಾಳುಗಳು ಜಯ ದಾಖಲಿಸಿದ್ದಾರೆ. ಕಾಂಗ್ರೆಸ್ ಜೋಳಿಗೆಗೆ 252 ಸ್ಥಾನಗಳಷ್ಟೇ ಸಿಕ್ಕಿವೆ.
ಪಂಚಾಯ್ತಿ ಫಲಿತಾಂಶ: ಒಟ್ಟು 4,371 ಪಂಚಾಯತ್ ಸಮಿತಿ ಸ್ಥಾನಗಳಲ್ಲಿ ಭಾಜಪ 1989 ಸ್ಥಾನಗಳನ್ನು ತನ್ನದಾಗಿಸಿ ಕೊಂಡಿದೆ. ಕಾಂಗ್ರೆಸ್ 1852ರಲ್ಲಿ ಗೆದ್ದು, ಇಲ್ಲೂ ಹಿನ್ನಡೆ ಕಂಡಿದೆ.
ಕಾಂಗ್ರೆಸ್ ವೈಫಲ್ಯ: ಅಶೋಕ್ ಗೆಹಲೋಟ್‌ರ ಅಸ್ಥಿರ ಸರಕಾರ, ಕಾಂಗ್ರೆಸ್ ಭಿನ್ನಮತಗಳು ಇಲ್ಲಿ ಬಿಜೆಪಿಗೆ ಮತ ತಂದಿವೆ. “ಕೈ’ ರಾಜ್ಯಾಧ್ಯಕ್ಷ ಸ್ಥಾನದಿಂದ ಸಚಿನ್ ಪೈಲಟ್‌ರನ್ನು ಕೆಳಗಿಳಿಸಿದ ಬಳಿಕ ಕಾಂಗ್ರೆಸ್ ಸಂಘಟನೆ ರಾಜ್ಯಾದ್ಯಂತ ದುರ್ಬಲವಾಗಿದೆ ಎಂದು ವಿಶ್ಲೇಷಿಸಲಾ ಗುತ್ತಿದೆ. ಇತ್ತೀಚೆಗಷ್ಟೇ ಸಿಎಂ ಗೆಹಲೋಟ್, “ಸರಕಾರ ಉರುಳಿಸಲು ಬಿಜೆಪಿ ವಾಮ ಮಾರ್ಗ ಅನುಸರಿಸುತ್ತಿದೆ’ ಎಂದು ಗಂಭೀರವಾಗಿ ಆರೋಪಿಸಿದ್ದರು. ಫಲಿತಾಂಶದ ಬಳಿಕ ಮಾಜಿ ಡಿಸಿಎಂ ಸಚಿನ್ ಪೈಲಟ್ ಮತ್ತು ಸಿಎಂ ಅಶೋಕ್ ಗೆಹಲೋಟ್ ನಡುವೆ ಮತ್ತೆ ಮುನಿಸು ತಲೆದೋರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
“ನೀವೆಲ್ಲೇ ಹೋದ್ರೂ ಅಲ್ಲಿ ಬಿಜೆಪಿ’!
ರಾಜಸ್ಥಾನವೊಂದೇ ಅಲ್ಲ, ದೇಶದ ಎಲ್ಲ ರಾಜ್ಯಗಳ ಜನರು ಬಿಜೆಪಿ ಜತೆಗಿರಲು ಖುಷಿಪಡುತ್ತಿದ್ದಾರೆ. ಮೋದಿ ಅವರ ಸರಕಾರದ ಸುಧಾರಣೆಗಳನ್ನು ಸ್ವಾಗತಿಸುತ್ತಿದ್ದಾರೆ. ಅದು ದಕ್ಷಿಣ, ಉತ್ತರ ಎಲ್ಲೇ ಇರಲಿ… ನೀವೆಲ್ಲೇ ಹೋದರೂ ಅಲ್ಲೆಲ್ಲ ಬಿಜೆಪಿಯೇ ಕಾಣಿಸುತ್ತಿದೆ…’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹರ್ಷವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ ಫಲಿತಾಂಶ ಕೇಂದ್ರದ ಕೃಷಿ ಸುಧಾರಣೆಗೆ ರೈತರು ನೀಡಿದ ಸಮ್ಮತಿ. ಪಕ್ಷವನ್ನು ಬೆಂಬಲಿಸಿದ ಮಹಿಳೆಯರು, ರೈತರು ಮತ್ತು ಗ್ರಾಮೀಣ ಮತದಾರರಿಗೆ ಧನ್ಯವಾದಗಳು.
ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ