ಜೈಪುರ: ದೇಶದ ಅತಿದೊಡ್ಡ ಉಪ್ಪು ನೀರಿನ ಸರೋವರ ಸಂಭಾರ್ ತೀರದಲ್ಲಿ ಸುಮಾರು ಹತ್ತು ಪ್ರಭೇದಗಳ ಸಾವಿರಾರು ವಲಸೆ ಪಕ್ಷಿಗಳ ಸಾವಿಗೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿಯೊಂದು ಲಭ್ಯವಾಗಿದೆ.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಕ್ಕಿಗಳು ಸಾವಿಗೀಡಾಗಲು ಬೊಟುಲಿಸಂ ಎಂಬ ಮಾರಕ ರೋಗ ಕಾರಣ ಎಂಬ ಆಘಾತಕಾರಿ ಅಂಶ ಇದೀಗ ಹೊರಬಿದ್ದಿದೆ. ಪಕ್ಷಿಗಳ ನರದ ಮೇಲೆ ಈ ರೋಗ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಹಕ್ಕಿಗಳಲ್ಲಿ ಪಾರ್ಶ್ವವಾಯುವಿನಂತಹ ಸಮಸ್ಯೆ ಉಂಟಾಗಿ ಅವು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಈ ಕುರಿತು ರಾಜ್ಯ ಪಶುಸಂಗೋಪನಾ ಸಚಿವ ಲಾಲ್‌ಚಂದ್ ಕಟಾರಿಯಾ ಮಾಹಿತಿ ಹಂಚಿಕೊಂಡಿದ್ದು, ‘ಸಂಭಾರ್ ಸರೋವರದಲ್ಲಿ ದೇಶೀಯ ಮತ್ತು ವಲಸೆ ಹಕ್ಕಿಗಳ ಸಾವಿಗೆ ಏವಿಯನ್ ಬೊಟುಲಿಸಮ್ ಕಾರಣವಾಗಿದ್ದು, ಇದನ್ನು ಬರೇಲಿಯಾದ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ಧೃಡಪಡಿಸಿದೆ’ ಎಂದು ಹೇಳಿದ್ದಾರೆ.
ಮೊದಲಿಗೆ ಹಕ್ಕಿಗಳು ಕಲುಷಿತ ನೀರು ಅಥವಾ ಏವಿಯನ್ ಪ್ಲ್ಯೂ ಸಮಸ್ಯೆಗೊಳಗಾಗಿ ಸಾಯುತ್ತಿವೆ ಎಂದು ಊಹಿಸಿಲಾಗಿತ್ತದರೂ, ಕರಳು ಪರೀಕ್ಷೆ ವರದಿಯ ನಂತರ ಅವುಗಳ ಸಾವಿಗೆ ಬೊಟುಲಿಸಂ ಎಂಬ ಮಾರಕ ರೋಗ ಕಾರಣ ಎಂದು ತಿಳಿದುಬಂದಿದೆ.
ಪ್ರತೀ ವರ್ಷ ಚಳಿಗಾಲದ ಋತುವಿನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಹಾರಿ ಬರುವ ಹಕ್ಕಿಗಳು ಈ ವಿಶ್ವ ಪ್ರಸಿದ್ಧ ಸರೋವರದಲ್ಲಿ ಬೀಡುಬಿಡುತ್ತವೆ. ಆದರೆ ಈ ಬಾರಿ ಮಾತ್ರ ಸಾವಿರಾರು ಮೈಲುಗಳಷ್ಟು ದೂರದಿಂದ ಹಾರಿಬಂದಿದ್ದ ಈ ಹಕ್ಕಿಗಳ ಪಾಲಿಗೆ ತಮ್ಮ ನೆಚ್ಚಿನ ಸರೋವರ ಸ್ಮಶಾನವಾಗಿ ಮಾರ್ಪಟ್ಟಿದ್ದು ಮಾತ್ರ ದುರಂತವೇ ಸರಿ.