ಜೈಪುರ್:ಕೋವಿಡ್ 19 ವೈರಸ್ ಭೀತಿಯ ನಡುವೆಯೇ ರಾಜಸ್ಥಾನ ಸರಕಾರದಲ್ಲಿ ಮುಖ್ಯಮಂತ್ರಿ ಅಶೋಕ್ ಪೈಲಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಮುಸುಕಿನ ಗುದ್ದಾಟ ಇದೀಗ ತಾರಕಕ್ಕೇರಿದೆ. ಮತ್ತೊಂದೆಡೆ ಕಾಂಗ್ರೆಸ್ ಮುಖಂಡ ರಾಜೀವ್ ಸಟಾವ್ ಅವರು ಸಚಿನ್ ಪೈಲಟ್ ಇಟ್ಟಿರುವ ಮೂರು ಬೇಡಿಕೆಯ ಸಂದೇಶವನ್ನು ತೆಗೆದುಕೊಂಡು ದೆಹಲಿಗೆ ತೆರಳಿರುವುದಾಗಿ ವರದಿ ತಿಳಿಸಿದೆ.
ಇಂಡಿಯಾ ಟುಡೇಗೆ ತಿಳಿದುಬಂದ ಮೂಲಗಳ ಪ್ರಕಾರ, ಅಶೋಕ್ ಗೆಹ್ಲೋಟ್ ಕ್ಯಾಂಪ್ ತನ್ನ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಸಚಿನ್ ಪೈಲಟ್ ಪಟ್ಟು ಹಿಡಿದಿದ್ದಾರೆ.
ತನ್ನ ನಾಲ್ವರು ಆಪ್ತರಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನ ಕೊಡಬೇಕು. ಅಷ್ಟೇ ಅಲ್ಲ ಅದರಲ್ಲಿ ಗೃಹ ಮತ್ತು ಹಣಕಾಸು ಖಾತೆ ನೀಡುವಂತೆ ಒತ್ತಾಯಿಸಿದ್ದು, ಮೂರನೇಯದಾಗಿ ತನ್ನನ್ನು ಪ್ರದೇಶ್ ಕಾಂಗ್ರೆಸ್ ಸಮಿತಿ(ಪಿಸಿಸಿ) ಅಧ್ಯಕ್ಷನನ್ನಾಗಿ ಮಾಡಬೇಕು ಎಂದು ಷರತ್ತು ಇಟ್ಟಿರುವುದಾಗಿ ವರದಿ ವಿವರಿಸಿದೆ.
ಸಚಿನ್ ಪೈಲಟ್ ಗೆ ನಿಷ್ಠರಾಗಿರುವ 12 ಶಾಸಕರು ಅವರ ಜತೆ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 30ಕ್ಕೂ ಹೆಚ್ಚು ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರು ಪೈಲಟ್ ಗೆ ಬೆಂಬಲ ಸೂಚಿಸಿದ್ದಾರೆನ್ನಲಾಗಿತ್ತು. ಅಲ್ಲದೇ ಇದರಿಂದ ಗೆಹ್ಲೋಟ್ ಸರಕಾರ ಅಲ್ಪಮತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು.
ಒಂದು ವೇಳೆ ಸಚಿನ್ ಪೈಲಟ್ ಬೆಂಬಲಿಗರು ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೇ ಇದ್ದರೆ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಘುವೀರ್ ಮೀನಾ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಮಾತುಕತೆ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವಂತೆ ಕಾಂಗ್ರೆಸ್ ಹಿರಿಯ ಮುಖಂಡ ರಣದೀಪ್ ಸುರ್ಜೇವಾಲಾ ಸಚಿನ್ ಪೈಲಟ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.