ಜೈಪುರ್:ಕೋವಿಡ್ 19 ಸೋಂಕಿನಿಂದ ರಾಜಸ್ಥಾನದ ಭಾರತೀಯ ಜನತಾ ಪಕ್ಷದ ಶಾಸಕಿ ಕಿರಣ್ ಮಹೇಶ್ವರಿ(59ವರ್ಷ) ಭಾನುವಾರ ರಾತ್ರಿ ಸಾವನ್ನಪ್ಪಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ವೈರಸ್ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹರ್ಯಾಣದ ಗುರುಗ್ರಾಮ್ ನ ಮೇದಾಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕಿ ಮಹೇಶ್ವರಿ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿರುವುದಾಗಿ ವರದಿ ಹೇಳಿದೆ.
ಕಿರಣ್ ಮಹೇಶ್ವರಿ ಅವರು 2013ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ ಮಂಡ್ ಕ್ಷೇತ್ರದಿಂದ 30 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದರು. ಮಹೇಶ್ವರಿ ಪತಿ ಸತ್ಯನಾರಾಯಣ ಮಹೇಶ್ವರಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಿರಣ್ ಮಹೇಶ್ವರಿ ಅವರು 2004ರಿಂದ 2009ರವರೆಗೆ ರಾಜಸ್ಥಾನದ ಉದಯ್ ಪುರ್ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದರು. ಕಿರಣ್ ಮಹೇಶ್ವರಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಇತರ ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಂತಿಮ ಏಕದಿನ, ಟಿ 20 ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್
“ಕಿರಣ್ ಮಹೇಶ್ವರಿ ಅವರ ಆಕಸ್ಮಿಕ ಅಗಲಿಕೆ ನೋವನ್ನು ತಂದಿರುವುದಾಗಿ” ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ರಾಜಸ್ಥಾನದಲ್ಲಿನ ಅಭಿವೃದ್ಧಿ ಕಾರ್ಯದಲ್ಲಿ ತುಂಬಾ ಶ್ರಮಪಟ್ಟಿದ್ದರು. ಅಲ್ಲದೇ ಬಡವರ ಕಲ್ಯಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು” ಎಂದು ತಿಳಿಸಿದ್ದಾರೆ.