ರಾಜಸ್ಥಾನ್: ಮಾರಕ ಕೋವಿಡ್ 19 ವೈರಸ್ ತಡೆಗಟ್ಟುವ ವಿಚಾರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದು ರಾಜಸ್ಥಾನದ ಭಿಲ್ವಾರಾ ನಗರ. ಇದೀಗ ಭಿಲ್ವಾರ ಜಿಲ್ಲೆಯಲ್ಲಿನ 28 ಮಂದಿ ಕೋವಿಡ್ 19 ಸೋಂಕು ಪೀಡಿತರಲ್ಲಿ 25 ಮಂದಿ ಗುಣಮುಖರಾಗುವ ಮೂಲಕ ಮತ್ತೊಂದು ಯಶಸ್ಸು ಸಾಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡೀ ಜಗತ್ತನ್ನೇ ಕೋವಿಡ್ 19 ವೈರಸ್ ಕಂಗೆಡಿಸುತ್ತಿದ್ದರೆ, ಕೋವಿಡ್ ನಿಯಂತ್ರಣಕ್ಕಾಗಿ ದೇಶದಲ್ಲಿ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿತ್ತು. ಏತನ್ಮಧ್ಯೆ ದೇಶದ ಗಮನ ಸೆಳೆದದ್ದು ರಾಜಸ್ಥಾನದ ಭಿಲ್ವಾರಾ ಜಿಲ್ಲೆ. ಆರಂಭದಲ್ಲಿ ಭಿಲ್ವಾರಾ ಜಿಲ್ಲೆಯನ್ನೇ ಕೋವಿಡ್ ವೈರಸ್ ನ ಕೇಂದ್ರ ಎಂದು ಬಿಂಬಿಸಲಾಗಿತ್ತು. ಮಾರ್ಚ್ 19ರಂದು ಪ್ರಥಮ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಜತೆಗೆ ಸೋಂಕು ಪೀಡಿತರ ಸಂಖ್ಯೆಯೂ ಅಧಿಕವಾಗಿತ್ತು. ಮಾರ್ಚ್ 26ರಂದು ಹಾಗೂ ಆ ನಂತರ ಕೋವಿಡ್ ಗೆ ಇಬ್ಬರು ಸಾವನ್ನಪ್ಪಿದ್ದರು. ತದನಂತರ ಭಿಲ್ವಾರ ಜಿಲ್ಲೆ ಕೈಗೊಂಡ ಕ್ರಮದಿಂದ ಕೋವಿಡ್ ಸೋಂಕು ಪೀಡಿತರ ಸಂಖ್ಯೆ ಗಣನೀಯ ಇಳಿಕೆಯಾಗಿತ್ತು.
28 ಮಂದಿ ಸೋಂಕಿತರಲ್ಲಿ ಇಬ್ಬರು ಸಾವನ್ನಪ್ಪಿದ್ದರು. 26 ಮಂದಿ ಸೋಂಕು ಪೀಡಿತರಲ್ಲಿ ಈಗ 25 ಮಂದಿ ಗುಣಮುಖರಾಗಿದ್ದು, 28ನೇ ಪ್ರಕರಣದ ವ್ಯಕ್ತಿಯನ್ನು ಐಸೋಲೇಶನ್ ನಲ್ಲಿ ಇಡಲಾಗಿದೆ ಎಂದು ವರದಿ ತಿಳಿಸಿದೆ.
ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಈಗಾಗಲೇ 15 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದ ಹತ್ತು ಮಂದಿ ವರದಿ ಕೂಡಾ ನೆಗೆಟಿವ್ ಬಂದಿದ್ದು ಎರಡು ದಿನಗಳಲ್ಲಿ ಡಿಸ್ ಚಾರ್ಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭಟ್ ತಿಳಿಸಿದ್ದಾರೆ.
ಭಿಲ್ವಾರ ನಗರದಲ್ಲಿ ಒಟ್ಟು 26 ಲಕ್ಷ ಜನಸಂಖ್ಯೆ ಹೊಂದಿದ್ದು, ಎಲ್ಲರನ್ನೂ ಸ್ಕ್ರೀನಿಂಗ್ ಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ. ಜೈಪುರ್ ಸೇರಿದಂತೆ ರಾಜಸ್ಥಾನದಲ್ಲಿ ಹಾಟ್ ಸ್ಪಾಟ್ ಎಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಭಿಲ್ವಾರಾ ಮಾದರಿ ಅನುಸರಿಸುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.