ವಾಡಿ: ಕಳೆದ 2012 ರಲ್ಲಿ ಮುಚ್ಚಿದ ಸಮಾದಿಯಲ್ಲಿ 5 ದಿನಗಳ ಕಠಿಣ ಅನುಷ್ಠಾನ ಮಾಡಿ ಕಲಬುರ್ಗಿ ಜಿಲ್ಲೆಯ ಜನರ ಗಮನ ಸೆಳೆದಿದ್ದ ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಹಳಕರ್ಟಿಯ ಶ್ರೀಸಿದ್ಧೇಶ್ವರ ಧ್ಯಾನ ಧಾಮದ ಪೂಜ್ಯ ಶ್ರೀರಾಜಶೇಖರ ಸ್ವಾಮೀಜಿ, ಈಗ ಮತ್ತೊಮ್ಮೆ 18 ದಿನಗಳ ಜೀವ ನಿರ್ವಿಕಲ್ಪ ಸಮಾಧಿ ಅನಿಷ್ಠಾನ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ಮಂಗಳವಾರ ಸಿದ್ದೇಶ್ವರ ಧ್ಯಾನಧಾಮ ಆಶ್ರಮದಲ್ಲಿ ಏರ್ಪಡಿಸಲಾಗಿದ್ದ ಭಕ್ತರ ಸಭೆಯಲ್ಲಿ ಆಶೀರ್ವಚನ ನೀಡುತ್ತಲೇ ಈ ತೀರ್ಮಾನ ಪ್ರಕಟಿಸಿದ ಶ್ರೀ ರಾಜಶೇಖರ ಸ್ವಾಮೀಜಿ, ನಂಬಿದ ಭಕ್ತರ ಒಳಿತಿಗಾಗಿ ಮತ್ತು ಸ್ವಯಂ ವಾಕ್‌ಸಿದ್ಧಿ ಪ್ರಾಪ್ತಿಗಾಗಿ ಇಂತಹದ್ದೊಂದು ಕಠಿಣ ತಪ್ಪಿಸಿಗೆ ಸಿದ್ಧನಾಗಿದ್ದೇನೆ. ಆ.11 ರಿಂದ 19 ರ ವರೆಗೆ ಆಶ್ರಮದ ಧ್ಯಾನ ಕೋಣೆಯಲ್ಲಿ ಎಂಟು ದಿನಗಳ ಮೌನಾನುಷ್ಠಾನ ಹಾಗೂ ಆ.20 ರಿಂದ 28ರ ವರೆಗೆ ಅದೇ ಸ್ಥಳದಲ್ಲಿ ಜೀವ ನಿರ್ವಿಕಲ್ಪ ಸಮಾಧಿ ಅನುಷ್ಠಾನ ನಡೆಸಲು ತೀರ್ಮಾನಿಸಿದ್ದೇನೆ. ಈ ವೇಳೆ ಸತತ 18 ದಿನಗಳ ಕಾಲ ದೇವಿ ಪಾರಾಯಣದ 18 ಅಧ್ಯಾಯಗಳನ್ನು ಪಠಿಸಲು ಸಂಕಲ್ಪ ತೊಟ್ಟಿದ್ದೇನೆ. ದೇವಿ ಪಾರಾಯಣದ ನಂತರ ವಾಕ್‌ಸಿದ್ಧಿ ಪ್ರಾಪ್ತಿಯಾಗಲಿದ್ದು, ಪಡೆದ ಜ್ಞಾನವನ್ನು ಭಕ್ತರಿಗೆ ಹಂಚುತ್ತೇನೆ. ಭಕ್ತರ ಕಷ್ಟ ಸುಃಖ ಅರಿತು ಅವರ ಸಂಕಷ್ಟಗಳಿಗೆ ಪರಿಹಾರ ದೊರೆತರೆ ನಮ್ಮ ಕಠಿಣ ತಪ್ಪಿಸಿನ ಶ್ರಮ ಸಾರ್ಥಕವಾಗುತ್ತದೆ ಎಂದರು.
ಆ.11 ರಂದು ಬೆಳಗ್ಗೆ 10:00 ಗಂಟೆಗೆ ಮೌನ ಅನುಷ್ಠಾನ ಆರಂಭಗೊಳ್ಳುತ್ತಿರುವುದರಿಂದ ಅದಕ್ಕೂ ಮೊದಲು ಭಕ್ತರು ಮನದಿಚ್ಚೆ ಹಂಚಿಕೊಳ್ಳಬಹುದು. ಅದಕ್ಕಾಗಿ ಬೆಳಗ್ಗೆ 9:00 ಗಂಟೆಗೆ ಭಕ್ತರು ಆಶ್ರಮದ ಕಡೆಗೆ ಹೆಜ್ಜೆಹಾಕಬೇಕು. ಅನುಷ್ಠಾನ ಶುರುವಾದ ಬಳಿಕ 18 ದಿನಗಳ ವರೆಗೆ ಯಾರಿಗೂ ನಮ್ಮ ದರ್ಶನ ಲಭ್ಯವಿರುವುದಿಲ್ಲ. ಆ.28 ರಂದು ಅನುಷ್ಠಾನ ಸಮಾಧಿಯ ಗೋಡೆಗಳು ಭಕ್ತರು ಉರುಳಿಸುತ್ತಾರೆ. ನಿಶಕ್ತಿಯಿಂದ ನೆಲಕ್ಕುರುಳಿದ ಸ್ಥಿತಿಯಲ್ಲಿ ಕಾಣಿಸದೆ ಧ್ಯಾನಸ್ಥ ಸ್ಥಿತಿಯಲ್ಲೇ ನಿಮಗೆ ದರ್ಶನ ನೀಡುತ್ತೇನೆ ಎಂದು ಸ್ವಾಮೀಜಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಯಾವೂದೇ ಆತಂಕಕ್ಕೊಳಗಾಗದೆ ಭಕ್ತರು ಆ.11 ರಿಂದ 28 ರ ವರೆಗೆ ನಿರಂತರವಾಗಿ ಮಠದಲ್ಲಿ ಪೂಜೆ ಮತ್ತು ಭಜನಾ ಕಾರ್ಯಗಳು ನಿರಂತರವಾಗಿರುವಂತೆ ನೋಡಿಕೊಳ್ಳಬೇಕು. ಬರುವ ಸ್ವಾಮೀಜಿಗಳ ಮತ್ತು ಭಕ್ತರ ಸಮೂಹದ ಯೋಗಕ್ಷೇಮ ನೋಡಿಕೊಳ್ಳಬೇಕು. ಪ್ರತಿದಿನವೂ ಮಠದಲ್ಲಿ ದಾಸೋಹ ಸೇವೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಭಕ್ತರಿಗೆ ಸಲಹೆ ನೀಡಿದರು.
ಬೆನಕನಳ್ಳಿಯ ಬಾಲಯೋಗಿ ಶ್ರೀಅಭಿನವ ಕೇದಾರಲಿಂಗ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸಜ್ಜನ್, ಗ್ರಾಪಂ ಅಧ್ಯಕ್ಷ ಸೋಮನಾಥ ಚವ್ಹಾಣ, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ವೀರೂಪಾಕ್ಷಯ್ಯಸ್ವಾಮಿ ಹಿರೇಮಠ, ಮುಖಂಡರಾದ ಚಂದ್ರಕಾಂತ ಮೇಲಿನಮನಿ, ದಂಡಯ್ಯಸ್ವಾಮಿ, ರಾಜುಗೌಡ ಪೊಲೀಸ್ ಪಾಟೀಲ, ಮಲ್ಲಣ್ಣಸಾಹು ಸಂಗಶೆಟ್ಟಿ, ರಾಘವೇಂದ್ರ ಅಲ್ಲಿಪುರಕರ, ವೀರಭದ್ರಯ್ಯಸ್ವಾಮಿ ಬೆಲ್ಲದ್, ಢಾಕು ರಾಠೋಡ, ಮಲ್ಲಿಕಾರ್ಜುನ ಭಜಂತ್ರಿ, ತಾಯಪ್ಪ ಮೇಕಲ್, ಅಯ್ಯಣ್ಣಗೌಡ ಆಲೂರ, ನಾಗರಾಜ ಯರಗೋಳ, ಶಿವಯೋಗಿ ಯರಗೋಳ, ಮಲ್ಲಿಕಾರ್ಜುನ, ವೀರಣ್ಣ ಯಾರಿ, ವೀರೇಶ ಜೀವುಣಗಿ, ನಿಂಗಣ್ಣ ಮಾಸ್ತಾರ್ ಇರಗೊಂಡ, ಜಗದೀಶ ಜಾಧವ, ಪರಶುರಾಮ ರಾಠೋಡ, ಕಿಶನ ಚವ್ಹಾಣ, ಸಿದ್ದು ಬಾವಿಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.