Advertisement

ಅಖಾಡಕ್ಕಿಳಿದ ರಾಜಣ್ಣನ ಮಗ

12:30 AM Mar 15, 2019 | |

ಕೋಲಾರ ಸೀನು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ “ರಾಜಣ್ಣನ ಮಗ’ ತೆರೆಗೆ ಬರೋದಕ್ಕೆ ಸಿದ್ಧವಾಗಿದ್ದಾನೆ. ಆರಂಭದಲ್ಲಿ “ರಾಜಣ್ಣನ ಮಗ’ ಚಿತ್ರದ ಟೈಟಲ್‌ ಬಗ್ಗೆ ಒಂದಷ್ಟು ಅಂತೆ-ಕಂತೆಗಳು ಹರಿದಾಡಿ ಕಾಂಟ್ರವರ್ಸಿಗೆ ಕಾರಣವಾಗಿತ್ತು. ಈ ಚಿತ್ರಕ್ಕೂ ಅಣ್ಣಾವ್ರ ಫ್ಯಾಮಿಲಿಗೂ ಏನಾದರೂ ಸಂಬಂಧವಿದೆಯಾ? ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ನಂತರದ ಚಿತ್ರತಂಡ ಈ ಬಗ್ಗೆ ಇದ್ದ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿತ್ತು. 

Advertisement

ಅಂತಿಮವಾಗಿ ಕಳೆದ ಎರಡು-ಮೂರು ತಿಂಗಳಿನಿಂದ ಪ್ರಮೋಶನ್‌ ಕೆಲಸಗಳಲ್ಲಿ ನಿರತನಾಗಿದ್ದ “ರಾಜಣ್ಣನ ಮಗ’ ಈ ವಾರ ತೆರೆಗೆ ಅಡಿಯಿಡುತ್ತಿದ್ದಾನೆ. ಇನ್ನು ಚಿತ್ರದ ಬಿಡುಗಡೆಗೂ ಮೊದಲು ಮಾಧ್ಯಮಗಳ ಮುಂದೆ ಬಂದಿದ್ದ “ರಾಜಣ್ಣನ ಮಗ’ ಮತ್ತವನ ಬಳಗ ಚಿತ್ರದ ವಿಶೇಷತೆಗಳು ಮತ್ತು ಬಿಡುಗಡೆಯ ಯೋಜನೆಗಳ ಬಗ್ಗೆ ಮಾತನಾಡಿತು.  ನಿರ್ದೇಶಕ ಕೋಲಾರ ಸೀನು ಹೇಳುವಂತೆ, ಚಿತ್ರದ ಟೈಟಲ್‌ನಲ್ಲಿರುವಂತೆ ರಾಜಣ್ಣ ಎಂಬ ಆದರ್ಶ ತಂದೆ ಮತ್ತು ಅವನ ಮಗನ ನಡುವಿನ ಕಥೆಯೇ ಈ ಚಿತ್ರ. ತನ್ನ ಮಗ ದೊಡ್ಡ ಮನುಷ್ಯನಾಗಬೇಕು ಎಂದು ಕನಸು ಕಾಣುವ ರಾಜಣ್ಣನಿಗೆ ಅವನ ಮಗ ಆ ಕನಸುಗಳನ್ನು ನನಸು ಮಾಡುತ್ತಾನಾ? ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಇದೊಂದು ತಂದೆ-ಮಗನ ಸೆಂಟಿಮೆಂಟ್‌ ಚಿತ್ರ. ಇದರಲ್ಲಿ ತಂದೆಯ ಪಾತ್ರ ತುಂಬಾ ಪ್ರಮುಖವಾಗಿದ್ದು, ಆ ಪಾತ್ರದ ಹೆಸರೇ ರಾಜಣ್ಣ. ಅದಕ್ಕಾಗಿ ಚಿತ್ರಕ್ಕೆ ರಾಜಣ್ಣನ ಮಗ  ಹೆಸರಿಡಲಾಗಿದೆ ಎನ್ನುತ್ತಾರೆ. 

ಇನ್ನು ಚಿತ್ರದಲ್ಲಿ ರಾಜಣ್ಣನ ಪಾತ್ರದಲ್ಲಿ ಹಿರಿಯ ನಟ ಚರಣ್‌ ರಾಜ್‌ ಕಾಣಿಸಿಕೊಂಡರೆ, “ರಾಜಣ್ಣನ ಮಗ’ನ ಪಾತ್ರದಲ್ಲಿ ಹರೀಶ್‌ ಕಾಣಿಸಿಕೊಂಡಿದ್ದಾರೆ. ಮಗನ ಪಾತ್ರದಲ್ಲಿ ನಟ ಹರೀಶ್‌ ಖಡಕ್ಕಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಒಳ್ಳೆಯ ಮಾಸ್‌ ಹೀರೋ ಸಿಗಲಿದ್ದಾನೆ ಅನ್ನೋದು ಚಿತ್ರತಂಡದ ಭರವಸೆಯ ಮಾತು. 

ಚಿತ್ರದಲ್ಲಿ ನಾಯಕಿಯಾಗಿ ಅಕ್ಷತಾ ನಟಿಸಿದ್ದಾರೆ. ಉಳಿದಂತೆ ರಾಜೇಶ್‌ ನಟರಂಗ, ಕರಿಸುಬ್ಬು, ಶರತ್‌ ಲೋಹಿತಾಶ್ವ, ಮೈಕೋ ನಾಗರಾಜ್‌, ರಮೇಶ್‌ ಪಂಡಿತ್‌, ರಾಜ್‌ ರೆಡ್ಡಿ, ಕುರಿ ರಂಗ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಚಿತ್ರದಲ್ಲಿ ಐದು ಹಾಡುಗಳಿಗೆ ರವಿ ಬಸ್ರೂರ್‌ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್‌, ಮಳವಳ್ಳಿ ಸಾಯಿಕೃಷ್ಣ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಸಿದ್ದಪ್ಪಾಜಿ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್‌. ಆರ್‌ ಛಾಯಾಗ್ರಹಣ, ಹರೀಶ್‌ ಗೌಡ ಸಂಕಲನವಿದೆ. 

Advertisement

Udayavani is now on Telegram. Click here to join our channel and stay updated with the latest news.

Next