Advertisement

ಮೈತ್ರಿಗೆ ಮುಳ್ಳಾಗಿದ್ದ ರಾಜಣ್ಣ “ಸನ್ಯಾಸ’?

10:59 AM Jul 22, 2019 | Lakshmi GovindaRaj |

ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿದ್ದ ಮಧುಗಿರಿ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ತಮ್ಮ ಹೇಳಿಕೆಗಳಿಂದಲೇ ರಾಜಕೀಯ ಸನ್ಯಾಸ ಸ್ವೀಕರಿಸುವಂತಾಗಿದೆ ಎನ್ನಲಾಗಿದೆ. ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್‌ ಸೂಪರ್‌ಸೀಡ್‌ ಆಗಿರುವುದೂ ಅದೇ ಕಾರಣಕ್ಕೆ ಎಂಬ ಚರ್ಚೆ ಆರಂಭವಾಗಿದೆ.

Advertisement

ರಾಜಣ್ಣ ಅವರು ಮೈತ್ರಿ ಸರ್ಕಾರದ ವಿರುದ್ಧ ಏನೆಲ್ಲ ಆರೋಪ ಮಾಡಿದ್ದರೂ ಪಕ್ಷ ಯಾವುದೇ ಕ್ರಮಕೈಗೊಳ್ಳದಿದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್‌ ನಾಯಕರ ಬಗ್ಗೆ ಸಾಕಷ್ಟು ಅಸಮಾಧಾನಗೊಂಡಿದ್ದರು. ಉಪ ಮುಖ್ಯಮಂತ್ರಿ ಪರಮೇಶ್ವರ್‌ ಕೂಡ ಅಸಹಾಯಕರಾಗಿದ್ದರು. ಪಕ್ಷದಿಂದ ಯಾವುದೇ ಕ್ರಮ ಆಗದೇ ಇರುವುದರಿಂದ ರಾಜಕೀಯವಾಗಿ ಏಟು ನೀಡಲು ಅವರು ರಾಜಕೀಯದ ಮೆಟ್ಟಿಲೇರಲು ಏಣಿಯಾಗಿದ್ದ ಜಿಲ್ಲಾ ಸಹಕಾರಿ ಬ್ಯಾಂಕ್‌ನ್ನು ಸೂಪರ್‌ ಸೀಡ್‌ ಮಾಡುವ ಮೂಲಕ ಕೊಡಲಿ ಏಟು ನೀಡಿ ರಾಜಕೀಯವಾಗಿ ಅವರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಪರಮೇಶ್ವರ್‌ಗೆ ಕಷ್ಟ: ಡಿಸಿಸಿ ಬ್ಯಾಂಕ್‌ ಸೂಪರ್‌ ಸೀಡ್‌ ಆಗಿರುವುದರಿಂದ ಬೇಸತ್ತು ರಾಜಕೀಯ ನಿವೃತ್ತಿ ಘೋಷಿಸಿರುವ ರಾಜಣ್ಣ ಜಿಲ್ಲೆಯಲ್ಲಿ ರಾಜಕೀಯವಾಗಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ವಿಶೇಷವಾಗಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಅವರ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಣ್ಣ ಪ್ರಭಾವ ಉಳಿಸಿಕೊಂಡಿದ್ದು, ಮುಂದಿನ ಚುನಾವಣೆಗಳಲ್ಲಿ ರಾಜಣ್ಣ ಪರಮೇಶ್ವರ್‌ ವಿರುದ್ಧ ಕೆಲಸ ಮಾಡಿದರೆ ಅವರ ಗೆಲುವು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಾಲ್ಕು ಬಾರಿ ಶಾಸಕನಾಗಿ ರಾಜ್ಯ ರಾಜಕಿಯದಲ್ಲಿ ತನ್ನದೇ ಆದ ಪ್ರಭಾವ ಬೆಳೆಸಿಕೊಂಡಿದ್ದ ರಾಜಣ್ಣ ತುಮಕೂರು ಜಿಲ್ಲಾ ರಾಜಕಾರಣದಲ್ಲಿ ಬಲವಾದ ಹಿಡಿತ ಹೊಂದಿದ್ದರು. ಸಹಕಾರ ಕ್ಷೇತ್ರದಿಂದಲೇ ರಾಜಕಾರಣದ ಮೆಟ್ಟಿಲುಗಳನ್ನು ಏರಿದ್ದ ರಾಜಣ್ಣ ಕರ್ನಾಟಕ ರಾಜ್ಯ ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಅವರು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಮೂಲಕವೇ ರಾಜಕೀಯವಾಗಿ ತಮ್ಮ ಬಲ ಹೆಚ್ಚಿಸಿಕೊಂಡಿದ್ದರು.

ಹೇಳಿಕೆಗಳೇ ಮುಳುವು?: 2018 ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ನಂತರ ಮೈತ್ರಿ ಸರ್ಕಾರದ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತಲೇ ಬಂದಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ನೇರ ಆರೋಪಗಳನ್ನು ಮಾಡಿ, ಮೈತ್ರಿಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್‌ ಅವನತಿ ಹೊಂದುತ್ತಿದೆ ಎಂದು ನೇರವಾಗಿಯೇ ಆರೋಪಿಸಿದ್ದರು. ಅವರ ಆರೋಪದಿಂದ ಮೈತ್ರಿ ಪಕ್ಷಗಳ ನಾಯಕರು ರೋಸಿ ಹೋಗಿದ್ದರೂ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಶೀರ್ವಾದದಿಂದ ಪಕ್ಷದಲ್ಲಿ ಯಾವುದೇ ಶಿಕ್ಷೆಗೆ ಗುರಿಯಾಗದೇ ಉಳಿದುಕೊಂಡಿದ್ದರು.

Advertisement

ಪರಮೇಶ್ವರ್‌ ವಿರುದ್ಧ ವಾಗ್ಧಾಳಿ: ಉಪ ಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ವಿರುದ್ಧ ಸರ್ಕಾರದ ಆರಂಭದಿಂದಲೂ ವಾಗ್ಧಾಳಿ ನಡೆಸುತ್ತಲೇ ಬಂದಿದ್ದರು. ದೇವೇಗೌಡರ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪರಮೇಶ್ವರ್‌ ಕಾಂಗ್ರೆಸ್‌ ಪಕ್ಷವನ್ನು ಬಲಿ ಕೊಡುತ್ತಿದ್ದಾರೆ ಎಂದು ನೇರವಾಗಿಯೇ ಅವರ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಅಲ್ಲದೇ ಪರಮೇಶ್ವರ್‌ ಅವರನ್ನು “ಜೀರೋ ಟ್ರಾಫಿಕ್‌ ಮಂತ್ರಿ’ ಅಂತಲೇ ಕರೆಯುವ ಮೂಲಕ ಅವರನ್ನು ಕಾಲೆಳೆಯುವ ಮಾಡುವ ಪ್ರಯತ್ನ ಮಾಡುತ್ತಿದ್ದರು.

ತಮ್ಮ ವಿರುದ್ಧ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪರಮೇಶ್ವರ್‌ ಹಲವಾರು ಬಾರಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ಮನವಿ ಮಾಡಿದ್ದರೂ, ಸಿದ್ದರಾಮಯ್ಯ ಅವರ ಕೃಪೆಯಿಂದ ಅವರಿಗೆ ಕೇವಲ ಕಾರಣ ಕೇಳಿ ನೋಟೀಸ್‌ ಕೊಡಲಾಗಿತ್ತು ಬಿಟ್ಟರೆ ಪಕ್ಷ ಯಾವುದೇ ಶೀಸ್ತು ಕ್ರಮ ಕೈಗೊಳ್ಳುವ ಧೈರ್ಯ ತೋರಿರಲಿಲ್ಲ.

ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಸೋಲು: ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ತಮ್ಮ ಮೊಮ್ಮಗನಿಗೆ ಬಿಟ್ಟುಕೊಟ್ಟು ತುಮಕೂರಿನಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಬಹಿರಂಗವಾಗಿಯೇ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದ್ದರು. ಪಕ್ಷದ ನಾಯಕರ ಒತ್ತಾಯದ ಮೇರೆಗೆ ವಾಪಸ್‌ ಪಡೆದರೂ ಚುನಾವಣೆಯಲ್ಲಿ ಬಹಿರಂಗವಾಗಿಯೇ ದೇವೇಗೌಡರ ವಿರುದ್ಧ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು.

ಈ ಬಗ್ಗೆ ತುಮಕೂರು ಜಿಲ್ಲಾ ಕಾಂಗ್ರೆಸ್‌ನಿಂದ ದೂರು ನೀಡಿದ್ದರೂ ಪಕ್ಷ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆ ನಂತರವೂ ಮೈತ್ರಿ ಸರ್ಕಾರದ ವಿರುದ್ಧ ರಾಜಣ್ಣ ತಮ್ಮ ವಾಗ್ಧಾಳಿಯನ್ನು ಮುಂದುವರೆಸಿದ್ದರು. ಈಗ ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿಯೂ ಈ ಸರ್ಕಾರ ಹೋಗಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next