Advertisement

ರಾಜ-ಹಂಸದಲ್ಲೊಂದು ಕುರುಕ್ಷೇತ್ರ ಪ್ರಸಂಗ

12:22 PM Sep 14, 2017 | Sharanya Alva |

ಕನ್ನಡ ಚಿತ್ರರಂಗದಲ್ಲೀಗ “ಕುರುಕ್ಷೇತ್ರ’ದ್ದೇ ಮಾತು. ದರ್ಶನ್‌ ಅಭಿನಯದ 50ನೇ ಚಿತ್ರವಾದ “ಕುರುಕ್ಷೇತ್ರ’ದ ಚಿತ್ರೀಕರಣ, ಅದಕ್ಕೆ ಮಾಡಿಕೊಳ್ಳುತ್ತಿರುವ ಸಿದ್ಧತೆಗಳು, ಕಲಾವಿದರ ಆಯ್ಕೆ … ಹೀಗೆ ಹಲವು ಕಾರಣಗಳಿಗಾಗಿ “ಕುರುಕ್ಷೇತ್ರ’ ಸುದ್ದಿ ಮಾಡುತ್ತಲೇ ಇದೆ. ಹೀಗಿರುವಾಗಲೇ “ಕುರುಕ್ಷೇತ್ರ’ ಪ್ರಸಂಗವು ಸದ್ದಿಲ್ಲದೆ ಒಂದು ಚಿತ್ರದಲ್ಲಿ ಬಂದಿದೆ. ಅದೇ
ಕಳೆದ ವಾರ ಬಿಡುಗಡೆಯಾದ “ರಾಜ-ಹಂಸ’.

Advertisement

ಗೌರಿಶಿಖರ್‌ ಮತ್ತು ರಂಜಿನಿ ರಾಘವನ್‌ ಅಭಿನಯದ “ರಾಜ-ಹಂಸ’ ಚಿತ್ರದಲ್ಲೂ ಕುರುಕ್ಷೇತ್ರ ಪ್ರಸಂಗ ಬರುತ್ತದೆ ಮತ್ತು ಆ ಪ್ರಸಂಗದಲ್ಲಿ ನಾಯಕ ಗೌರಿಶಿಖರ್‌ ಅಭಿಮನ್ಯುವಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಹೌದು, ಚಿತ್ರದಲ್ಲಿ ನಾಯಕ ಮತ್ತು ಆತನ ಮನೆಯವರು ಸವಾಲಿಗೆ ನಾಟಕ ಮಾಡಬೇಕಾದ ಪ್ರಸಂಗ ಬರುತ್ತದೆ. ಆ ಸಂದರ್ಭದಲ್ಲಿ ನಾಯಕನ ಮನೆಯವರು
ಆಯ್ಕೆ ಮಾಡಿಕೊಳ್ಳುವುದು ಅದೇ ಕುರುಕ್ಷೇತ್ರ ನಾಟಕವನ್ನ. ಆ ನಾಟಕವನ್ನಾಡುವ ಸಂದರ್ಭದಲ್ಲಿ ನಾಯಕನ ಮನೆಯವರು ಏನೆಲ್ಲಾ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ಮನರಂಜನಾತ್ಮಕವಾಗಿ ಹೇಳಲಾಗಿದೆ. 

ಇಲ್ಲಿ ಗೌರಿಶಿಖರ್‌ ಅಭಿಮನ್ಯುವಾಗಿ, ಯಮುನಾ ಸುಭದ್ರಳಾಗಿ, ಶ್ರೀಧರ್‌ ದುರ್ಯೋಧನನಾಗಿ, ವಿಜಯ್‌ ಚೆಂಡೂರ್‌ ಶಕುನಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಇದಲ್ಲದೆ ಇನ್ನೂ ಒಂದು ದೃಶ್ಯದಲ್ಲಿ ನಾಟಕದ ತುಣುಕೊಂದಿದ್ದು, ಅದರಲ್ಲಿ ಬಿ.ಸಿ. ಪಾಟೀಲ್‌ ಅವರು ಕೌರವೇಶ್ವರನಾಗಿ ಕಾಣಿಸಿಕೊಂಡಿದ್ದಾರೆ.

“ರಾಜ-ಹಂಸ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಿರಿಯ ನಟ ಜಗ್ಗೇಶ್‌ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕವಿರಾಜ್‌ ಸೇರಿದಂತೆ ಹಲವರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಈ ಚಿತ್ರವು ಜನಮನ ಸಿನಿಮಾ ಬ್ಯಾನರ್‌ನಡಿ ನಿರ್ಮಾಣವಾಗಿದ್ದು, ಜಡೇಶ್‌ ಕುಮಾರ್‌ ನಿರ್ದೇಶಿಸಿದ್ದಾರೆ. ಇನ್ನು ಜೋಶ್ವಾ ಶ್ರೀಧರ್‌ ಅವರ ಸಂಗೀತ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next