ಅನಿರುದ್ಧ್ ಅಭಿನಯದ “ರಾಜಾ ಸಿಂಹ’ ಈ ವಾರ ಬಿಡುಗಡೆಯಾಗುತ್ತಿದೆ. ಅನಿರುದ್ಧ್ ಇದೇ ಮೊದಲ ಬಾರಿಗೆ ಆ್ಯಕ್ಷನ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಚಿತ್ರ ಅದು. ಈ ಚಿತ್ರವನ್ನು ಸಿ.ಡಿ. ಬಸಪ್ಪ ನಿರ್ಮಿಸುತ್ತಿದ್ದು, ರವಿರಾಮ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅನಿರುದ್ಧ್ ಎದುರು ನಿಖೀತಾ ನಾಯಕಿಯಾಗಿ ನಟಿಸಿದ್ದು, ಭಾರತಿ ವಿಷ್ಣುವರ್ಧನ್, ಅಂಬರೀಶ್, ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು “ಸಿಂಹಾದ್ರಿಯ ಸಿಂಹ’ ಚಿತ್ರದ ಮುಂದುವರೆದ ಭಾಗವಾಗಿದ್ದು, ಇದರಲ್ಲಿ ವಿಷ್ಣುವರ್ಧನ್ ಅವರ ಪಾತ್ರವೂ ಇರುತ್ತದಂತೆ. ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಅಂದು ಅನಿರುದ್ಧ್ ಮತ್ತು ಚಿತ್ರತಂಡದವರು ಮಾಧ್ಯಮದವರೆದು ಕುಳಿತಿದ್ದರು.
ಎಂಟು ಚಿತ್ರಗಳು ಬಿಡುಗಡೆಯಾಗುತ್ತಿರುವ ಈ ಸಂದರ್ಭದಲ್ಲಿ, ಅರ್ಜೆಂಟ್ ಆಗಿ ಈ ಚಿತ್ರ ಮಾಡುವ ಅವಶ್ಯಕತೆ ಇತ್ತಾ? ಎಂಬ ಪ್ರಶ್ನೆಯೊಂದು ಆರಂಭದಲ್ಲೇ ಬಂತು. ಈ ಕುರಿತು ಮಾತನಾಡಿದ ಅನಿರುದ್ಧ್, “ನಾವು ಅರ್ಜೆಂಟ್ ಮಾಡುತ್ತಿಲ್ಲ, ಕಳೆದ ಮೂರು ವರ್ಷಗಳಿಂದ ಚಿತ್ರ ಬಿಡುಗಡೆ ಮಾಡುವುದಕ್ಕೆ ಕಾಯುತ್ತಿದ್ದೇವೆ. ಡಿಸೆಂಬರ್‌ನಲ್ಲೇ ಚಿತ್ರ ಬಿಡುಗಡೆ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಪರೀಕ್ಷೆ, ಕ್ರಿಕೆಟ್ ಅಂತೆಲ್ಲಾ ಕಷ್ಟವಾಗುತ್ತದೆ. ಇದು ಸರಿಯಾದ ಸಮಯ. ಸ್ಪರ್ಧೆ ಇರಬಹುದು, ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹೇಳಿದರು.
ಇನ್ನು ನಿರ್ದೇಶಕ ರವಿರಾಮ್ ಮಾತನಾಡಿ, “ಇದುವರೆಗೂ ಅನಿರುದ್ಧ್ ಅವರನ್ನು ಲವ್ವರ್ ಬಾಯ್ ಪಾತ್ರಗಳಲ್ಲಿ ನೋಡಿದ್ದೆ. ಅವರನ್ನು ಬೇರೆ ತರಹ ತೋರಿಸಬೇಕು ಎಂದು ಹೊರಟಿದ್ದೇನೆ. ಇದೊಂದು ಆ್ಯಕ್ಷನ್ ಚಿತ್ರ. ಫ್ಯಾಮಿಲಿ ಡ್ರಾಮಾ ಸಹ ಇದೆ. ಡಾ ವಿಷ್ಣುವರ್ಧನ್ ಅವರ ಟ್ರಾಕ್ ಇದೆ. ನಾಲ್ಕು ಫೈಟುಗಳು, ಆರು ಹಾಡುಗಳು ಇವೆ. ಸುಮಾರು 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ಹೇಳಿದರು.
ನಿರ್ಮಾಪಕ ಸಿ.ಡಿ. ಬಸಪ್ಪ ಅವರಿಗೆ ಚಿತ್ರ ಬಗ್ಗೆ ಬಹಳ ಖುಷಿಯಾಗಿದೆ. “ಇದೊಂದು ಒಳ್ಳೆಯ ಕಮರ್ಷಿಯಲ್ ಚಿತ್ರ. ಮೂವರು ನಾಯಕಿಯರು, ಐವರು ವಿಲನ್‌ಗಳು, ಹೊಡೆದಾಟ ಎಲ್ಲವೂ ಇದೆ. ನಮ್ಮ ನಿರ್ದೇಶಕರು ಏನು ಹೇಳಿದರೋ, ಅದರಂತೆ ಚಿತ್ರ ಮಾಡಿದ್ದಾರೆ. ಅವರು ಹೇಳಿದ ಬಜೆಟ್‌ಗಿಂತ ಐದು ಪಟ್ಟು ಹೆಚ್ಚಾದರೂ, ಚಿತ್ರವನ್ನು ನೀಟ್ ಆಗಿ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದರು.
ಚಿತ್ರದಲ್ಲಿ ಒಂದು ಪಾತ್ರ ಮಾಡಿರುವ ಸಂಜನಾಗೆ ನಿರ್ಮಾಪಕ ಫೋನ್ ಮಾಡಿ ಒಂದು ಪಾತ್ರ ಮಾಡುತ್ತೀರಾ ಎಂದು ಕೇಳಿದಾಗ, ರಾಂಗ್ ನಂಬರ್ ಅಂತ ಫೋನ್ ಇಟ್ಟರಂತೆ. “ಆ ನಂತರ ಅನಿರುದ್ಧ್ ಫೋನ್ ಮಾಡಿ, ಚಿತ್ರದ ಬಗ್ಗೆ ಹೇಳಿದರು. ಈ ಬಾರಿ ನಿರ್ಮಾಪಕರು ಮತ್ತು ನಿರ್ದೇಶಕರು ಒಟ್ಟಿಗೆ ಬಂದು ಹೇಳಿದರು. ನನ್ನದು ನಾಯಕನನ್ನು ಪ್ರೇರೇಪಿಸುವ ಪಾತ್ರ. ಸೆಕೆಂಡ್ ಹಾಫ್ನಲ್ಲಿ ಬರುತ್ತೇನೆ. ಚಿತ್ರದಲ್ಲಿ ನಟಿಸಿದ್ದು ಒಂದೊಳ್ಳೆಯ ಅನುಭವ’ ಎಂದು ಸಂಜನಾ ಖುಷ್ ಆಗುವಲ್ಲಿ ಪತ್ರಿಕಾಗೋಷ್ಠಿ ಮುಗಿಯಿತು.