ಕೊಟ್ಟಾರಚೌಕಿ: ಪ್ರತೀ ಬಾರಿ ಸಣ್ಣ ಮಳೆ ಬಂದಲೂ ಕೊಟ್ಟಾರಚೌಕಿ ಪ್ರದೇಶ ಮುಳುಗಡೆಯಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಇದಕ್ಕೆ ಪ್ರಧಾನ ಕಾರಣ 21 ಅಡಿಗಳಷ್ಟು ವಿಸ್ತಾರವಾಗಿದ್ದ ರಾಜಕಾಲುವೆ ಈಗ ಐದಾರು ಅಡಿಗಳಿಗೆ ಸೀಮಿತವಾಗಿರುವುದು.
ದೇರೆಬೈಲ್ ಉತ್ತರ (17), ಬಂಗ್ರ ಕೂಳೂರು (16) ವಾರ್ಡ್‌ಗಳ ಎತ್ತರದ ಪ್ರದೇಶವಾದ ಶ್ರೀ ರಾಜರಾಜೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನ ಭಾಗದಿಂದ ಇಳಿದು ಬರುವ ಮಳೆನೀರು ಕೊಟ್ಟಾರ ಚೌಕಿಯ ಜೆ.ಬಿ. ಲೋಬೋ ಪ್ರದೇಶದ ಮೂಲಕ ಹರಿದು ಫೋರ್ತ್ ಮೈಲ್ ಹೊಳೆಗೆ ಹೋಗಬೇಕಿದೆ. ಆದರೆ ಈ ಭಾಗದಲ್ಲಿ ಕೆಲವು ಕಡೆ ರಾಜಕಾಲುವೆ ಎಲ್ಲಿದೆ ಎಂಬುದೇ ತಿಳಿಯುವುದಿಲ್ಲ.
ಕೆಲವೆಡೆ ರಾಜಕಾಲುವೆ ಮೇಲೆಯೇ ಮಣ್ಣು ತುಂಬಿಸಿ ಕಟ್ಟಡ ಕಟ್ಟಲಾಗಿದೆ. ನೇರವಾಗಿರಬೇಕಿದ್ದ ರಾಜಕಾಲುವೆ ಓರೆಕೋರೆಯಾಗಿದ್ದು, ಮಳೆನೀರು ಸರಿಯಾಗಿ ಹರಿಯುತ್ತಿಲ್ಲ. ಕೂಳೂರು ಫೋರ್ತ್ ಮೈಲ್‌ನ ರಾಜಕಾಲುವೆಗಳಲ್ಲಿ ಹೂಳು, ಗಿಡಗಂಟಿ ತುಂಬಿದೆ. ಪೂರ್ವ ಭಾಗದಲ್ಲಿ ಕಾವೂರು, ಮುಲ್ಲಕಾಡು, ಕೂಳೂರು ಪ್ರದೇಶದಿಂದ ಬರುವ ಮಳೆ ನೀರು ಫೋರ್ತ್ ಮೈಲ್ ಬಳಿ ಒಟ್ಟು ಸೇರುವಲ್ಲಿ ಖಾಸಗಿ ಜಾಗದ ಜತೆಗೆ ಸರಕಾರಿ ಜಾಗದಲ್ಲೂ ಮಣ್ಣು ತುಂಬಿ ಸಮತಟ್ಟುಗೊಳಿಸಲಾಗಿದೆ. ಹೀಗಾಗಿ ರಾಜಕಾಲುವೆ ಕಿರಿದಾಗಿದೆ.
ಇಲ್ಲಿಂದ ಮಳೆ ನೀರು ದೂರದ ಪಡ್ಡೋಡಿ ಅಣೆಕಟ್ಟು ಸಮೀಪ ಫಲ್ಗುಣಿ ನದಿಗೆ ಸೇರುತ್ತದೆ. ಕೊಟ್ಟಾರಚೌಕಿ ಪ್ರದೇಶದಲ್ಲಿ ಈ ಹಿಂದೆ ಇದ್ದ ಖಾಸಗಿ ಗದ್ದೆಗಳ ಜಾಗದಲ್ಲಿ ಕಟ್ಟಡಗಳು ತಲೆ ಎತ್ತಿವೆ. ಮಳೆ ನೀರು ಇಂಗಲು ಅವಕಾಶ ಇಲ್ಲ. ಬಡಾವಣೆ ನಿರ್ಮಿಸುವಾಗ ಮಳೆನೀರು ಹರಿಯಲು ಸೂಕ್ತ ಕ್ರಮ ಅನುಸರಿಸಲಾಗಿಲ್ಲ. ರಾಜಕಾಲುವೆಯಲ್ಲಿ ತ್ಯಾಜ್ಯ ನೀರು ಕಾವೂರು ಮುಲ್ಲಕಾಡಿನ ಎಸ್‌ಟಿಪಿ ಸಂಸ್ಕರಣ ಘಟಕದಿಂದ ಕೆಲವು ಬಾರಿ ತ್ಯಾಜ್ಯ ನೀರನ್ನು ವಿವಿಧ ಕಾರಣಗಳಿಗಾಗಿ ಸಂಸ್ಕರಿಸದೆ ರಾಜಕಾಲುವೆಗೆ ಬಿಡಲಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಇದೆ. ಇಲ್ಲೂ ತೋಡುಗಳಲ್ಲಿ ಗಿಡಗಂಟಿ ಬೆಳೆದಿದೆ. ಕೂಳೂರು ರಾಜಕಾಲುವೆಯಲ್ಲಿ ಹೂಳಿನ ಜತೆಗೆ ಕಳೆ ಬೆಳೆದಿದೆ. ಮಳೆಗಾಲಕ್ಕೆ ಮುನ್ನ ಹೂಳು ತೆಗೆದು ಸ್ವಚ್ಛಗೊಳಿಸುವುದು ಮಾತ್ರ ಪರಿಹಾರ ಎಂಬುದು ಸ್ಥಳೀಯ ನಿವಾಸಿಯೊಬ್ಬರ ಅನಿಸಿಕೆ.
ಆದರೆ ಇದಕ್ಕಾಗಿ ಅಂದಾಜು 5 ಕೋ.ರೂ.ಗಳ ಯೋಜನಾ ಪಟ್ಟಿ ತಯಾರಿಸಲಾಗಿತ್ತಾದರೂ ಇದುವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಮಾಲೆಮಾರ್‌ನಲ್ಲಿ (ದೇರೆಬೈಲ್ ಪೂರ್ವ 23) ಹರಿದು ಬರುವ ನೀರು ಹೆದ್ದಾರಿಯ ಪೂರ್ವಕ್ಕಿರುವ ರಾಜ ಕಾಲುವೆಯಲ್ಲಿ ಹರಿದು ಫೋರ್ತ್ ಮೈಲ್ ರಾಜಕಾಲುವೆಯ ಸಂಪರ್ಕ ಪಡೆಯುತ್ತದೆ. ಈ ಕಾಲುವೆ ಹೆಚ್ಚುಕಮ್ಮಿ ಸುಸ್ಥಿತಿಯಲ್ಲಿದ್ದರೂ ಕುಡಿಯುವ ನೀರಿನ ಪೈಪ್‌ಲೈನನ್ನು ಈ ರಾಜಕಾಲುವೆ ಮೂಲಕ ಹಾಕಲಾಗಿದೆ. ಹೀಗಾಗಿ ಹೆಚ್ಚಿನ ದುರಸ್ತಿ, ಹೂಳು ತೆಗೆಯಲು ಸಮಸ್ಯೆಯಾಗಿದೆ.