ಮುಂಬಯಿ: ಮಹಾರಾಷ್ಟ್ರದಲ್ಲಿರುವ ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ಗಳನ್ನು ಮೇ 3ರೊಳಗೆ ತೆರವುಗೊಳಿಸಬೇಕೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ನೀಡಿರುವ ಅಂತಿಮ ಗಡುವು ಮುಗಿದಿದ್ದು. ಈ ಹಿನ್ನೆಲೆಯಲ್ಲಿ ಬುಧವಾರ(ಮೇ 04)ದಿಂದ ಮಸೀದಿಗಳು ಇರುವ ಪ್ರಾಂತ್ಯಗಳಲ್ಲಿ ಆಜಾನ್ ಜೋರಾಗಿ ಕೇಳಿಸಿದರೆ, ಆ ಪ್ರಾಂತ್ಯದ ಹಿಂದೂಗಳು ಜೋರಾಗಿ ಹನುಮಾನ್ ಚಾಲೀಸಾ ಮೊಳಗಿಸಿ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ:ಉತ್ತರಪ್ರದೇಶ: ಅತ್ಯಾಚಾರದ ದೂರು ದಾಖಲಿಸಲು ಠಾಣೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ!
ಲೌಡ್ ಸ್ಪೀಕರ್ ವಿವಾದದ ನಡುವೆಯೇ ಮಹಾರಾಷ್ಟ್ರದ ಪರ್ಭಾನಿ, ಉಸ್ಮಾನಾಬಾದ್, ಹಿಂಗೋಲಿ, ಜಲ್ನಾ, ನಾಂದೇಡ್, ನಂದುರ್ಬಾರ್, ಶಿರಡಿ ಹಾಗೂ ಶ್ರೀರಾಮ್ ಪುರ್ ಪ್ರದೇಶದಲ್ಲಿ ಆಜಾನ್ ವೇಳೆ ಲೌಡ್ ಸ್ಪೀಕರ್ ಗಳನ್ನು ಆಫ್ ಮಾಡಲಾಗಿತ್ತು. ಕೆಲವೆಡೆ ಲೌಡ್ ಸ್ಪೀಕರ್ ಧ್ವನಿಯ ಪ್ರಮಾಣ ತಗ್ಗಿಸಲಾಗಿತ್ತು ಎಂದು ವರದಿ ತಿಳಿಸಿದೆ.
1000ಕ್ಕೂ ಅಧಿಕ ಎಂಎನ್ ಎಸ್ ಕಾರ್ಯಕರ್ತರು ವಶಕ್ಕೆ:
ರಾಜ್ ಠಾಕ್ರೆ ಕರೆಯಂತೆ ಮಹಾರಾಷ್ಟ್ರದ ಕೆಲವೆಡೆ ಲೌಡ್ ಸ್ಪೀಕರ್ ಬಳಸಿ ಹನುಮಾನ್ ಚಾಲೀಸಾ ಮೊಳಗಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ 1000ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸರ್ಕಾರ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಈ ಕಾರಣಕ್ಕಾಗಿ ಪೊಲೀಸರ ರಜೆಯನ್ನು ರದ್ದುಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಬಯಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ವಿವಿಧ ಪೊಲೀಸ್ ಠಾಣಾ ಪ್ರದೇಶಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.