Advertisement

ರಾಜ್‌ ಹಬ್ಬ: ವರನಟನ ಕಾದಂಬರಿ ಚಿತ್ರಗಳ ಕನ್ನಡಿ

10:12 AM Apr 26, 2019 | Lakshmi GovindaRaju |

ಇಂದು ಕನ್ನಡ ಸಿನಿ ಪ್ರೇಮಿಗಳ ಆರಾಧ್ಯ ದೈವ ವರನಟ ಡಾ.ರಾಜ್‌ಕುಮಾರ್‌ ಅವರ 91ನೇ ಹುಟ್ಟುಹಬ್ಬ. ತಮ್ಮ ಸಿನಿಮಾ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಧೀಮಂತ ನಾಯಕ. ಡಾ.ರಾಜ್‌ ತಮ್ಮ ವ್ಯಕ್ತಿತ್ವ, ಸಿನಿಮಾ, ನಡೆ-ನುಡಿ … ಹಲವು ವಿಚಾರಗಳಿಂದ ನಾಡಿಗೆ ಪ್ರೇರಣೆಯಾಗಿದ್ದಾರೆ. ಕನ್ನಡ ಸಂಸ್ಕೃತಿಗೆ ಅವರ ಕೊಡುಗೆ ಅಪಾರ. ಅವರ ಹುಟ್ಟುಹಬ್ಬದ ಅಂಗವಾಗಿ ಡಾ.ರಾಜ್‌ಕುಮಾರ್‌ ಅವರು ನಟಿಸಿದ ಕಾದಂಬರಿಯಾಧರಿತ ಸಿನಿಮಾಗಳು ಹಾಗೂ ಪರಭಾಷೆಗೆ ರೀಮೇಕ್‌ ಆದ ಅವರ ಚಿತ್ರಗಳ ಬಗೆಗಿನ ಕಿರುಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Advertisement

ಕನ್ನಡ ಚಿತ್ರರಂಗದ ಮೊದಲ ಕಾದಂಬರಿ ಆಧಾರಿತ ಚಿತ್ರ “ಕರುಣೆಯೇ ಕುಟುಂಬದ ಕಣ್ಣು’ … ಡಾ. ರಾಜಕುಮಾರ್‌ ಅವರ ಕೊನೆಯ ಚಿತ್ರ “ಶಬ್ಧವೇಧಿ’ … ವಿಶೇಷ ನೋಡಿ, ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರದಲ್ಲಿ ಡಾ. ರಾಜಕುಮಾರ್‌ ಅವರು ಅಭಿನಯಿಸಿದ್ದರು. ಇನ್ನು ಡಾ. ರಾಜಕುಮಾರ್‌ ಅವರ ಕೊನೆಯ ಚಿತ್ರವೂ ಕಾದಂಬರಿಯನ್ನಾಧರಿಸಿದ್ದಾಗಿತ್ತು.

ಹೀಗೆ 1962ರಿಂದ 2000ದವರೆಗೆ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಕಾದಂಬರಿ ಆಧಾರಿತ ಚಿತ್ರಗಳು ಬಿಡುಗಡೆಯಾಗಿವೆ. ಅದೆಷ್ಟೋ ನಿರ್ದೇಶಕರು ಮತ್ತು ಕಲಾವಿದರು ಕಾದಂಬರಿಯನ್ನಾಧರಿಸಿ ಚಿತ್ರ ಮಾಡಿದ್ದಾರೆ. ಅಷ್ಟೊಂದು ಹೆಸರುಗಳ ಮಧ್ಯೆ ಡಾ. ರಾಜಕುಮಾರ್‌ ಮೊದಲ ಸ್ಥಾನ ಪಡೆಯುತ್ತಾರೆ. ಹೇಗೆ ಎಂದರೆ, ಡಾ. ರಾಜಕುಮಾರ್‌ ಅವರೊಬ್ಬರೇ 25ಕ್ಕೂ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದು ಬರೀ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ವಿಶ್ವ ಚಿತ್ರರಂಗದಲ್ಲೇ ಒಂದು ಅಪರೂಪದ ದಾಖಲೆ. ಸುಮ್ಮನೆ ನೋಡಿ, ಜಗತ್ತಿನ ಯಾವ ಒಂದು ಚಿತ್ರರಂಗದಲ್ಲೂ ಯಾವೊಬ್ಬ ನಟ, ಇಷ್ಟೊಂದು ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿರಲಾರ. ಆ ದಾಖಲೆ ಮತ್ತು ಹೆಗ್ಗಳಿಕೆ ಡಾ. ರಾಜಕುಮಾರ್‌ ಅವರ ಹೆಸರಿನಲ್ಲಿದೆ.

ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸುವ ಮೂಲಕ ಬರೀ ಚಿತ್ರರಂಗಕ್ಕಷ್ಟೇ ಅಲ್ಲ, ಸಾಹಿತ್ಯ ಕ್ಷೇತ್ರದಲ್ಲೂ ಡಾ. ರಾಜಕುಮಾರ್‌ ಪರೋಕ್ಷ ಸೇವೆ ಸಲ್ಲಿಸಿದ್ದಾರೆ ಎಂದರೆ ತಪ್ಪಿಲ್ಲ. ಇಷ್ಟಕ್ಕೂ ಡಾ. ರಾಜಕುಮಾರ್‌ ಅವರು ಯಾವ್ಯಾವ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಆ ಚಿತ್ರಗಳ ಹೆಚ್ಚುಗಾರಿಕೆ ಏನು ಎಂಬುದನ್ನು ಕೆಣಕುತ್ತಾ ಹೋದಂತೆ, ಹಲವು ವಿಷಯಗಳು ಸಿಗುತ್ತವೆ. ಆ ಬಗ್ಗೆ ಒಂದು ಮಾಹಿತಿ ..

Advertisement

ಕರುಣೆಯೇ ಕುಟುಂಬದ ಕಣ್ಣು (1962): ಕೃಷ್ಣಮೂರ್ತಿ ಪುರಾಣಿಕರ “ಧರ್ಮ ದೇವತೆ’ ಕಾದಂಬರಿಯನ್ನಾಧರಿಸಿದ ಚಿತ್ರ.

ಭೂದಾನ (1962): ಪರೋಕ್ಷವಾಗಿ ಶಿವರಾಮ ಕಾರಂತರ “ಚೋಮನ ದುಡಿ’ ಕಾದಂಬರಿಯನ್ನಾಧರಿಸಿದೆ. “ಚೋಮನ ದುಡಿ’ ಕಾದಂಬರಿಯಿಂದ ಸ್ಫೂರ್ತಿ ಪಡೆದ ಕಥೆ ಹೊಂದಿದೆ ಎಂದು ಖುದ್ದು ಆ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಎಸ್‌.ಕೆ. ಭಗವಾನ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಕಥೆಯ ಹಕ್ಕುಗಳನ್ನು ಪಡೆಯುವುದಕ್ಕೆ ಕಾರಂತರ ಹತ್ತಿರ ಹೋದ ಸಂದರ್ಭದಲ್ಲಿ ಕಾರಂತರು, ಹಕ್ಕುಗಳನ್ನು ಕೊಡುವುದಕ್ಕೆ ಆಗುವುದಿಲ್ಲ ಎಂದರಂತೆ. ಬೇಕಾದರೆ ಆ ಕಥೆಯನ್ನು ಮೂಲವಾಗಿಟ್ಟು ಸಿನಿಮಾ ಮಾಡಿ ಎಂದು ಸಲಹೆ ಕೊಟ್ಟರಂತೆ.

ಕುಲವಧು (1963): ಕೃಷ್ಣಮೂರ್ತಿ ಪುರಾಣಿಕರ ಜನಪ್ರಿಯ ಕಾದಂಬರಿಯಾದ “ಕುಲವಧು’ವನ್ನಾಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ.

ಚಂದವಳ್ಳಿಯ ತೋಟ (1964): ತ.ರಾ. ಸುಬ್ಬರಾವ್‌ ಅವರ “ಚಂದವಳ್ಳಿಯ ತೋಟ’ ಕಾದಂಬರಿಯನ್ನಧರಿಸಿದೆ.

ಸಂಧ್ಯಾ ರಾಗ (1966): ಅ.ನ. ಕೃಷ್ಣರಾಯರ ಬಹಳ ಜನಪ್ರಿಯವಾದ ಕಾದಂಬರಿಯಾದ “ಸಂಧ್ಯಾ ರಾಗ’ವನ್ನಧರಿಸಿ ಚಿತ್ರ ಮಾಡಲಾಗಿದೆ.

ಚಕ್ರತೀರ್ಥ (1967): ತ.ರಾ. ಸುಬ್ಬರಾವ್‌ ಅವರ ಇನ್ನೊಂದು ಜನಪ್ರಿಯ ಕಾದಂಬರಿ “ಚಕ್ರತೀರ್ಥ’.

ಸರ್ವಮಂಗಳಾ (1968): ಚದುರಂಗ ಅವರು ತಮ್ಮದೇ ಜನಪ್ರಿಯವಾದ ಕಾದಂಬರಿಯಾದ “ಸರ್ವಮಂಗಳ’ ವನ್ನು ಚಿತ್ರ ಮಾಡಿದ್ದಾರೆ.

ಹಣ್ಣೆಲೆ ಚಿಗುರಿದಾಗ (1968): ಖ್ಯಾತ ಬರಹಗಾರ್ತಿ ತ್ರಿವೇಣಿ “ಸರ್ವಮಂಗಳಾ’ ಅವರ ಅದೇ ಹೆಸರಿನಲ್ಲಿ ಸಿನಿಮಾ ಮಾಡಲಾಯಿತು.

ಉಯ್ಯಾಲೆ (1969): ಚದುರಂಗ ಅವರ “ಉಯ್ಯಾಲೆ’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಚಿತ್ರ ಮಾಡಲಾಗಿದೆ.

ಮಾರ್ಗದರ್ಶಿ (1969): ತ.ರಾ.ಸು ಅವರ ‌ “ಮಾರ್ಗದರ್ಶಿ’ ಕಾದಂಬರಿ ಆಧರಿಸಿದ ಚಿತ್ರ.

ಪುನರ್ಜನ್ಮ (1969): ತ.ರಾ.ಸು ಅವರ “ಪುನರ್ಜನ್ಮ’ ಕಾದಂಬರಿಯನ್ನಾಧರಿಸಿದೆ.

ಸಿಪಾಯಿ ರಾಮು (1972): ಕಾದಂಬರಿಕಾರ್ತಿ ನುಗ್ಗೇಹಳ್ಳಿ ಪಂಕಜ ಅವರ “ಮತ್ತೆ ಬರಲೆ ಯಮುನೆ’ ಎಂಬ ಕಾದಂಬರಿಯನ್ನಾಧರಿಸಿದೆ.

ಬಂಗಾರದ ಮನುಷ್ಯ (1972):: ಟಿ.ಕೆ. ರಾಮರಾವ್‌ ಅವರ ಅದೇ ಹೆಸರಿನ ಕಾದಂಬರಿಯನ್ನಾಧರಿಸಿದ ಈ ಚಿತ್ರ ಮಾಡಲಾಗಿದೆ.

ಎರಡು ಕನಸು (1974): ವಾಣಿ ಅವರು ರಚಿಸಿದ್ದ ಕೌಟುಂಬಿಕ ಹಿನ್ನೆಲೆಯ “ಎರಡು ಕನಸು’ ಎಂಬ ಕಾದಂಬರಿಯನ್ನಾಧರಿಸಿದೆ.

ಮಯೂರ (1975): ಕದಂಬ ವಂಶದ ರಾಜ ಮಯೂರ ವರ್ಮನ ಸಾಹಸ ಮತ್ತು ಬದುಕನ್ನು ಚಿತ್ರಿಸುವ ಈ ಚಿತ್ರವು ದೇವುಡು ನರಸಿಂಹಶಾಸ್ತ್ರಿ ಅವರ ಕಾದಂಬರಿಯನ್ನಾಧರಿಸಿದ ಚಿತ್ರ.

ಗಿರಿ ಕನ್ಯೆ (1977): “ಗಿರಿ ಕನ್ಯೆ’ ಚಿತ್ರವು ಭಾರತೀಸುತ ಅವರ “ಗಿರಿಕನ್ಯೆ’ ಕಾದಂಬರಿಯನ್ನಾಧರಿಸಿದೆ.

ಸನಾದಿ ಅಪ್ಪಣ್ಣ (1977): ಕೃಷ್ಣಮೂರ್ತಿ ಪುರಾಣಿಕರ “ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ’ ಎಂಬ ಕಾದಂಬರಿಯನ್ನಾಧರಿಸಿದೆ.

ಹುಲಿಯ ಹಾಲಿನ ಮೇವು (1979): ಭಾರತೀಸುತ ಅವರ “ಹುಲಿಯ ಹಾಲಿನ ಮೇವು’ ಕಾದಂಬರಿಯನ್ನಾಧರಿಸಿದೆ.

ಹೊಸ ಬೆಳಕು (1982): ವಾಣಿ ಅವರ “ಹೊಸ ಬೆಳಕು’ ಕಾದಂಬರಿಯನ್ನಾಧರಿಸಿದೆ.

ಕಾಮನ ಬಿಲ್ಲು (1984): ಅಶ್ವಿ‌ನಿ ಅವರ “ಮೃಗತೃಷ್ಣ’ ಕಾದಂಬರಿಯನ್ನಾಧರಿಸಿದೆ.

ಸಮಯದ ಗೊಂಬೆ (1984): ಚಿತ್ರಲೇಖ ಅವರ ಸಮಯದ ಗೊಂಬೆ ಕಾದಂಬರಿಯನ್ನು ತೆರೆಗೆ ತರಲಾಗಿದೆ.

ಧ್ರುವತಾರೆ (1985): ವಿಜಯ ಸಾಸನೂರು ಅವರ “ಅಪರಂಜಿ’ ಎಂಬ ಕಾದಂಬರಿಯನ್ನಾಧರಿಸಿದೆ.

ಜ್ವಾಲಾಮುಖಿ (1985): ವಿಜಯ್‌ ಸಾಸನೂರ್‌ ಅವರ “ಜ್ವಾಲಾಮುಖಿ’ ಕಾದಂಬರಿ ಆಧಾರಿತ ಚಿತ್ರ.

ಅನುರಾಗ ಅರಳಿತು (1986): ಎಚ್‌.ಜಿ. ರಾಧಾದೇವಿ ಅವರ “ಅನುರಾಗದ ಅಂತಃಪುರ’ ಕಾದಂಬರಿಯನ್ನಾಧರಿಸಿದೆ.

ಶ್ರುತಿ ಸೇರಿದಾಗ (1987): ಕುಮುದಾ ಅವರ “ಪಲಕು ಪಲಕು ಒಲವು’ ಕಾದಂಬರಿಯನ್ನಾಧರಿಸಿದೆ.

ಜೀವನ ಚೈತ್ರ (1992): ವಿಶಾಲಾಕ್ಷಿ ದಕ್ಷಿಣಮೂರ್ತಿ ಅವರ “ವ್ಯಾಪ್ತಿ ಪ್ರಾಪ್ತಿ’ ಕಾದಂಬರಿಯನ್ನಾಧರಿಸಿದೆ.

ಆಕಸ್ಮಿಕ (1993): ಖ್ಯಾತ ಕಾದಂಬರಿಕಾರ ತ.ರಾ. ಸುಬ್ಬರಾವ್‌ ವಿರಚಿತ “ಆಕಸ್ಮಿಕ’, “ಅಪರಾಧಿ’ ಮತ್ತು “ಪರಿಣಾಮ’ ಎಂಬ ಮೂರು ಕಾದಂಬರಿಗಳನ್ನಾಧರಿಸಿ ನಾಗಾಭರಣರು ನಿರ್ದೇಶಿಸಿದ ಚಿತ್ರ “ಆಕಸ್ಮಿಕ’.

ಶಬ್ಧವೇಧಿ (2000): “ಶಬ್ಧವೇಧಿ’ ಚಿತ್ರವು ಡಾ. ರಾಜಕುಮಾರ್‌ ಅಭಿನಯಿಸಿದ ಕಡೆಯ ಕಾದಂಬರಿ ಆಧಾರಿತ ಚಿತ್ರವಷ್ಟೇ ಅಲ್ಲ, ಅದೇ ಡಾ. ರಾಜಕುಮಾರ್‌ ಅವರ ಕೊನೆಯ ಚಿತ್ರವೂ ಆಗಿ ಹೋಯಿತು. ವಿಜಯ್‌ ಸಾಸನೂರ್‌ ಅವರ “ಶಬ್ಧವೇಧಿ’ ಕಾದಂಬರಿಯನ್ನಾಧರಿಸಿದ ಈ ಚಿತ್ರವನ್ನು ನಿರ್ದೇಶಿಸಿದವರು ಎಸ್‌. ನಾರಾಯಣ್‌.

ಪರಭಾಷೆಗಳಿಗೆ ರೀಮೇಕ್‌ ಆದ ಡಾ. ರಾಜಕುಮಾರ್‌ ಅವರ ಚಿತ್ರಗಳು
-ಅನುರಾಗ ಅರಳಿತು – ಮನ್ನನ್‌ (ತಮಿಳು – ರಜನಿಕಾಂತ್‌)
-ಅನುರಾಗ ಅರಳಿತು – ಘರಾನಾ ಮೊಗಡು (ತೆಲುಗು – ಚಿರಂಜೀವಿ)
-ಅನುರಾಗ ಅರಳಿತು – ಲಾಡ್ಲಾ (ಹಿಂದಿ – ಅನಿಲ್‌ ಕಪೂರ್‌)
-ನಾ ನಿನ್ನ ಮರೆಯಲಾರೆ – ಪುದು ಕವಿತೈ (ತಮಿಳು – ರಜನಿಕಾಂತ್‌)
-ನಾ ನಿನ್ನ ಮರೆಯಲಾರೆ – ಪ್ಯಾರ್‌ ಕಿಯಾ ಹೈ ಪ್ಯಾರ್‌ ಕರೇಂಗೆ (ಹಿಂದಿ – ಅನಿಲ್‌ ಕಪೂರ್‌)
-ತಾಯಿಗೆ ತಕ್ಕ ಮಗ – ಮೇ ಇಂತಖಾಮ್‌ ಲೂಂಗ (ಹಿಂದಿ – ಧರ್ಮೇಂದ್ರ)
-ತಾಯಿಗೆ ತಕ್ಕ ಮಗ – ಪುಲಿಬಿಡ್ಡ (ತೆಲುಗು – ಕೃಷ್ಣಂರಾಜು)
-ಎರಡು ಕನಸು – ಪೂಜಾ (ತೆಲುಗು – ರಾಮಕೃಷ್ಣ)
-ಪ್ರೇಮದ ಕಾಣಿಕೆ – ಪೊಲ್ಲಾದವನ್‌ (ತಮಿಳು – ರಜನಿಕಾಂತ್‌)
-ಶಂಕರ್‌ ಗುರು – ಮಹಾನ್‌ (ಹಿಂದಿ – ಅಮಿತಾಭ್‌ ಬಚ್ಚನ್‌)
-ಶಂಕರ್‌ ಗುರು – ತ್ರಿಶೂಲಂ (ತಮಿಳು – ಶಿವಾಜಿ ಗಣೇಶನ್‌)
-ಶಂಕರ್‌ ಗುರು – ಕುಮಾರ ರಾಜ (ತೆಲುಗು – ಕೃಷ್ಣ)
-ಗಂಧದ ಗುಡಿ – ಕರ್ತವ್ಯ (ಹಿಂದಿ – ಧರ್ಮೇಂದ್ರ)
-ಬಾಳು ಬೆಳಗಿತು – ಹಮ್‌ಶಕಲ್‌ (ಹಿಂದಿ – ರಾಜೇಶ್‌ ಖನ್ನಾ)
-ಬಾಳು ಬೆಳಗಿತು – ಊರುಕ್ಕು ಉಳೈಪ್ಪಾವನ್‌ (ತಮಿಳು – ಎಂ.ಜಿ. ರಾಮಚಂದ್ರನ್‌)
-ಬಾಳು ಬೆಳಗಿತು – ಮಂಚಿವಾಡು (ತೆಲುಗು – ಅಕ್ಕಿನೇನಿ ನಾಗೇಶ್ವರ ರಾವ್‌)
-ಬೀದಿ ಬಸವಣ್ಣ – ತೇಡಿ ವಂದ ಮಾಪಿಳ್ಳೆ„ (ತಮಿಳು – ಎಂ.ಜಿ. ರಾಮಚಂದ್ರನ್‌)
-ಕುಲಗೌರವ – ಕುಲಗೌರವಮ್‌ (ತೆಲುಗು – ಎನ್‌.ಟಿ. ರಾಮರಾವ್‌)
-ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ – ಶ್ರೀಕೃಷ್ಣಾ ತುಲಾಭಾರಂ (ತೆಲುಗು – ಎನ್‌.ಟಿ. ರಾಮರಾವ್‌)
-ಕಸ್ತೂರಿ ನಿವಾಸ – ಅವನ್‌ದಾನ್‌ ಮನಿದನ್‌ (ತಮಿಳು – ಶಿವಾಜಿ ಗಣೇಶನ್‌)
-ಕಸ್ತೂರಿ ನಿವಾಸ – ಶಾಂದಾರ್‌ (ಹಿಂದಿ – ಸಂಜೀವ್‌ ಕುಮಾರ್‌)
-ಗಂಗೆ ಗೌರಿ – ಗಂಗ ಗೌರಿ (ತಮಿಳು – ಜೆಮಿನಿ ಗಣೇಶನ್‌)
-ಭಕ್ತ ಕುಂಬಾರ – ಚಕ್ರಧಾರಿ (ತೆಲುಗು – ಅಕ್ಕಿನೇನಿ ನಾಗೇಶ್ವರ ರಾವ್‌)
-ಕಣ್ತೆರೆದು ನೋಡು – ಕಾವ್ಯಮೇಳ (ಮಲಯಾಳಂ – ಪ್ರೇಮ್‌ ನಜೀರ್‌)
-ಕಣ್ತೆರೆದು ನೋಡು – ದೇವಿ (ತಮಿಳು – ಮುತ್ತುರಾಮನ್‌)
-ಚಲಿಸುವ ಮೋಡಗಳು – ರಾಜಕುಮಾರ್‌ (ತೆಲುಗು – ಶೋಭನ್‌ ಬಾಬು)
-ಸನಾದಿ ಅಪ್ಪಣ್ಣ – ಸನ್ನಾಯಿ ಅಪ್ಪಣ್ಣ (ತೆಲುಗು – ಶೋಭನ್‌ ಬಾಬು)
-ಬಂಗಾರದ ಪಂಜರ – ಜಿಸ್‌ ದೇಶ್‌ ಮೇ ಗಂಗಾ ರೆಹತಾ ಹೈ (ಹಿಂದಿ – ಗೋವಿಂದ)

Advertisement

Udayavani is now on Telegram. Click here to join our channel and stay updated with the latest news.

Next