ಬೆಂಗಳೂರು: ಜೂನ್ ಮೂರನೇ ವಾರದಿಂದ ಅಕ್ಟೋಬರ್ ವರೆಗೂ ಕೊವಿಡ್ ಬರಬಹುದು ಎಂದು ಕಾನ್ಪುರ ಐಐಟಿ ವರದಿ ನೀಡಿದ್ದಾರೆ. ಈ ಹಿಂದೆ ಕೂಡ ಇವರೇ ಮಾಡಿ ವರದಿ ನೀಡಿದ್ದರು. ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅದಕ್ಕೆ ತಕ್ಕಂತೆ ಪೂರಕವಾಗಿ ಸಿದ್ದತೆ ಮಾಡಿಕೊಂಡಿದ್ದೇವೆ. ಈಗ ಬರುತ್ತಿರುವ ಕೋವಿಡ್ ಪ್ರಭೇದ ಸೌಮ್ಯ ಲಕ್ಷಣ ಇರುವುದರಿಂದ ಜನ ಸಾಮಾನ್ಯರು ಯಾವುದೇ ಆತಂಕ, ಭಯಪಡುವ ಅವಶ್ಯಕತೆಯಿಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.
ಶಾಲೆಗಳಲ್ಲಿ ಕೋವಿಡ್ ಹೆಚ್ಚಳ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆರೆಡು ಶಾಲೆಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಆ ಶಾಲಾ ಮಕ್ಕಳಿಗೆ ರಜೆ ಕೊಟ್ಟಿದ್ದಾರೆ. ಅದು ಒಂದೊ ಎರಡೋ ಶಾಲೆಯಷ್ಟೇ. ಈಗಾಗಲೇ ಸ್ಪಷ್ಟವಾದ ನಿಯಮಾವಳಿ ರೂಪಿಸಿದ್ದೇವೆ. ವಿದ್ಯಾರ್ಥಿಗಳು ಬರುವಾಗ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಚೆಕ್ ಮಾಡ್ತಿದ್ದೇವೆ. ಶಾಲೆಗಳಲ್ಲಿ ಎಲ್ಲಾ ನಿಯಮ ಪಾಲನೆ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಚಿವ ಸುಧಾಕರ್, ಕಾಂಗ್ರೆಸ್ ನಾಯಕರ ನಡೆ ನಾಚಿಕೆ ತರಿಸುವಂತದ್ದು. ಒಂದು ಕಡೆ ಸಂವಿಧಾನದ ಬಗ್ಗೆ ಸಾಕಷ್ಟು ಭಾಷಣ ಮಾಡುತ್ತಾರೆ. ಇನ್ನೊಂದು ಕಡೆ ಸಂವಿಧಾನಕ್ಕೆ ಅಗೌರವ ತೋರುವ ಕೆಲಸ ಮಾಡುತ್ತಾರೆ. ಈ ಹಿಂದೆ ಮಾಜಿ ಪ್ರಧಾನಿ ಪಿವಿ ನರಂಸಿಹ ರಾವ್, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿಯವರು ವಿರುದ್ದವೂ ವಿಚಾರಣೆ ನಡೆದಿತ್ತು. ನಮ್ಮ ಖರ್ಗೆಯವರ ವಿಚಾರಣೆ ನಡೆದಾಗ ಯಾರು ಚಕಾರ ಎತ್ತಿಲ್ಲ. ಆಗ ಯಾರು ಪ್ರತಿಭಟನೆಗೆ ಮುಂದಾಗಿಲ್ಲ ಎಂದರು.
ಇದನ್ನೂ ಓದಿ:ಭಾರತದಲ್ಲಿ 24 ಗಂಟೆಯಲ್ಲಿ 12,213 ಕೋವಿಡ್ ಪ್ರಕರಣ ದೃಢ; ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ
ಕಾಂಗ್ರೆಸ್ ನಾಯಕರು ಮಾಡುತ್ತಿರುವುದು ಸರಿಯಲ್ಲ. ಈ ರೀತಿ ಮಾಡುವುದರಿಂದ ತಪ್ಪು ಸಂದೇಶ ಹೋಗುತ್ತಿದೆ. ಏನೇ ಇದ್ದರೂ ವಿಚಾರಣೆಯಾಗಲಿ, ಸತ್ಯ ಹೊರಗಡೆ ಬರಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಸುಧಾಕರ್ ಟಾಂಗ್ ನೀಡಿದರು.