ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು. ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಲು ಸಾರ್ವಜನಿಕರು ಮುಂದೆ ಬರಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಶನಿವಾರ ಕೋವಿಡ್ -19 ಹಾಗೂ ಪ್ರವಾಹ ಪರಿಸ್ಥಿತಿ ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರು ವೈಯಕ್ತಿಕ ಸ್ವತ್ಛತೆ ಕಾಪಾಡಿಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಕರವಸ್ತ್ರ, ಟಿಶ್ಯೂ ಪೇಪರ್ ಬಳಸಬೇಕು. ಕೈ ಸ್ವತ್ಛಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈ ತೊಳೆದುಕೊಳ್ಳಬೇಕು. ಸಾಮಾಜಿಕ ಸಮೂಹ ಗುಂಪು ಸೇರದಂತೆ ಜನರಲ್ಲಿ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ ಮಾತನಾಡಿ, ಲಾಕ್‌ಡೌನ್ ವೇಳೆ ಗ್ರಾಮಗಳಿಗೆ ಹಿಂತಿರುಗಿದ ಜನರಿಗೆ ನರೇಗಾದಡಿ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.
ಡಿಎಚ್‌ಒ ಮಾತನಾಡಿ, ಜಿಲ್ಲೆಯ ಮುದ್ನಾಳದಲ್ಲಿರುವ ಕೋವಿಡ್ ಜಿಲ್ಲಾ ಆಸ್ಪತ್ರೆ 297 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಅದರಲ್ಲಿ 132 ಆಕ್ಸಿಜನ್ ಹಾಸಿಗೆ, 15 ಹೈ ಡಿಪೆಂಡೆನ್ಸಿ ಯುನಿಟ್, 15 ಐಸಿಯು ಹಾಸಿಗೆ, 14 ವೆಂಟಿಲೇಟರ್, ಶೀಘ್ರದಲ್ಲೆ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್‌ನ್ನು ಉದ್ಘಾಟಿಸಲಾಗುವುದು. 140 ಜಂಬೊ ಆಕ್ಸಿಜನ್ ಸಿಲಿಂಡರ್ಸ್ ಇವೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ತಜ್ಞ ವೈದ್ಯರಕೊರತೆ ಇದ್ದು, ಶೀಘ್ರದಲ್ಲೇ ಐವರು ವೈದ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸಿದರು.
ಪ್ರೊಬೇಷnರಿ ಐಎಎಸ್ ಅಧಿಕಾರಿ ಅಶ್ವಿಜಾ, ಅಪರ ಜಿಲ್ಲಾ ಧಿಕಾರಿ ಪ್ರಕಾಶ ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಡಾ| ಸೂರ್ಯಪ್ರಕಾಶ ಎಂ.ಕಂದಕೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ನಾರಾಯಣಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಸಾಜೀದ್, ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು.