ಬೆಂಗಳೂರು: ಕಳೆದೆರಡು ದಿನಗಳು ನಗರದಲ್ಲಿ ಮಿಂಚಿ ಮರೆಯಾಗುತ್ತಿದ್ದ ಮಳೆ, ಗುರುವಾರ ಆರ್ಭಟಿಸಿತು. ಪರಿಣಾಮ ನಾಲ್ಕು ಮರಗಳು ಧರೆಗುರುಳಿದವು. ಕೆಲ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿದವು. ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಅರಬ್ಬಿ ಸಮುದ್ರದ ಆಗ್ನೇಯದಲ್ಲಿ ಉಂಟಾದ ತೀವ್ರ ವಾಯುಭಾರ ಕುಸಿತದ ಪರಿಣಾಮ ಗುರುವಾರ ಕೆಂಗೇರಿ, ರಾಜರಾಜೇಶ್ವರಿ ನಗರ, ಹೆಮ್ಮಿಗೆಪುರ, ಕಗ್ಗಲಿಪುರ, ಸಾರಕ್ಕಿ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಸುರಿಯಿತು.
ಈ ಮಧ್ಯೆ ಯಲಹಂಕ ನ್ಯೂಟೌನ್, ಶೇಷಾದ್ರಿಪುರ ರಸ್ತೆಯ ನಟರಾಜ್ ಚಿತ್ರಮಂದಿರ ಹತ್ತಿರ, ಪೀಣ್ಯ ಕೈಗಾರಿಕಾ ಪ್ರದೇಶ, ಮಲ್ಲತ್ತಹಳ್ಳಿಯಲ್ಲಿ ತಲಾ ಒಂದು ಮರ ನೆಲಕಚ್ಚಿವೆ. ರಾಜಾಜಿನಗರ, ಮಹಾಗಣಪತಿ ನಗರ, ಮಲ್ಲೇಶ್ವರ ಸೇರಿದಂತೆ ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ, ಕೆಲ ಬಡಾವಣೆಗಳಲ್ಲಿ ಕತ್ತಲೆ ಆವರಿಸಿತು. ಪ್ರಮುಖ ಜಂಕ್ಷನ್‌ಗಳಲ್ಲಿ ನೀರು ಆವರಿಸಿದ್ದರಿಂದ ವಾಹನಗಳ ಸಂಚಾರ ಮಂದಗತಿಯಲ್ಲಿತ್ತು.
ತಗ್ಗುಪ್ರದೇಶಗಳಿಗೆ ನೀರು ನುಗ್ಗಿತು. ಆರ್.ಆರ್. ನಗರ, ಕೆಂಗೇರಿ, ವಿಧಾನಸೌಧ ಸುತ್ತಮುತ್ತ, ಎಂ.ಜಿ.ರಸ್ತೆ, ಕುಮಾರಸ್ವಾಮಿ ಲೇಔಟ್, ಶಾಂತಿನಗರ, ಮೈಸೂರು ರಸ್ತೆ, ತುಮಕೂರು-ಬೆಂಗಳೂರು ರಸ್ತೆ ಸೇರಿದಂತೆ ಅಲ್ಲಲ್ಲಿ ಸಂಚಾರದಟ್ಟಣೆ ಹೆಚ್ಚಿತ್ತು.
ಎಲ್ಲೆಲ್ಲಿ ಎಷ್ಟು ಮಳೆ?: ಕೆಂಗೇರಿ 56.5 ಮಿ.ಮೀ., ಆರ್.ಆರ್. ನಗರ 41.5 ಮಿ.ಮೀ., ಹೆಮ್ಮಿಗೆಪುರ 38 ಮಿ.ಮೀ., ಕುಮಾರಸ್ವಾಮಿ ಲೇಔಟ್ 30.5 ಮಿ.ಮೀ., ಮಾಚೋಹಳ್ಳಿ 13.5 ಮಿ.ಮೀ., ವಡೇರಹಳ್ಳಿ 12.5 ಮಿ.ಮೀ., ಸಾರಕ್ಕಿ 18.5 ಮಿ.ಮೀ., ಕಗ್ಗಲೀಪುರ 15.5 ಮಿ.ಮೀ., ಕೋರಮಂಗಲ 5.5 ಮಿ.ಮೀ., ಅಗ್ರಹಾರ 10 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಅರಬ್ಬಿ ಸಮುದ್ರದ ಆಗ್ನೇಯದಲ್ಲಿ ಉಂಟಾದ ವಾಯುಭಾರ ಕುಸಿತದ ತೀವ್ರತೆ ಮುಂದುವರಿಯಲಿದ್ದು, ನಗರದಲ್ಲಿ ಶುಕ್ರವಾರ ಕೂಡ ಮಳೆ ಮುಂದುವರಿಯುವ ನಿರೀಕ್ಷೆ ಇದೆ.
-ಸುಂದರ್ ಮೇತ್ರಿ, ಹವಾಮಾನ ಇಲಾಖೆ ಅಧಿಕಾರಿ