ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಮಳೆಯ ಅಬ್ಬರ ಜೋರಾಗಿದ್ದು, ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿದ್ದಾನೆ.
ಸಿಡಿಲಿಗೆ ಬಲಿಯಾದ ರೈತನನ್ನು ಹತ್ತಳ್ಳಿ ಗ್ರಾಮದ ಧರೆಪ್ಪ ಧರ್ಮಪ್ಪ ಬಿರಾದಾರ (45) ಎಂದು ಗುರುತಿಸಲಾಗಿದೆ. ಜಾನುವಾರುಗಳಿಗೆ ಮೇವು ತರಲು ಎತ್ತಿನ ಚಕ್ಕಡಿಯಲ್ಲಿ ತೆರಳುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರೈತ ಮೃತಪಟ್ಟರೂ ಚಕ್ಕಡಿ ಎಳೆಯುತ್ತಿದ್ದ ಜೋಡೆತ್ತಿಗೆ ಯಾವುದೇ ಅಪಾಯವಾಗಿಲ್ಲ.
ಸುದ್ದಿ ತಿಳಿಯುತ್ತಲೇ ಚಡಚಣ ತಹಶೀಲ್ದಾರ ಸುರೇಶ ಚವಲರ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಪಿಎಸ್‍ಐ ಎಂ.ಎ. ಸತಿಗೌಡರ ಭೇಟಿ ನೀಡಿ ಪರಿಶೀಲಿಸಿದ್ದು, ಚಡಚಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯಪುರದಲ್ಲಿ ಸಿಡಿಲಿಗೆ ಎತ್ತು ಬಲಿ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೂಢಗಿ ಗ್ರಾಮದಲ್ಲಿ ಸಿಡಿಲಿಗೆ ರೈತರೊಬ್ಬರ ಎತ್ತು ಬಲಿಯಾಗಿದೆ. ಮಂಗಳವಾರ ಸುರಿಯುತ್ತಿದ್ದ ಮಳೆಯಲ್ಲೇ ರೂಢಗಿ ವ್ಯಾಪ್ತಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಠ್ಠಲ ಈಳಗೇರ ಎಂಬ ರೈತರಿಗೆ ಸೇರಿದ ಎತ್ತು ಸಾವಿಗೀಡಾಗಿದೆ. ಇದರಿಂದಾಗಿ ರೈತನಿಗೆ ಸುಮಾರು 60 ಸಾವಿರ ರೂ. ನಷ್ಟವಾಗಿದೆ. ಸುದ್ದಿ ತಿಳಿಯುತ್ತಲೇ ಢವಳಗಿ ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳಕ್ಕೆ ತೆರಳಿರುವ ಮುದ್ದೇಬಿಹಾಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.