ಹಾಸನ: ಕಳೆದ ನಾಲ್ಕು ದಿನಗಳಿಂದ ಸುಸೂತ್ರವಾಗಿ ಹಾಸನಾಂಬೆಯ ದರ್ಶನ ಪಡೆಯುತ್ತಿದ್ದ ಭಕ್ತರು 5 ನೇ ದಿನವಾದ ಸೋಮವಾರ ಮಳೆಯ ಕಾಟದಿಂದ ಸಂಕಷ್ಟ ಅನುಭವಿಸಿದರು. ಮಧ್ಯಾಹ್ನ 2.30 ಕ್ಕೆ ಆರಂಭವಾದ ಮಳೆ ಕೆಲಕಾಲ ಬಿಡುವು ನೀಡಿತದಾರೂ ಸಂಜೆ ಮತ್ತೆ ಆರಂಭವಾದ ಮಳೆ ರಾತ್ರಿವರೆಗೂ ಸುರಿಯುತ್ತಲೇ ಇತ್ತು.
ಸತತ ಮಳೆಯಿಂದ ಭಕ್ತರು ದೇವಾಲಯದ ಕಡೆ ಹೋಗಲೂ ಸಾಧ್ಯವಾಗಲಿಲ್ಲ. ಕಾರುಗಳಲ್ಲಿ ಮತ್ತು ಆಟೋಗಳಲ್ಲಿ ತೆರಳುವವರು ಬಿಟ್ಟರೆ ದ್ವಿಚಕ್ರ ವಾಹನಗಳಲ್ಲಿ ಹಾಗೂ ನಡಿಗೆಯಲ್ಲಿ ಭಕ್ತರು ಹಾಸನಾಂಬ ದೇವಾಲಯದತ್ತ ಹೋಗಲಾಗಿಲ್ಲ. ಮಳೆಯಿಂದಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರೂ ಪರದಾಡುವಂತಾಯಿತು. ದೇವಾಲಯದ ಸುತ್ತಮುತ್ತ ಬೀದಿ ಬದಿಯ ವ್ಯಾಪಾರಿಗಳೂ ಮಳೆಯಿಂದ ಬೇಸತ್ತು ಹೋದರು.
ಭಾನುವಾರ ರಾತ್ರಿವರೆಗೂ ಭಾರೀ ಸಂಖ್ಯೆಯಲ್ಲಿ ಭಕ್ತರು ದೇವಾಲಯದತ್ತ ಬಂದಿದ್ದರು. ಆದರೆ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಭಕ್ತರು ದೇವಾಲಯದತ್ತ ಬರಲಿಲ್ಲ. ಆದರೆ ದೇವಾಲಯಕ್ಕೆ ಬಂದ ಭಕ್ತರು ಸಲೀಸಾಗಿ ನೂಕು ನುಗ್ಗಲು ಇಲ್ಲದೆ ದೇವಿಯ ದರ್ಶನ ಪಡೆದರು.
ಮುಸ್ಲಿಮರಿಂದ ಹಾಸನಾಂಬೆ ದರ್ಶನ: ಕೆಲ ಮುಸಲ್ಮಾನರೂ ಹಾಸನಾಂಬೆಯ ದೇವಾಲಯಕ್ಕೆ ಬಂದು ಸೋಮವಾರ ದೇವಿಯ ದರ್ಶನ ಪಡೆದು. ಕೆಲ ಮುಸ್ಲಿಂ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದರು. ಗರ್ಭ ಗುಡಿಯ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿ, ಮಂಗಳಾರತಿ ಪಡೆದರು. ಕೆಲ ಪುರಷ ಮುಸಲ್ಮಾನರೂ ಆಗಮಿಸಿ ದೇವಿಯ ದರ್ಶನ ಪಡೆದರು.
ಹಾಸನಾಂಬೆಗೆ ಚಿತ್ರನಟಿ ತಾರಾ ವಿಶೇಷ ಪೂಜೆ: ಹಾಸನ, ಚಲನಚಿತ್ರ ನಟಿ ತಾರಾ ಅವರು ಕುಟುಂಬದವರೊಂದಿಗೆ ಸೋಮವಾರ ಹಾಸನಾಂಬೆಯ ದರ್ಶನ ಪಡೆದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗರ್ಭ ಗುಡಿಯಲ್ಲಿ ಕುಳಿತು ಹಾಸನಾಂಬೆಯ ಸನ್ನಿಧಿಯಲ್ಲಿ ಕೆಲಕಾಲ ಕುಳಿತು ವಿಶೇಷ ಪೂಜೆ ಸಲ್ಲಿಸಿದರು. 76 ರ ವಯೋವೃದ್ಧ ತಾಯಿ ಪುಷ್ಪಾ ಅವರೊಂದಿಗೆ ಬಾಗಿನ ಸಮೇತರಾಗಿ ಆಗಮಿಸಿದ್ದ ತಾರಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿಯೂ ಅರ್ಚನೆ ಮಾಡಿಸಿದರು. ನಂತರ ದರ್ಬಾರ್ ಗಣಪತಿ ಹಾಗೂ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಿದರು.
ಪೂಜೆ ಸಲ್ಲಿಸಿ ದೇವಾಲಯದಿಂದ ಹೊರಗೆ ಬಂದ ತಾರಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿವರ್ಷ ನಾನು ಹಾಸನಾಂಬೆ ದರ್ಶನ ಮಾಡುತ್ತಿದ್ದೇನೆ. ಕಳೆದ ವರ್ಷ ಮಾತ್ರ ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗಿರಲಿಲ್ಲ. ಹಾಸನಾಂಬೆಯ ಮೇಲೆ ಬಹಳ ನಂಬಿಕೆ ಇದೆ ಎಂದರು. ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಅವರೂ ಸೋಮವಾರ ಹಾಸನಾಂಬೆಯ ದರ್ಶನ ಪಡೆದರು.
ವಿವಿಧ ಸ್ವಾಮೀಜಿಗಳಿಂದ ದೇವಿ ದರ್ಶನ: ಹಾಸನ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗಿನ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಶನಿವಾರಸಂತೆ ಮುದ್ದಿನಕಟ್ಟೆ ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ್ವರ ಸ್ವಾಮೀಜಿಯವರು ಆಗಮಿಸಿ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ಸೋಮವಾರ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.