Advertisement

ಮಳೆಕೊಯ್ಲು, ಜಲಮರುಪೂರಣ ಘಟಕಗಳೇ ನಿರ್ಮಾಣ ಆಗಿಲ್ಲ

02:09 PM Oct 12, 2017 | Team Udayavani |

ಪುತ್ತೂರು: ವರ್ಷದಿಂದ ವರ್ಷಕ್ಕೆ ನೀರಿನ ಅಭಾವ ಹೆಚ್ಚುತ್ತಿದ್ದರೂ ಆಡಳಿತ ವ್ಯವಸ್ಥೆಗಳು ತಲೆ ಕೆಡಿಸಿಕೊಂಡಿಲ್ಲ. ಪುತ್ತೂರಿನಲ್ಲಿ ಮಳೆಕೊಯ್ಲು, ಕೊಳವೆಬಾವಿಗೆ ಜಲಪೂರಣದಂತಹ ಘಟಕಗಳು ನಿರ್ಮಾಣ ಆಗಿಯೇ ಇಲ್ಲ!

Advertisement

ನಗರಸಭೆ ವ್ಯಾಪ್ತಿಯಲ್ಲಿ ಬರೋಬ್ಬರಿ 160ಕ್ಕೂ ಅಧಿಕ ಕೊಳವೆ ಬಾವಿಗಳಿವೆ. ಮಳೆಗಾಲದಲ್ಲಿ ಈ ಇವುಗಳಿಗೆ ನೀರಿಂಗಿಸುವ ಪ್ರಯತ್ನ ಸಾಗಿಲ್ಲ. ಮಳೆ ನೀರು ಪೋಲಾದದ್ದೆ ಇಲ್ಲಿನ ಸಾಧನೆ. ನಗರಸಭೆಯ ಸಾಮಾನ್ಯ ಸಭೆ, ವಿಶೇಷ ಸಭೆಗಳಲ್ಲಿ ಭವಿಷ್ಯದಲ್ಲಿ ಬರಬಹುದಾದ ನೀರಿನ ಸಮಸ್ಯೆಯ ಬಗ್ಗೆ ಆಡಳಿತ ಪಕ್ಷವಾಗಲೀ, ವಿಪಕ್ಷವಾಗಲೀ ತುಟಿ ಬಿಚ್ಚಿಲ್ಲ ಅನ್ನುವುದು ಗಮನಾರ್ಹ ಸಂಗತಿ.

7.5 ಎಂಎಲ್‌ಡಿ ನೀರು..!
ನಗರಕ್ಕೆ ದಿನಂಪ್ರತಿ ಬೇಕಿರುವುದು 7.5 ಎಂ.ಎಲ್‌.ಡಿ. ನೀರು. ಅದರಲ್ಲಿ 6.5 ಎಂ.ಎಲ್‌.ಡಿ ನೀರು ನೆಕ್ಕಿಲಾಡಿ ನೀರು ಶುದ್ಧೀಕರಣ ಘಟಕ ಹಾಗೂ ಉಳಿದ 1 ಎಂಎಲ್‌ಡಿ ನೀರು ಕೊಳವೆಬಾವಿ ಮೂಲಕ ಪೂರೈಸಲಾಗುತ್ತಿದೆ.

ಉಪ್ಪಿನಂಗಡಿಯ ಕುಮಾರಾಧಾರಾ ನದಿಗೆ ಅಳವಡಿಸಿದ ಡ್ಯಾಮ್‌ನಿಂದ ಸೀಟಿಗುಡ್ಡೆ, ಚಿಕ್ಕಮುಟ್ನೂರು ಗ್ರಾಮದಲ್ಲಿ ನಿರ್ಮಿಸಿದ ಟ್ಯಾಂಕಿಗೆ ನೀರು ಹಾಯಿಸಿ ನಗರಕ್ಕೆ ಪೂರೈಸಲಾಗುತ್ತಿದೆ. ಇವಿಷ್ಟು ಹೊರತುಪಡಿಸಿದರೆ, ಕೊಳವೆಬಾವಿಯೇ ಇಲ್ಲಿನ ಜೀವಾಳ.

ಮಳೆಕೊಯ್ಲುಗಿಲ್ಲ ಮಣೆ
ನಗರ ಸಭೆ ಹೊಸ ಕಟ್ಟಡ, ಮನೆ ನಿರ್ಮಾಣ ಮಾಡುವ ಸಂದರ್ಭ ಮಳೆಕೊಯ್ಲು ಘಟಕವನ್ನು ಕಡ್ಡಾಯವಾಗಿ ನಿರ್ಮಿಸಬೇಕು ಎಂದು ನಿಯಮ ವಿಧಿಸುತ್ತದೆ. ಅದು ಸರಕಾರದ ಸೂಚನೆಯೂ ಹೌದು.

Advertisement

ನಿಯಮಗಳು ಒಂದಷ್ಟು ಪಾಲನೆ ಆಗುತ್ತಿಲ್ಲ ಅನ್ನುವುದಕ್ಕೆ ನಗರದಲ್ಲಿ ನಿರ್ಮಾಣಗೊಂಡಿರುವ ಹಲವು ಕಟ್ಟಡಗಳು, ಮನೆಗಳೇ ಸಾಕ್ಷಿ. ಇಲ್ಲಿ ಪರವಾನಿಗೆ ನೀಡುವ ಸಂದರ್ಭ ಮಳೆಕೊಯ್ಲ ಅನುಷ್ಠಾನ ಆಗಿದೆಯೋ ಎಂದು ಪರಿಶೀಲಿಸುವ ಉತ್ಸಾಹವೂ ಅಧಿಕಾರಿಗಳಿಗಿಲ್ಲ. ಹಾಗಾಗಿ ಬಹು ಪ್ರಯೋಜನ ಹೊಂದಿರುವ ಮಳೆಕೊಯ್ಲ ಘಟಕ ಕಡತದೊಳಗೆ ಬಂಧಿಯಾಗಿವೆ.

ಸೂಚನೆ ನೀಡಲಾಗಿದೆ
ಹೊಸ ಕಟ್ಟಡ ಸ್ಥಾಪನೆಗೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಮಳೆಕೊಯ್ಲ ಘಟಕ ಸ್ಥಾಪನೆಗೆ ಸೂಚನೆ ನೀಡಲಾಗಿದೆ. ಅದು ಪೂರ್ಣ ಪ್ರಮಾಣದಲ್ಲಿ ಪಾಲನೆ ಆಗಿಲ್ಲ. ಕೊಳವೆಬಾವಿಗೆ ಜಲ ಮರುಪೂರಣ ಘಟಕ ಇನ್ನಷ್ಟೇ ನಿರ್ಮಾಣವಾಗಬೇಕಾಗಿದೆ. 
ರೂಪಾ ಶೆಟ್ಟಿ
ಪೌರಾಯುಕ್ತೆ, ನಗರಸಭೆ 

ಎಂಟು ವಲಯಗಳು
ನಗರದಲ್ಲಿ 9,265ಕ್ಕೂ ಅಧಿಕ ಮನೆಗಳು, 850ಕ್ಕೂ ಅಧಿಕ ಗೃಹತೇರಗಳು, 193ಕ್ಕೂ ಮಿಕ್ಕಿ ವಾಣಿಜ್ಯ ಆಧಾರಿತ ನಳ್ಳಿ ಸಂಪರ್ಕಗಳು ಇವೆ. ಚಿಕ್ಕಮುಟ್ನೂರು (15 ಲಕ್ಷ ಲೀಟರ್‌), ಪಟ್ನೂರು (0.25 ಸಾವಿರ ಲೀಟರ್‌), ಕರ್ಮಲ (0.25 ಸಾವಿರ ಲೀಟರ್‌), ಸೀಟಿಗುಡ್ಡೆ (9 ಲಕ್ಷ ಲೀಟರ್‌), ಕಬಕ ಲಿಂಗದಗುಡ್ಡೆ (25 ಸಾವಿರ ಲೀ), ಬಲ್ನಾಡು  (1 ಲಕ್ಷ ಲೀಟರ್‌), ಬೀರಮಲೆ (5 ಲಕ್ಷ ಲೀಟರ್‌), ಬಲಾ°ಡು ( 10 ಸಾವಿರ ಲೀಟರ್‌) ನೀರು 8 ವಲಯಗಳಿಗೆ ಪೂರೈಕೆ ಆಗುತ್ತಿದೆ.

 ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next