ಹಾಸನ/ಮಂಗಳೂರು: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಮಡಿಕೇರಿ, ಹಾಸನ, ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
ಧಾರಾಕಾರ ಮಳೆಯಿಂದ ಕೊಡಗಿನಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಎನ್ ಡಿಆರ್ ಎಫ್ ತಂಡದಿಂದ ಬಿರುಸಿನ ಕಾರ್ಯಾಚರಣೆ ನಡೆಯುತ್ತಿದೆ. ಮೂರ್ನಾಡು, ಕೊಟ್ಟಮುಡಿ, ನಾಪೊಕ್ಲುವಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಗೆ ವಾಹನವೊಂದು ಕೊಚ್ಚಿಕೊಂಡು ಹೋದ ಘಟನೆ ಬುಧವಾರ ನಡೆದಿದೆ. ಹಾರಂಗಿ ಜಲಾಶಯ ಹೊರಹರಿವು ಹೆಚ್ಚಳವಾಗಿದ್ದು, ಕೂಡಿಗೆ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮಡಿಕೇರಿ, ವಿರಾಜಪೇಟೆ ಸಂಪರ್ಕ ಕಲ್ಪಿಸುವ ರಸ್ತೆಯ ಸಂಚಾರ ಕೂಡಾ ಸ್ಥಗಿತಗೊಂಡಿದೆ. ಗುಡ್ಡ ಕುಸಿದ ನಿಟ್ಟಿನಲ್ಲಿ ಮಡಿಕೇರಿ, ವಿರಾಜಪೇಟೆ ಸಂಚಾರ ಬಂದ್ ಆಗಿದೆ ಎಂದು ವರದಿ ವಿವರಿಸಿದೆ.
ಸಕಲೇಶಪುರ ತಾಲೂಕಿನ ಎಂಟು ಕಡೆ ಭೂ ಕುಸಿತವಾಗಿದೆ. ಶಿರಾಡಿಘಾಟ್ ನಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಹಲವೆಡೆ ರಸ್ತೆ ಕುಸಿದಿರುವುದಾಗಿ ವರದಿ ತಿಳಿಸಿದೆ.