ಉಜಿರೆಯ ಉರಿ ಬಿಸಿಲು ನನಗೆ ಬಹಳ ಬೇಸರ ತರಿಸಿತ್ತು. ಬೆಂಗಳೂರು ಎನ್ನುವ ಮಹಾನಗರವನ್ನು ಬಿಟ್ಟು ಉನ್ನತ ವ್ಯಾಸಂಗಕ್ಕಾಗಿ ಉಜಿರೆಯನ್ನರಸಿ ಬಂದಿದ್ದೆ. ಆದರೆ ಅಲ್ಲಿನ ಸುಡು ಬಿಸಿಲು, ಹಾಸ್ಟೆಲಿನ ವಿಪರೀತ ಸೆಕೆ ನನ್ನ ಲೆಕ್ಕಾಚಾರಗಳನ್ನೆಲ್ಲಾ ತಲೆ ಕೆಳಗೆ ಮಾಡಿತ್ತು.
ಉಜಿರೆ ಒಂದು ಸಣ್ಣ ಗ್ರಾಮವಾಗಿರುವ ಕಾರಣ, ಸಿಟಿಯ ವಾತಾವರಣದಿಂದ ತುಂಬಾ ದೂರವಿರಬಹುದು, ಮಲೆನಾಡಿನ ಸೊಬಗಿರಬಹುದು, ಸುತ್ತಲೂ ಬೆಟ್ಟ, ನೀರು, ಮರ, ಗಿಡಗಳಿಂದ ಕೂಡಿರಬಹುದು, ಯಾವಾಗಲೂ ಜಿನಿ ಜಿನಿಯಂತೆ ಮಳೆ ಸುರಿಯಬಹುದು, ತಣ್ಣನೆ ಬೀಸೋ ಗಾಳಿಯ ವಾತಾವರಣದ ಮಧ್ಯೆ ಎರಡು ವರುಷ ಹಾಯಾಗಿ ಬದುಕಬಹುದು,ನನ್ನ ಸಿಟಿ ಲೈಫ್’ಗೆ ಕೊಂಚ ಬ್ರೇಕ್ ಕೊಡಬಹುದು ಎಂದು ಅಂದುಕೊಂಡಿದ್ದೆ. ಆದರೆ ಇಲ್ಲಿನ ವಾತಾವರಣವನ್ನು ಕಂಡ ಮೇಲೆ, ನಮ್ಮ ಬೆಂಗಳೂರೇ ಸರಿ, ಯಾವಾಗ್ಲೂ ಕೂಲ್ ಆಗಿರತ್ತೆ ಅಂತ ದಿನಕ್ಕೆ ಒಂದ್ ಸಲ ಆದ್ರೂ ಅಂದ್ಕೊಳ್ತಿದ್ದೆ.
ಆದರೇ… ಅವತ್ತು ಎಂದಿನಂತೆ ಸ್ಟುಡಿಯೋ ಮುಗಿಸಿ ಹಾಸ್ಟೆಲ್ ನತ್ತಾ ಹೆಜ್ಜೆಹಾಕುತ್ತಿದ್ದೆ. ಒಮ್ಮೆಲ್ಲೇ ವಾತಾವರಣದ್ಲಲಿ ಏನೋ ಬದಲಾದಂತೆ ಕಂಡಿತು, ನೀಲಿ ಆಕಾಶ ಕಪ್ಪಾದಂತೆ ಭಾಸವಾಯಿತು. ಮೋಡ ಕಟ್ಟಿದ ಕೂಡಲೇ ನನ್ನ ಮನಸಲ್ಲಿ ಖುಷಿಯ ಮಳೆ ಸುರಿಯಲಾರಂಭಿಸಿತು. ಮನೆಯಲ್ಲಿದ್ದಾಗ, ಟೆರೇಸಿನ ಮೇಲೆ ಹೋಗಿ ನಾನು ತನು ಮಳೆಯಲ್ಲಿ ಆಟವಾಡುತ್ತಿದ್ದದ್ದು ನೆನಪಾಯಿತು, ಪಪ್ಪಾ ಮಮ್ಮಾ ಎಷ್ಟೇ ಬೈದರೂ ಲೆಕ್ಕಿಸದೆ ಓಡಿಹೋಗಿ ಚೆನ್ನಾಗಿ ನೆನೆದುಕೊಂಡು ಬಂದು ಪುನಃ ಬೈಸ್ಕೊತಾಯಿದ್ವಿ. ಆ ಖುಷಿನೇ ಬೇರೆ, ಮಳೆಯ ಜೊತೆಗಿನ ನನ್ನ ಸಂಭಂಧವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ.
ಈಗಲೂ ನನ್ನ ಪಾಲಿಗೆ ಮಳೆ ಎಂಬುದು ಇಡೀ ಜಗತ್ತನ್ನು ಸುಂದರಗೊಳಿಸುವ ಒಂದು ಮಾಯಾ ಶಕ್ತಿ. ಹಾಸ್ಟೆಲ್ ಗೆ ಬಂದಂದಿನಿಂದಲೂ ನಾನು ಕಾತುರದಿಂದ ಕಾಯುತಿದ್ದ “ಮೊದಲ ಮಳೆ” ಕಾಕಾತಾಳಿಯ ಎಂಬಂತೆ ನಾನು ಹಾಸ್ಟೆಲ್ ತಲುಪಿದ ಕೂಡಲೇ ಸುರಿಯಲಾರಂಭಿಸಿತು. ನನ್ನ ಖುಷಿಗೆ ಪಾರವೇ ಇರಲಿಲ್ಲ, ಅಬ್ಬಾ! ಹೊರಗೆ ಹನಿ ಮಳೆಗೂ ನನ್ನ ಮನದೊಳಗೆ ಚಿಗುರು ಒಡೆಯುವ ಅದೆಷ್ಟೋ ಆಸೆಗಳು. ಧರೆಗೆ ಹನಿ ಮುತ್ತಿಕ್ಕುತ್ತಿದಂತೆಯೇ ನೆನಪುಗಳ ಮೆರವಣಿಗೆಯೇ ಮನಸಲ್ಲಿ ಶುರುವಾಗಿತ್ತು.
ತಕ್ಷಣವೇ ರೂಮಿಗೆ ಧಾವಿಸಿ ಬಟ್ಟೆ ಬದಲಾಯಿಸಿ,ಇಯರ್ ಪಾಡ್ಸ್ ಹಿಡಿದು ಕೆಳಗೆ ಓಡಿದೆ. ಎದುರಿಗೆ ಸಿಕ್ಕ ಗೆಳತಿಯರೆಲ್ಲರ ಬಳಿ “ಮಳೆ ಬಂತೂ….. ” ಅಂತ ಕೂಗಾಡುತ್ತಾ ನನ್ನ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದೆ. ಮುಂದೆ ಹಾಸ್ಟೆಲ್ ಅಂಗಳದಲ್ಲಿ ಒಬ್ಬಳೇ ಕೂತು ಮಳೆಯನ್ನೇ ದಿಟ್ಟಿಸಿ ನೋಡುತ್ತಾ, ನನ್ನಿಷ್ಟದ “ಮಳೆಯಲಿ ಜೊತೆಯಲಿ ” ಹಾಡನ್ನು ಕೇಳುತ್ತಾ ಮೈಮರೆತಿದ್ದೆ. ಲೋಕದ ಪರಿವೇಯಿಲ್ಲದೆ, ಏಕಾಂತದಿ ಮಳೆಯನ್ನು ಸಂಭ್ರಮಿಸುತ್ತ, ಹೊಸ ಕನಸುಗಳನ್ನು ಕಟ್ಟುವಲ್ಲಿ ತೊಡಗಿದೆ.
ಸ್ವಲ್ಪ ಸಮಯದ ನಂತರ ಮಳೆರಾಯನ ಆರ್ಭಟ ಜೋರಾಯಿತು. ಕಿಟಕಿ ಬಾಗಿಲುಗಳೆಲ್ಲಾ ಜೋರಾಗಿ ಹೊಡೆದುಕೊಳ್ಳುತ್ತಿದ್ದ ಶಬ್ಧ. ಅದರ ಜೊತೆಗೆ ಗುಡುಗು, ಮಿಂಚಿನ ಆರ್ಭಟವೂ ಶುರುವಾಗಿತ್ತು. ಮಳೆರಾಯನನ್ನು ಕಣ್ತುಂಬಿಕೊಳ್ಳಲ್ಲು ಹುಡುಗಿಯರ ದಂಡೇ ಬರುತ್ತಿದ್ದದ್ದು ಕಂಡಿತು. ಇನ್ನು ನನ್ನ ಹೀರೋ “ಮಳೆರಾಯ”ನ ಜೊತೆ ಏಕಾಂತವಾಗಿ ಕಾಲಕಳೆಯಲು ಸಾಧ್ಯವಿಲ್ಲವೆಂಬುದನ್ನು ಅರಿತು ಮೆಸ್ ಕಡೆ ಹೊರಟೆ. ಮಳೆಗೆ ಪರ್ಫೆಕ್ಟ್ ಕಾಂಬಿನೇಶನ್ ಎಂಬಂತೆ “ವಡಪಾವ್ ಮತ್ತು ಬಿಸಿ ಬಿಸಿ ಕಾಫಿ” ಇತ್ತು.
ಅಬ್ಬಬ್ಬಾ! ಆ ಸಂಜೆಯನ್ನು ಮರಿಯೋಕೆ ಸಾಧ್ಯವೇ ಇಲ್ಲಾ!ಸದಾ ನನ್ನ ನೆನಪಿನ ಪುಟದಲ್ಲಿ ಹಚ್ಚ ಹಸಿರಾಗಿ ಉಳಿಯುತ್ತದೆ.
-ತೇಜಶ್ವಿನಿ ಕಾಂತರಾಜ್, ಬೆಂಗಳೂರು