Advertisement
ಸಂಚಾರ ನಿರ್ಬಂಧ: ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳುವ ಚಾಮುಂಡಿಬೆಟ್ಟದಲ್ಲಿನ ರಸ್ತೆ ಬದಿಯ ತಡೆಗೋಡೆ ಕುಸಿತವಾಗಿರುವುದರಿಂದ ನಂದಿ ವಿಗ್ರಹದಿಂದ ಚಾಮುಂಡೇಶ್ವರಿ ದೇವಸ್ಥಾನದ ಕಡೆಗೆ ಸಾಗುವ ಮಾರ್ಗದಲ್ಲಿ 15 ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಿ, ರಸ್ತೆಯನ್ನು ಬಂದ್ ಮಾಡಲಾಗಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಮಂಗಳವಾರ ಚಾಮುಂಡಿಬೆಟ್ಟದ ರಸ್ತೆಯ ತಡೆಗೋಡೆ ಕುಸಿತವಾಗಿದ್ದ ಸ್ಥಳಕ್ಕೆ ಬುಧವಾರ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related Articles
Advertisement
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್ ಮಾತನಾಡಿ, ಮುಂದಿನ 10-15 ದಿನಗಳಲ್ಲಿ ಕುಸಿದಿರುವ ರಸ್ತೆಯನ್ನು ಸುಸ್ಥಿತಿಗೆ ತರಲು ಪ್ರಯತ್ನಿಸುತ್ತೇವೆ. ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ದೃಷ್ಟಿಯಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ತಡೆಗೋಡೆ ಕುಸಿದಿರುವ ಜಾಗದಲ್ಲಿ ತೇವಾಂಶ ಇರುವ ಕಾರಣ ಕೆಲ ದಿನಗಳ ಕಾಲ ಜಾಗರೂಕತೆಯಿಂದ ವಾಹನ ಸವಾರರು ಸಂಚರಿಸಬೇಕಾಗುತ್ತದೆ ಎಂದು ಹೇಳಿದರು.
ಝುಳು ಝುಳು ನಿನಾದ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾಮುಂಡಿಬೆಟ್ಟದಲ್ಲಿ ಹಲವೆಡೆ ಸಣ್ಣಪುಟ್ಟ ಝರಿಗಳು ಸೃಷ್ಟಿಯಾಗಿದ್ದು, ಹೆಬ್ಬಂಡೆಗಳ ನಡುವಿನಿಂದ ಝುಳು ಝುಳು ನಿನಾದದೊಂದಿಗೆ ಹರಿಯುತ್ತಿರುವ ಹಾಲ್ನೊರೆಯಂತಹ ನೀರಿನ ಝರಿಗಳು ಬೆಟ್ಟಕ್ಕೆ ಬರುವ ಯಾತ್ರಿಗಳು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ದೇವಿಕೆರೆಯಿಂದ ದೊಡ್ಡ ಝರಿಯೊಂದು ಜಲಪಾತದ ರೀತಿಯಲ್ಲಿ ಚಾಮುಂಡಿಬೆಟ್ಟದ ಮೇಲಿಂದ ಹರಿದು ಬೆಟ್ಟದ ಕೆಳಗಿರುವ ತಾವರೆಕಟ್ಟೆಯನ್ನು ಸೇರುತ್ತಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಝರಿಗಳನ್ನು ಕಣ್ತುಂಬಿಕೊಳ್ಳುತ್ತಾ ಫೋಟೋ, ಸೆಲ್ಫಿ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಸಂಭ್ರಮಿಸುತ್ತಿದ್ದಾರೆ.