ಹುಣಸೂರು: ಕಳೆದ ಎರಡು ದಿನ ಕಾಲ ಸುರಿದ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಗೆ ನಗರದ ಮಂಜುನಾಥ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ಹಲವಾರು ಮನೆಗಳು ಜಲಾವೃತವಾಗಿವೆ.
ಭಾನುವಾರ ಹಾಗೂ ಸೋಮವಾರ ಮಧ್ಯರಾತ್ರಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೇ ಮಂಜುನಾಥ ಬಡಾವಣೆಯ ಆನಂದ್, ರವಿಶಂಕರ್, ಸತ್ಯನಾರಾಯಣ್, ಸುರೇಶ್, ಶ್ರೀನಿವಾಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರಿನೊಂದಿಗೆ ಕಲುಷಿತ ನೀರು ನುಗ್ಗಿತ್ತು. ಅಲ್ಲದೇ ಬಡಾವಣೆಯ ಹಳ್ಳ ಹಾಗೂ ಖಾಲಿ ನಿವೇಶನಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲ ರಸ್ತೆಗಳಲ್ಲಿ ಓಡಾಡಲಾಗದ ಸ್ಥಿತಿ ಉಂಟಾಗಿತ್ತು.
ಸೋಮವಾರ ಆಯುಧಪೂಜೆಯಂದು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿ, ಹಬ್ಬ ಆಚರಿಸಿ ಮಲಗಿದ್ದರು. ಆದರೆ, ರಾತ್ರಿ ವೇಳೆ ನೀರು ನುಗ್ಗಿದ್ದರಿಂದ ಹಬ್ಬದ ಗುಂಗಿನಲ್ಲಿದ್ದವರು ಆತಂಕಗೊಂಡು ಮನೆಯೊಳಗೆ ನುಗ್ಗಿದ್ದ ನೀರನ್ನು ಹೊರ ಚೆಲ್ಲುವುದೇ ಕಾಯಕವಾಗಿತ್ತು. ನಿದ್ದಿಯಿಲ್ಲದೇ ನೀರು ಹೊರ ಹಾಕುವುದೇ ಅವರ ಕೆಲಸವಾಗಿತ್ತು.
ಅವೈಜ್ಞಾನಿಕ ಬಡಾವಣೆ: ಈ ಬಡಾವಣೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ, ಇಲ್ಲಿನ ರಸ್ತೆಗಳನ್ನೇ ನಿವೇಶನವನ್ನಾಗಿಸಿ ಮಾರಾಟ ಮಾಡಿದ್ದಾರೆ. ಕೆಲವರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಬಹುತೇಕ ಕಡೆ ಚರಂಡಿಯನ್ನೇ ನಿರ್ಮಿಸಿಲ್ಲ. ಹೀಗಾಗಿ ಮಳೆ ನೀರು ಎಲ್ಲೆಂದರಲ್ಲಿ ನುಗ್ಗುತ್ತಿದ್ದು, ವ್ಯವಸ್ಥಿತವಾಗಿ ಮನೆ ನಿರ್ಮಿಸಿಕೊಂಡವರ ಗೋಳು ಹೇಳತೀರದಾಗಿದೆ.
ನಿವಾಸಿಗಳ ಗೋಳು: ಸುಮಾರು 25 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಬಡಾವಣೆಯನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸದೇ ಇಷ್ಟಬಂದ ಹಾಗೆ ನಿವೇಶನ ರಚಿಸಿ, ಮಾರಾಟ ಮಾಡಲಾಗಿದೆ. ಪ್ರತಿ ಮಳೆಗಾಲದಲ್ಲೂ ಮನೆಗಳಿಗೆ ನೀರು ನುಗ್ಗುವುದು ತಪ್ಪಿಲ್ಲ, ಇದೊಂದು ಖಾಸಗಿ ಬಡಾವಣೆ ಎಂಬ ನೆಪವೊಡ್ಡಿ ಅಭಿವೃದ್ದಿ ಪಡಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಸೇರಿದಂತೆ ನಗರಸಭೆ ನಿರ್ಲಕ್ಷ್ಯವಹಿಸಿದ ಪರಿಣಾಮ ನಿವಾಸಿಗಳು ಮಳೆಗಾಲದಲ್ಲಿ ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ. ಎರಡು ತಿಂಗಳ ಹಿಂದಷ್ಟೆ ಪ್ರವಾಹದಿಂದ ತತ್ತರಿಸಿದ್ದ ಹುಣಸೂರಿನಲ್ಲಿ ಮತ್ತೆ ಮಳೆ ಮುಂದುವರಿದಲ್ಲಿ ಮತ್ತಷ್ಟು ಮನೆಗಳಿಗೆ ಹಾನಿಯಾಗಲಿದೆ.
ಚರಂಡಿ ನಿರ್ಮಿಸಿ: ಬಡಾವಣೆಗೆ ಎಂದಿನಂತೆ ನಗರಸಭೆ ಸಿಬ್ಬಂದಿ ಭೇಟಿ ನೀಡಿ ಹೋಗಿದ್ದಾರೆ. ಅಧಿಕಾರಿಗಳು ಬರೀ ಸಬೂಬು ಹೇಳುವುದನ್ನು ಬಿಟ್ಟು ಮುಂದಾದರೂ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗತ್ಯ ಕ್ರಮ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಗರೋತ್ಥಾನ ಯೋಜನೆಯಡಿ ಈ ಮಂಜುನಾಥ ಬಡಾವಣೆಗೆ ಚರಂಡಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎಂಜಿನಿಯರ್‌ಗಳಿಗೂ ಸೂಚನೆ ನೀಡಿದ್ದೇನೆ.
-ಶಿವಪ್ಪನಾಯಕ, ನಗರಸಭೆ ಪೌರಾಯುಕ್ತ