Advertisement

ಬಾಂಗ್ಲಾದೇಶಕ್ಕೆ ಮಳೆಭಾಗ್ಯ, ಆಸೀಸ್‌ಗೆ ಅಂಕ ಹಂಚಿಕೊಂಡ ಸಂಕಟ

01:56 PM Jun 07, 2017 | Harsha Rao |

ಲಂಡನ್‌: ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೆ ಮತ್ತೆ ಮಳೆ ಅಡ್ಡಗಾಲಿಕ್ಕಿದೆ. ಇದರಿಂದ ಆಸ್ಟ್ರೇಲಿಯ-ಬಾಂಗ್ಲಾದೇಶ ನಡುವೆ ಸೋಮವಾರ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ನಡೆದ ಹಗಲು-ರಾತ್ರಿ ಪಂದ್ಯ ರದ್ದುಗೊಂಡಿದ್ದು, ಇತ್ತಂಡಗಳೂ ಅಂಕಗಳನ್ನು ಹಂಚಿಕೊಂಡಿವೆ.

Advertisement

ಇದರೊಂದಿಗೆ ಈ ಕೂಟದಲ್ಲಿ ಆಸ್ಟ್ರೇಲಿಯ ಪಾಲ್ಗೊಂಡ ಎರಡೂ ಪಂದ್ಯಗಳು ಮಳೆಯಿಂದ ರದ್ದುಗೊಂಡಂತಾಯಿತು. ಇದಕ್ಕೂ ಮುನ್ನ ಜೂ. 2ರಂದು ನ್ಯೂಜಿಲ್ಯಾಂಡ್‌ ವಿರುದ್ಧ ಬರ್ಮಿಂಗಂನಲ್ಲಿ ನಡೆದ ಪಂದ್ಯವೂ ಮಳೆಗೆ ಬಲಿಯಾಗಿತ್ತು. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ಜೂ. 10ರಂದು ಆತಿಥೇಯ ಇಂಗ್ಲೆಂಡನ್ನು ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಎದುರಿಸಲಿದೆ. ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಈ ಪಂದ್ಯದ ಗೆಲುವಿನ ಜತೆಗೆ “ಎ’ ವಿಭಾಗದ ಇತರ ಪಂದ್ಯಗಳ ಫ‌ಲಿತಾಂಶವೂ ಆಸೀಸ್‌ ಪಾಲಿಗೆ ಅತ್ಯಂತ ಮಹತ್ವದ್ದಾಗಲಿದೆ. ಒಟ್ಟಾರೆ “ಎ’ ವಿಭಾಗ ಎನ್ನುವುದು “ಗ್ರೂಪ್‌ ಆಫ್ ಡೆತ್‌’ ಎನಿಸಿಕೊಂಡು ಬಲಾಡ್ಯ ಹಾಗೂ ನೆಚ್ಚಿನ ತಂಡಗಳ ಪಾಲಿಗೆ ಆತಂಕ ತಂದೊಡ್ಡಿದೆ.

ಬಾಂಗ್ಲಾದೇಶ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡಿಗೆ 8 ವಿಕೆಟ್‌ಗಳಿಂದ ಶರಣಾಗಿತ್ತು. ಮೊರ್ತಜ ಟೀಮ್‌ ತನ್ನ ಅಂತಿಮ ಲೀಗ್‌ ಪಂದ್ಯವನ್ನು ನ್ಯೂಜಿಲ್ಯಾಂಡ್‌ ವಿರುದ್ಧ ಜೂ. 9ರಂದು ಆಡಲಿದೆ.

ಕೈಜಾರಿದ ಗೆಲುವು 
ಈ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಕ್ಕೆ ಗೆಲುವಿನ ಎಲ್ಲ ಅವಕಾಶಗಳೂ ಇದ್ದವು. ಇನ್ನೊಂದೆಡೆ ಬಾಂಗ್ಲಾದೇಶ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಟಾಸ್‌ ಗೆದ್ದು ಬ್ಯಾಟಿಂಗಿಗೆ ಇಳಿದ ಬಾಂಗ್ಲಾದೇಶ 44.3 ಓವರ್‌ಗಳಲ್ಲಿ 182ಕ್ಕೆ ಸರ್ವಪತನ ಕಂಡಿತ್ತು. ಸುಲಭ ಸವಾಲನ್ನು ಬೆನ್ನಟ್ಟಿಕೊಂಡು ಹೋದ ಆಸ್ಟ್ರೇಲಿಯಕ್ಕೆ 16 ಓವರ್‌ ಮುಗಿದೊಡನೆ ಮಳೆ ವಿಲನ್‌ ಆಗಿ ಕಾಡತೊಡಗಿತು. ವರ್ಷಾಧಾರೆ ನಿಲ್ಲಲೇ ಇಲ್ಲ. ಆಗ ಆಸೀಸ್‌ ಒಂದು ವಿಕೆಟಿಗೆ 83 ರನ್‌ ಬಾರಿಸಿ ಸುಸ್ಥಿತಿಯಲ್ಲಿತ್ತು.

ಇನ್ನು 4 ಓವರ್‌ಗಳ ಆಟ ಸಾಧ್ಯ ವಾಗಿದ್ದರೆ ಡಕ್‌ವರ್ತ್‌-ಲೂಯಿಸ್‌ ನಿಯಮವನ್ನು ಅಳವಡಿಸಿ ಫ‌ಲಿತಾಂಶವನ್ನು ನಿರ್ಧರಿಸಬಹುದಿತ್ತು. ಆಗ ಆಸ್ಟ್ರೇಲಿಯದ ಗೆಲುವು ಬಹುತೇಕ ಖಚಿತಗೊಳ್ಳುತ್ತಿತ್ತು. 20 ಓವರ್‌ಗಳಲ್ಲಿ ಆಸೀಸ್‌ 109 ರನ್‌ ಮಾಡಿದರೆ ಸಾಕಿತ್ತು.

Advertisement

ಚೇಸಿಂಗ್‌ ವೇಳೆ ಆಸ್ಟ್ರೇಲಿಯ ಆರನ್‌ ಫಿಂಚ್‌ (19) ವಿಕೆಟ್‌ ಕಳೆದುಕೊಂಡಿತು. ಈ ವಿಕೆಟ್‌ ರುಬೆಲ್‌ ಹೊಸೇನ್‌ ಪಾಲಾಯಿತು. ಪಂದ್ಯ ನಿಂತಾಗ 40 ರನ್‌ ಮಾಡಿದ ಡೇವಿಡ್‌ ವಾರ್ನರ್‌ ಹಾಗೂ 22 ರನ್‌ ಮಾಡಿದ ಸ್ಟೀವನ್‌ ಸ್ಮಿತ್‌ ಕ್ರೀಸಿನಲ್ಲಿದ್ದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-44.3 ಓವರ್‌ಗಳಲ್ಲಿ 182 (ತಮಿಮ್‌ 95, ಶಕಿಬ್‌ 29, ಮಿರಾಜ್‌ 14, ಸ್ಟಾರ್ಕ್‌ 29ಕ್ಕೆ 4, ಝಂಪ 13ಕ್ಕೆ 2). ಆಸ್ಟ್ರೇಲಿಯ-16 ಓವರ್‌ಗಳಲ್ಲಿ ಒಂದು ವಿಕೆಟಿಗೆ 83 (ವಾರ್ನರ್‌ ಔಟಾಗದೆ 40, ಸ್ಮಿತ್‌ ಔಟಾಗದೆ 22, ಫಿಂಚ್‌ 19, ರುಬೆಲ್‌ 21ಕ್ಕೆ 1).

ಮಳೆ ಮತ್ತು ಆಸೀಸ್‌
ಚಾಂಪಿಯನ್ಸ್‌ ಟ್ರೋಫಿಯ ಆಸ್ಟ್ರೇಲಿಯ ಪಂದ್ಯಗಳಿಗೆ ಮಳೆಯ ನಂಟಿರುವುದು ವಾಡಿಕೆಯೇ ಆಗಿದೆ. ಕಳೆದ 5 ಪಂದ್ಯಗಳಲ್ಲಿ ಕಾಂಗರೂ ಪಡೆಗೆ 3 ಸಲ ಮಳೆಯ ದರ್ಶನವಾಗಿದ್ದು, ಇವೆಲ್ಲವೂ ರದ್ದುಗೊಂಡಿವೆ. ಉಳಿದೆರಡರಲ್ಲಿ ಆಸೀಸ್‌ ಪರಾಭವಗೊಂಡಿದೆ. ಈ ಸೋಲು ಇಂಗ್ಲೆಂಡ್‌ ಮತ್ತು ಶ್ರೀಲಂಕಾ ವಿರುದ್ಧ 2013ರಲ್ಲಿ ಎದುರಾಗಿತ್ತು. ಆಸ್ಟ್ರೇಲಿಯ ಕೊನೆಯ ಸಲ ಚಾಂಪಿಯನ್ಸ್‌ ಟ್ರೋಫಿ ಪಂದ್ಯವನ್ನು ಜಯಿಸಿದ್ದು 2009ರ ಫೈನಲ್‌ನಲ್ಲಿ. ಸೆಂಚುರಿಯನ್‌ನಲ್ಲಿ ನಡೆದ ಪ್ರಶಸ್ತಿ ಸಮರದಲ್ಲಿ ಪಾಂಟಿಂಗ್‌ ಪಡೆ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next