Advertisement
ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೇಂದ್ರ ಭಾಗ ಹಾಗೂ ವಾಣಿಜ್ಯ ಪ್ರದೇಶದ ರಸ್ತೆಗಳೇ ಹೆಚ್ಚಾಗಿ ಜಲಾವೃತಗೊಂಡಿವೆ. ಸರ್ಕಾರಿ ಕಚೇರಿಗಳು, ವಾಣಿಜ್ಯ ಕಟ್ಟಡಗಳು ಹೆಚ್ಚಿರುವ ಪ್ರದೇಶಗಳಲ್ಲೇ ನೀರು ಹರಿಯದೆ ಅವಾಂತರವಾಗಿದೆ. ಇನ್ನು ಕೆಲವು ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿ ಜನ ಜೀವನವೇ ಅಸ್ತವ್ಯವಸ್ಥೆಗೊಂಡಿದೆ ಇದಕ್ಕೆಲ್ಲ ಕಾರಣ ಹುಡುಕಿ ಹೊರಟರೆ ಕಾಣುವುದು ಬಿಬಿಎಂಪಿಯ ವೈಫಲ್ಯಗಳ ಸರಮಾಲೆ.
Related Articles
Advertisement
ಮಳೆಗಾಲದಲ್ಲಿ ಹೂಳೆತ್ತಲು ಆಗಲ್ಲ: ಇತ್ತೀಚೆಗಷ್ಟೇ ನಗರದ ಹಲವೆಡೆ ರಸ್ತೆ ಇಕ್ಕೆಲಗಳ ಚರಂಡಿ ಹೂಳು ತೆರವು ಕಾರ್ಯ ಆರಂಭವಾಗಿತ್ತು. ಆದು ಇನ್ನೂ ಪ್ರಗತಿಯಲ್ಲಿದೆ. ಆದರೆ, ಹೂಳು ತೆಗೆಯುವ ಕಾರ್ಯ ಹಗಲೂ ರಾತ್ರಿ ನಡೆದರೂ 2000 ಕಿ.ಮೀ. ಉದ್ದದ ರಸ್ತೆಗಳ ಚರಂಡಿಗಳ ಹೂಳು ತೆಗೆಯಲು ಇನ್ನೂ 20 ದಿನ ಬೇಕು. ಅಷ್ಟರೊಳಗೆ ಮಳೆ ಇನ್ನೂ ಹೆಚ್ಚಾದರೆ, ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಒಟ್ಟಾರೆ ಎಂಜಿನಿಯರ್‌ಗಳ ನಿರ್ಲಕ್ಷ್ಯಕ್ಕೆ ಇಡೀ ನಗರದ ಜನ ಬೆಲೆ ತೆರುವಂತಾಗಿದೆ.
ಕಾಲುವೆಗಳಲ್ಲಿ ಮ್ಯಾನ್‌ಹೋಲ್: ನಗರದ ಹಳೆಯ ಪ್ರದೇಶದಲ್ಲಿ ಬಹುತೇಕ ಕಡೆ ಮಳೆ ನೀರು ಕಾಲುವೆಗಳಲ್ಲಿ ಜಲಮಂಡಳಿ ಅಕ್ರಮವಾಗಿ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಿದೆ. ನಗರದಲ್ಲಿ ಧಾರಾಕಾರ ಮಳೆ ಸುರಿದಾಗ ಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮ್ಯಾನ್‌ಹೋಲ್‌ಗಳು ಮುಳುಗಡೆಯಾಗುತ್ತವೆ. ಇದರಿಂದ ತಕ್ಷಣವೇ ಮನೆಗಳಿಗೆ ಒಳಚರಂಡಿ ನೀರು ಹಿಮ್ಮುಖವಾಗಿ ಹರಿದು ಕೊಳಚೆ ನೀರು ನುಗ್ಗುತ್ತಿದೆ. ಹಾಗೆಯೇ ರಸ್ತೆಬದಿಯ ಮ್ಯಾನ್‌ಹೋಲ್‌ಗಳಿಂದಲೂ ನೀರು ಹೊರಬರುತ್ತಿದೆ.
ಟೆಂಡರ್‌ಶ್ಯೂರ್ ರಸ್ತೆಗಳೂ ಜಲಾವೃತ: ರಾಜಧಾನಿಯಲ್ಲಿ ದುಬಾರಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಟೆಂಡರ್‌ಶ್ಯೂರ್ ವಿಧಾನದ ರಸ್ತೆಗಳು ಜಲಾವೃತವಾಗುತ್ತಿವೆ. ಈ ವಿಧಾನದಡಿ ಅಭಿವೃದ್ಧಿಯಾಗಿರುವ ರಸ್ತೆಗಳಲ್ಲಿ ಬಹುತೇಕ ಕಡೆ ಚರಂಡಿ ಕಿಂಡಿಗಳನ್ನೇ ಬಿಟ್ಟಿಲ್ಲ. ಬದಲಿಗೆ ರಸ್ತೆಯಲ್ಲೇ ಕೆಲವೆಡೆ ಕಿಂಡಿ ಬಿಡಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯದೆ, ವಾಹನ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಟೆಂಡರ್‌ಶ್ಯೂರ್ ವಿಧಾನದ ವಿನ್ಯಾಸವೇ ಆ ರೀತಿಯಾಗಿದ್ದು, ಅದನ್ನು ಜಾರಿಗೊಳಿಸುವುದಷ್ಟೇ ತಮ್ಮ ಜವಾಬ್ದಾರಿ ಎನ್ನುತ್ತಾರೆ.
ಗುತ್ತಿಗೆದಾರರ ಕಾರ್ಯವೈಖರಿಯೂ ಕಾರಣ: ನಿಯಮಾನುಸಾರ ರಸ್ತೆ ಅಭಿವೃದ್ಧಿ ಎಂದರೆ ಮೊದಲಿಗೆ ಚರಂಡಿ ಹೂಳು ತೆರವುಗೊಳಿಸಿ, ಪಾದಚಾರಿ ಮಾರ್ಗವನ್ನು ಸುಸ್ಥಿತಿಗೆ ತಂದು ಕೊನೆಯದಾಗಿ ಡಾಂಬರು ಹಾಕಬೇಕು. ಆದರೆ ಎಲ್ಲೆಡೆ ಮೊದಲಿಗೆ ಡಾಂಬರು ಹಾಕಲಾಗುತ್ತದೆ. ಆನಂತರ ಪಾದಚಾರಿ ಮಾರ್ಗದ ದುರಸ್ತಿ, ಚರಂಡಿಯ ಹೂಳು ತೆಗೆಯಲಾಗುತ್ತದೆ. ಕೆಲವೆಡೆ ಇದನ್ನೂ ಸಮರ್ಪಕವಾಗಿ ನಿರ್ವಹಿಸದ ಕಾರಣ ಹೂಳು ಹೆಚ್ಚಾಗಿ ರಸ್ತೆಯಲ್ಲಿ ಮಳೆ ನೀರು ನಿಲ್ಲುವಂತಾಗುತ್ತದೆ ಎಂದು ಎಂಜಿನಿಯರ್‌ಗಳು ದೂರುತ್ತಾರೆ.
ನಗರದ ಕೇಂದ್ರ ವಾಣಿಜ್ಯ ಜಿಲ್ಲಾ (ಸಿಬಿಡಿ) ಪ್ರದೇಶದ ರಸ್ತೆ, ಚರಂಡಿಗಳು ಕಿರಿದಾಗಿರುವುದರಿಂದ ಮಳೆ ಸುರಿದಾಗ ನೀರು ರಸ್ತೆಗೆ ಹರಿಯುತ್ತದೆ. ಆದರೆ ಸ್ಥಳಾವಕಾಶದ ಕೊರತೆಯಿಂದ ಈ ಚರಂಡಿಗಳ ವಿಸ್ತರಣೆ ಸವಾಲಿನ ಕಾರ್ಯ. ಹಾಗಾಗಿ ನಿರಂತರವಾಗಿ ಹೂಳು ತೆಗೆದು ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ.-ಎಂ.ಆರ್.ವೆಂಕಟೇಶ್, ಪ್ರಧಾನ ಎಂಜಿನಿಯರ್ * ಕೀರ್ತಿಪ್ರಸಾದ್.ಎಂ