Advertisement

ಜಿಲ್ಲೆಯ ಮಳೆ, ಬೆಳೆ ವಿಚಾರಿಸುತ್ತಿದ್ದ ಶ್ರೀಗಳು

07:13 AM Jan 22, 2019 | |

ಚಾಮರಾಜನಗರ: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ. ಶಿವಕುಮಾರಸ್ವಾಮೀಜಿಯವರಿಗೆ ಜಿಲ್ಲೆಯ ಬಗ್ಗೆ ವಿಶೇಷವಾದ ಕಾಳಜಿ ಇತ್ತು. ಇಲ್ಲಿಂದ ತುಮಕೂರು ಮಠಕ್ಕೆ ಅವರ ದರ್ಶನಕ್ಕಾಗಿ ಹೋದವರ ಉಭಯ ಕುಶಲೋಪರಿ ವಿಚಾರಿಸುವ ಜೊತೆಗೆ ನಿಮ್ಮ ಜಿಲ್ಲೆಯಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಿದೆಯೇ ಎಂದು ಕೇಳುವುದನ್ನು ಮಾತ್ರ ಶ್ರೀಗಳು ಮರೆಯುತ್ತಿರಲಿಲ್ಲ. 

Advertisement

ನಡೆದಾಡುವ ದೇವರು ಎಂದೇ ಕರೆಯುತ್ತಿದ್ದ ಶ್ರೀಗಳು ಜಿಲ್ಲೆಯ ಅನೇಕ ಗ್ರಾಮಗಳಿಗೆ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರಿಗೆ 106 ವರ್ಷಗಳವರೆಗೂ ಸಹ, ಜಿಲ್ಲೆಯ  ಧಾರ್ಮಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ಸಿದ್ಧಗಂಗಾ ಶ್ರೀಗಳು ಬಂದೇ ಬರುತ್ತಾರೆ ಎಂಬುದು ಜಿಲ್ಲೆಯ ಬಗ್ಗೆ ಅವರಿಗಿದ್ದ ಪ್ರೀತಿಗೆ ಸಾಕ್ಷಿಯಾಗಿತ್ತು.

ಶ್ರೀಗಳಿಗೆ 97 ವರ್ಷಗಳ ಬಳಿಕ ಗುರುವಂದನೆ ಕಾರ್ಯಕ್ರಮಗಳನ್ನು ತಾಲೂಕು ಕೇಂದ್ರ ಹಾಗೂ ಹೋಬಳಿ ಕೇಂದ್ರಗಳಲ್ಲಿ  ಆಯೋಜಿಸಲಾಲಾಗುತ್ತಿತ್ತು. ಈ ಕಾರ್ಯಕ್ರಮಗಳು ಅವರ ನೇತೃತ್ವದಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಹಾಗು ಕೊಳ್ಳೇಗಾಲದಲ್ಲಿ ಅದ್ಧೂರಿಯಾಗಿ ನಡೆದಿರುವುದು ವಿಶೇಷವಾಗಿತ್ತು. 

3 ಕಿ.ಮೀ. ವಾಯುವಿಹಾರ: 2006ರಲ್ಲಿ ತಾಲೂಕಿನ ಕೊತ್ತಲವಾಡಿಯಲ್ಲಿ  ಶ್ರೀಗಳ ಗುರುವಂದನಾ ಕಾರ್ಯಕ್ರಮವನ್ನು ವೈಭವಯುತವಾಗಿ ನಡೆಸಲಾಗಿತ್ತು. 2 ದಿನಗಳ ಕಾಲ ಕೊತ್ತಲವಾಡಿಯಲ್ಲಿ ವಾಸ್ತವ್ಯ ಹೂಡಿದ್ದರು. 

ತಾವೇ ರಚಿಸಿದ್ದ ಜಗಜ್ಯೋತಿ ಬಸವೇಶ್ವರ ನಾಟಕವನ್ನು ತುಮಕೂರಿನ ಶಿಕ್ಷಣ ಸಂಸ್ಥೆಯ ಶಿಷ್ಯರೇ ಅಭಿನಯಿಸುತ್ತಿದ್ದರು. ಅಂದು ರಾತ್ರಿಯಿಂದ ಬೆಳಗಿನ ಜಾವ 3ಗಂಟೆಯವರೆಗೂ ನಾಟಕ ಪ್ರದರ್ಶನ ನಡೆಯಿತು. ಇಡೀ ನಾಟಕವನ್ನು ವೀಕ್ಷಿಸಿದ್ದ ಸಿದ್ಧಗಂಗಾ ಶ್ರೀಗಳು ಮುಂಜಾನೆ 3.30ಕ್ಕೆ ಕೊತ್ತಲವಾಡಿ ಮತ್ತು ಕಟ್ನವಾಡಿ ಮಾರ್ಗದ ರಸ್ತೆಯಲ್ಲಿ  ವಾಯು ವಿಹಾರ ಮಾಡಿದ್ದರು.

Advertisement

ಸುಮಾರು 3 ಕಿ.ಮೀ. ದೂರವಿರುವ  ರಸ್ತೆಯಲ್ಲಿ  ಶ್ರೀಗಳು ಊರುಗೋಲು ಹಿಡಿದು ನಡೆದಿದ್ದನ್ನು ಕೊತ್ತಲವಾಡಿ ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಾರೆ. ಶ್ರೀಗಳು ಬರುವ ವಿಷಯ ತಿಳಿದು ಆ ದಾರಿಯಲ್ಲಿದ್ದ ಭಕ್ತಾದಿಗಳು ಬೆಳಕು ಹರಿಯದ ಬೆಳಗಿನ ಜಾವದಲ್ಲೂ ಅವರಿಗೆ ಪೂಜೆ ಸಲ್ಲಿಸಲು ನಿಂತಿದ್ದರು. ಆಗ ಶ್ರೀಗಳು ತಾವು ವಾಯು ವಿಹಾರ ಬರುವ ವಿಷಯ ನಿಮಗೆಲ್ಲಾ ಹೇಗೆ ತಿಳಿಯಿತು? ಎಂದು ನಸುನಕ್ಕಿದ್ದರು.

ಸಿದ್ಧಗಂಗಾ ಶ್ರೀಗಳು ಗ್ರಾಮಕ್ಕೆ ಆಗಮಿಸಿದ್ದ ಆ ಎರಡು ದಿನಗಳು ಸಹ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಾಯುವಿಹಾರದ ಬಳಿಕ ನೇರವಾಗಿ ಗ್ರಾಮದಲ್ಲಿದ್ದ ದಾಸೋಹ ಮಠದಲ್ಲಿ ಲಿಂಗಪೂಜೆ ಮಾಡಿದರು. ಸುಮಾರು 2 ಗಂಟೆಗೂ ಹೆಚ್ಚು ಕಾಲ ಪೂಜೆಯಲ್ಲಿ ತೊಡಗಿಕೊಂಡಿದ್ದರು. ನಂತರದ ಬೆಳಗ್ಗೆ ಭಕ್ತರ ಮನೆಗಳಿಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ದರ್ಶನ ನೀಡಿದ್ದರು. ತಾಲೂಕಿನ ಬೆಟ್ಟದಪುರದಲ್ಲಿಯೂ ಶ್ರೀಗಳ ಗುರುವಂದನೆ ನಡೆದಿತ್ತು. ಹಾಗೆಯೇ ಕುದೇರು ಮಠಕ್ಕೂ ಶ್ರೀಗಳು ಆಗಮಿಸಿದ್ದರು. 

ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಿದ್ಧಗಂಗಾ ಶ್ರೀಗಳ ಭಾವಚಿತ್ರ: ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಹಾಗು ವಿವಾಹ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಸಿದ್ಧಗಂಗಾ ಶ್ರೀ ಭಾವಚಿತ್ರ ವಿರುವ ಆಹ್ವಾನ ಪತ್ರಿಕೆಗಳು ಹೆಚ್ಚು  ಪ್ರಕಟಗೊಳ್ಳುತ್ತವೆ. ಚಾಮರಾಜನಗರ ಜಿಲ್ಲೆಯಿಂದಲೂ ಹೆಚ್ಚಿನ ಬಡ ವಿದ್ಯಾರ್ಥಿಗಳು  ಸಿದ್ಧªಗಂಗಾಶ್ರೀಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ.

ಶ್ರೀ ಮಠದಲ್ಲಿ ವಿದ್ಯಾಭ್ಯಾಸ ಮಾಡಿರುವ ಬಹಳಷ್ಟು ಮಂದಿ ಜಿಲ್ಲೆಯಲ್ಲಿದ್ದಾರೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಬಗ್ಗೆ  ಶಿವಕುಮಾರಸ್ವಾಮಿಗಳಿಗೆ ಹೆಚ್ಚಿನ ಪ್ರೀತಿ ಇತ್ತು. ಹಿಂದುಳಿದ ಬರಪಿಡೀತ ಜಿಲ್ಲೆ ಅಭಿವೃದ್ಧಿಹೊಂದಬೇಕು ಎಂಬ ಕಾಳಜಿಯನ್ನು ಶ್ರೀಗಳು ಅನೇಕ ಬಾರಿ ತಮ್ಮ ಆಶೀರ್ವಚನ ಸಂದರ್ಭದಲ್ಲಿ ಹೇಳುತ್ತಿದ್ದರು ಎಂದು ಜಿಲ್ಲೆಯ ಭಕ್ತಾದಿಗಳು ಸ್ಮರಿಸಿಕೊಳ್ಳುತ್ತಾರೆ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next