Advertisement

ಜಿಲ್ಲೆಯಲ್ಲಿ ಮಳೆ ಸಿಂಚನ: ಉತ್ತಮ ಮುಂಗಾರಿನ ನಿರೀಕ್ಷೆ

05:34 PM May 29, 2017 | |

ರಾಮನಗರ: ನಿರಂತರ ಬರಗಾಲ ಪೀಡಿತ ಜಿಲ್ಲೆಯಲ್ಲಿ ಸುಡು ಬೇಸಿಗೆ ತಿಂಗಳು ಮೇ ತಿಂಗಳಿನಲ್ಲೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸಿಂಚನವಾಗುತ್ತಿದ್ದು, ರೈತರು ಈ ಭಾರೀ ಮುಂಗಾರಿನ ಬಗ್ಗೆ ವಿಶ್ವಾಸದಿಂದಿದ್ದಾರೆ.

Advertisement

ಸಾಧಾರಣಕ್ಕಿಂತ ಹೆಚ್ಚು ಮಳೆ: ಜನವರಿಯಲ್ಲಿ ಸಾಧಾರಣವಾಗಿ 0.9 ಎಂಎಂ ಮಳೆಯಾಗಬೇಕಿತ್ತು. ಆದರೆ, 2.8 ಎಂಎಂ ಮಳೆಯಾಗಿದೆ. ಫೆಬ್ರವರಿಯಲ್ಲಿ 4.8 ಎಂಎಂ ಮಳೆಯಾಗಬೇಕಿತ್ತು. ಆದರೆ, ಒಂದೇ ಒಂದು ಮಿಮಿ ಮಳೆಯಾಗಿಲ್ಲ. ಮಾರ್ಚ್‌ ತಿಂಗಳಲ್ಲಿ ಸಾಧಾರಣವಾಗಿ 9.7 ಎಂಎಂ ಬದಲಿಗೆ 21.4 ಎಂಎಂ ಮಳೆಯಾಗಿದೆ.

ಏಪ್ರಿಲ್‌ ತಿಂಗಳಲ್ಲಿ ಸಾಮಾನ್ಯವಾಗಿ 47.6 ಎಂಎಂ ಮಳೆಯಾಗಬೇಕು. ಆದರೆ 41.6 ಮಿಮಿ ಮಳೆಯಾಗಿದೆ. ಮೇ ತಿಂಗಳಲ್ಲಿ 25ರವರೆಗೂ 99 ಮಿಮೀ ಬದಲಿಗೆ 185.6 ಮಿಮಿ ಮಳೆಯಾಗಿದೆ. 2017ನೇ ಸಾಲಿನಲ್ಲಿ 5 ತಿಂಗಳಲ್ಲಿ 162.3 ಮಿಮಿ ಬದಲಿಗೆ 251.4 ಮಳೆಯಾಗಿದೆ.

ತಾಲೂಕುವಾರು ಮಳೆ ವರದಿ: ಕಳೆದ ಜನವರಿಯಿಂದ ಇಲ್ಲಿವರೆಗೆ ರಾಮನಗರ ತಾಲೂಕಿನಲ್ಲಿ 153.4 ಮಿಮಿ ಬದಲಿಗೆ 237 .7 ಮಿಮಿ ಮಳೆಯಾಗಿದೆ. ಚನ್ನಪಟ್ಟಣದಲ್ಲಿ 163.4 ಮಿಮಿ ಬದಲಿಗೆ 269.2 ಮಿಮಿ ಮಳೆಯಾಗಿದೆ. ಮಾಗಡಿಯಲ್ಲಿ 166.1 ಮಿಮಿ ಬದಲಿಗೆ 214.1 ಮಿಮಿ, ಕನಕಪುರದಲ್ಲಿ 163.4 ಬದಲಿಗೆ 262 ಮಿಮಿ ಮಳೆಯಾಗಿದೆ ಎಂಬ ಮಾಹಿತಿ ಇದೆ.

ಮುಂಗಾರಿನ ಬಗ್ಗೆ ರೈತರಲ್ಲಿ ವಿಶ್ವಾಸ: ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಮುಂಗಾರು ಹಂಗಾಮಿಗೆ ರೈತರು ಮುಂದಾಗುತ್ತಾರೆ. ಆದರೆ ಮೇ ತಿಂಗಳಲ್ಲೇ ಜಿಲ್ಲೆಯ ವಿವಿಧೆಡೆ ಸಾಧಾರಣಕ್ಕಿಂತ ಹೆಚ್ಚು ಮಳೆಯಾಗಿರಿವುದರಿಂದ ಮುಂಗಾರಿನ ಬಗ್ಗೆ ವಿಶ್ವಾಸವಿರಿಸಿದ್ದಾರೆ.

Advertisement

ಜಿಲ್ಲೆಯ ಕೆಲವು ಭಾಗಗಳಲ್ಲಿ ರೈತರು ತಮ್ಮ ಭೂಮಿ ಹದ ಮಾಡಲಾರಂಭಿಸಿದ್ದಾರೆ. ಕೆಲವರು ಮೇವು ಬೆಳೆಯಲು ಮುಂದಾಗಿದ್ದಾರೆ. ಕೆಲವರು ಆಲಸಂದೆ ಮುಂತಾದ ಅಲ್ಪಾವಧಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ಬಿತ್ತನೆ ನಂತರ ಮಳೆ ಕೈಕೊಟ್ಟಿರುವುದರಿಂದ ಬಹಳಷ್ಟು ರೈತರು ಸಾಂಪ್ರಾದಾಯಿಕ ಮಳೆ (ಭರಣಿ ಇತ್ಯಾದಿ) ನಕ್ಷತ್ರಗಳಿಗೆ ಕಾಯುತ್ತಿದ್ದಾರೆ.

ಕಳೆದ ವರ್ಷ ಏನಾಗಿತ್ತು?: ಕಳೆದ ವರ್ಷ (2016) ಜನವರಿ ಹೊರತು ಪಡಿಸಿದರೆ ಫೆಬ್ರವರಿ, ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮಳೆ ಕೊರತೆವುಂಟಾಗಿತ್ತು. ಆದರೆ, ಜೂನ್‌ನಲ್ಲಿ ಶೇ 12ರಷ್ಟು ಮತ್ತು ಜುಲೈನಲ್ಲಿ ಶೇ 125ರಷ್ಟು ಮಳೆ ಹೆಚ್ಚಾಗಿ ಸುರಿದಿತ್ತು. ಜೂನ್‌ ಮತ್ತು ಜುಲೈನಲ್ಲಿ ಸುರಿದಿದ್ದ ಮಳೆಯಿಂದಾಗಿ ಮುಂಗಾರು ಬಿತ್ತನೆ ಮಾಡಿದ್ದ ರೈತರಿಗೆ ಆಗಸ್ಟ್‌, ಸೆಪೆ‌ಂಬರ್‌ನಲ್ಲಿ ಮಳೆ ಕೊರತೆವುಂಟಾಗಿ ಕೃಷಿ ಬೆಳೆ ನಷ್ಟಕ್ಕೆ ಕಾರಣವಾಯಿತು.

ಅಕ್ಟೋಬರ್‌, ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳ‌ಲ್ಲಿ ಮಳೆ ಕೊರತೆವುಂಟಾಗಿದ್ದರಿಂದ ಹಿಂಗಾರು ಬೆಳೆಯೂ ಕೈಕೊಟ್ಟಿತ್ತು. ಕೃಷಿ ಬೆಳೆಗಾದ ಕೊರತೆಯೇ ತೋಟಗಾರಿಕೆ ಬೆಳೆಗೂ ಆಗಿತ್ತು. ಕಳೆದ ವರ್ಷದ ಕಹಿ ಅನುಭವ ಇನ್ನೂ ಮಾಸಿಲ್ಲ, ಆದರೆ ರೈತ ಸಮುದಾಯ ಈ ಸಾಲಿನಲ್ಲಿಯಾದರೂ ಸಾಂಪ್ರಾದಾಯಿಕ ಮಳೆ ನಿಗದಿಯಂತೆ ಸುರಿದು ಈ ಬಾರಿಯಾದರೂ ಬರಗಾಲಕ್ಕೆ ಅಂತ್ಯ ಕಾಣಬಹುದೇ ಎಂಬ ವಿಶ್ವಾಸ ರೈತ ಸಮುದಾಯದಲ್ಲಿದೆ.

ಹೂಳೆತ್ತಿರುವ ಕೆರೆಗಳು, ಚೆಕ್‌ ಡ್ಯಾಂಗಳಲ್ಲಿ ನೀರು: ಈ ಮಧ್ಯೆ ಜಿಲ್ಲೆಯಲ್ಲಾಗಿರುವ ಮಳೆಯಿಂದಾಗಿ ಕೆಲವು ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿದೆ. ಕೆಲವು ಕೆರೆಗಳಲ್ಲಿಯೂ ನೀರು ಶೇಖರಣೆ ಆರಂಭವಾಗಿದೆ. ಕಾಂಗ್ರೆಸ್‌ ಮುಖಂಡ ಗಾಣಕಲ್‌ ನಟರಾಜ್‌ ಮತ್ತು ಜೆಡಿಎಸ್‌ ಮುಖಂಡ ವಿ.ನರಸಿಂಹಮೂರ್ತಿಯವರು ರಾಮನಗರ ತಾಲೂಕಿನ ಕೆಲವು ಕೆರೆಗಳಲ್ಲಿ ಹೂಳೆತ್ತಿದ್ದು, ಈ ಕೆರೆಗಳಲ್ಲಿ ನೀರು ತುಂಬಿದೆ. ನರೆಗಾ ಸೇರಿದಂತೆ ವಿವಿಧ ಯೋಜನೆಗಳಡಿಯಲ್ಲಿ ನಿರ್ಮಾಣವಾಗಿರುವ ಚೆಕ್‌ ಡ್ಯಾಂಗಳಲ್ಲೂ ನೀರು ಶೇಖರಣೆಯಾಗಿದೆ. ಇವು ಅಂತರ್ಜಲ ಮಟ್ಟ ಸುಧಾರಿಸುವುದೇ ಎಂಬ ಯಕ್ಷ ಪ್ರಶ್ನೆ ಜನರ ಮುಂದಿದೆ.

ತಾಲೂಕಿನ ಹೆಜಾjಲದ ಗೌಡನಕೆರೆ ಮತ್ತು ಅಂಕನಹಳ್ಳಿ ಕೆರೆಗಳಲ್ಲಿ ತಾವು ಹಾಗೂ ರೈತರು ಹೂಳೆತ್ತಿದ್ದು, ಇದೀಗ ಆಗಿರುವ ಮಳೆಯಿಂದಾಗಿ ಈ ಕೆರೆಗಳಲ್ಲಿ ನೀರು ತುಂಬಿದೆ. ತಮ್ಮ ಕಾರ್ಯವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಚೆಕ್‌ ಡ್ಯಾಂಗಳಲ್ಲೂ ಸಮೃದ್ಧಿಯಾಗಿ ನೀರು ತುಂಬಿದೆ. ಕೆರೆಗಳ ಹೂಳೆತ್ತಿದ ಸಾರ್ಥಕ ಭಾವ ತಮ್ಮಲ್ಲಿದೆ, ರೈತ ಸಮುದಾಯದ ಮೊಗದಲ್ಲಿ ನಗು ಮರುಕಳಿಸಿದರೆ ಅದೇ ಸೌಭಾಗ್ಯ
-ಗಾಣಕಲ್‌ ನಟರಾಜ್‌, ತಾಪಂಚಾಯ್ತಿ ಸದಸ್ಯ

ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ರೈತರಲ್ಲಿ ವಿಶ್ವಾಸ ಮೂಡಿದೆ. ಆದರೆ ಅಂತರ್ಜಲ ವೃದ್ಧಿಸಲು ಈ ಮಳೆ ಸಾಕಾಗದು. ಆದರೆ ಮಳೆ ಹೀಗೆ ಮುಂದುವರಿದರೆ ಕೃಷಿ ಚಟುವಟಿಕೆಗೆ ಪೂರಕವಾಗಲಿದೆ. ಆದರೆ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿ ಬಿಟ್ಟು ಬರಬೇಕಾಗಿದೆ. ಮಣ್ಣು ಪರೀಕ್ಷೆ ಮುಂತಾದ ಕೃಷಿ ಪೂರ್ವ ಚಟುವಟಿಕೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಯಾವ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು.
-ಲಕ್ಷ್ಮಣಸ್ವಾಮಿ, ಜಿಲ್ಲಾಧ್ಯಕ್ಷ, ರೈತ ಸಂಘ

* ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next