ಹುಣಸೂರು: ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಬಿಳಿಕೆರೆ ಹಾಗೂ ಕಸಬಾ ಹೋಬಳಿಯ ಗ್ರಾಮಗಳು ಮತ್ತು ಗುರುಪುರ ಭಾಗದಲ್ಲಿ ಸಾಕಷ್ಟು ನಷ್ಟ ಉಂಟುಮಾಡಿದ್ದು, ಗ್ರಾಮಸ್ಥರು ಸಂಕಷ್ಟಕ್ಕೊಳಗಾಗಿದ್ದಾರೆ. ಹಾನಿಗೀ ಡಾದ ಪ್ರದೇಶಗಳಿಗೆ ತಹಶೀಲ್ದಾರ್ ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದ ತಂಡ ಭೇಟಿಯಿತ್ತು ಪರಿಶೀಲನೆ ನಡೆಸಿದರು.
ಬಿಳಿಕೆರೆ ಹೋಬಳಿಯ ಕುಡಿನೀರು ಮುದ್ದನ ಹಳ್ಳಿ, ದಾಸನಪುರ, ಬ್ಯಾಡರಹಳ್ಳಿ ಕಾಲೋನಿ, ರತ್ನಪುರಿ, ಸೇರಿದಂತೆ ಕಸಬಾ ಹೋಬಳಿಯ ಚೌಡಿಕಟ್ಟೆ, ಕಲ್ಲುಮಂಟಿ, ಸಿದ್ದಲಿಂಗಪುರ, ಹನಗೋಡು ಹೋಬಳಿಯ ಮಾಜಿಗುರುಪುರ, ಕಾಳೇನಹಳ್ಳಿ, ಹೊಸೂರು ಕೊಡಗುಕಾಲೋನಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ನೂರಾರು ಮರ ಗಳು ಧರೆಗುರುಳಿವೆ. ಹಲವಾರು ಮನೆಗಳು ಜಖಂ ಗೊಂಡು, ಸಾಕಷ್ಟು ಬೆಳೆ ನಷ್ಟ ಉಂಟಾಗಿದೆ.
ಉಯಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಕುಡಿನೀರು ಮುದ್ದನಹಳ್ಳಿಯಲ್ಲಿ 27ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದರೆ, 4 ಮನೆಗಳಿಗೆ ಸಿಕ್ಕಾಪಟ್ಟೆ ಹಾನಿ ಸಂಭವಿಸಿದೆ. ಪುಟ್ಟಲಿಂಗಮ್ಮ, ತಿಮ್ಮಶೆಟ್ಟಿ, ಜಾಕೀರ್ ಹುಸೇನ್, ಅಬ್ಟಾಸ್, ಚಾಂದ್‌ಬಾಯ್ ಸೇರಿದಂತೆ ಹೆಚ್ಚು ಮನೆಗಳ ಚಾವಣಿ ಹಾರಿಹೋಗಿ ಮನೆಯೊಳಗಿದ್ದ ಆಹಾರ ಪದಾರ್ಥ ಸೇರಿದಂತೆ ಎಲ್ಲವೂ ನೀರು ಮಯ ವಾಗಿದೆ.
ಗ್ರಾಮದ ಕೆ.ಎಸ್ ನಾಗಣ್ಣಗೆ ಸೇರಿದ್ದ 3 ಎಕರೆ ಪಪ್ಪಾಯಿ, ಒಂದು ಎಕರೆ ನುಗ್ಗೆ ಬೆಳೆ ಸೇರಿದಂತೆ ಪಪ್ಪಾಯಿ ಬೆಳೆಯೊಳಗೆ ಅಳವಡಿಸಿದ್ದ ಆರು ಜೇನುಸಾಕಣೆ ಪೆಟ್ಟಿಗೆಯು ಹಾನಿಯಾಗಿದ್ದು, ಜೇನುಹುಳುಗಳು ಸಾವನ್ನಪ್ಪಿವೆ. ಚೆನ್ನಮ್ಮರಿಗೆ ಸೇರಿದ ಒಂದು ಎಕರೆ ಬೆಂಡೆ, ಒಂದು ಎಕರೆ ಗೆಣಸು, 15ಕ್ಕೂ ಹೆಚ್ಚು ಅಡಕೆ ಮರ ಉರುಳಿದರೆ, ಚೆಲುವರಾಜುಗೆ ಸೇರಿದ ಒಂದು ಎಕರೆ ಬಾಳೆ ಬಿರುಗಾಳಿಗೆ ನೆಲಕಚ್ಚಿವೆ.
ಅಲ್ಲದೆ ಹಲವರಿಗೆ ಸೇರಿದ 25ಕ್ಕೂ ಹೆಚ್ಚ ತೆಂಗಿನ ಮರಗಳು ಉರುಳಿ ಬಿದ್ದಿವೆ. ರಸ್ತೆ ಬದಿ, ಹೊಲಗಳಲ್ಲಿ ಮರಗಳು ನೆಲಕ್ಕೆ ಉರುಳಿವೆ. ತಂಬಾಕು ಸಸಿಮಡಿ ಕೊಚ್ಚಿ ಹೋಗಿವೆ. ಗ್ರಾಮದ ಐದಾರು ಕಡೆ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್‌ಕಂಬ ತುಂಡಾಗಿವೆ.
ಕುಡಿನೀರು ಮುದ್ದನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಚರಂಡಿ ನೀರು ನುಗ್ಗಿದೆ. ಅಲ್ಲದೆ ಹೆಂಚುಗಳು ಹಾರಿಹೋಗಿದ್ದು, ದಾಸ್ತಾನು ಮಾಡಿದ್ದ ಆಹಾರ ಪದಾರ್ಥಗಳು, ಪುಸ್ತಕ ಸೇರಿದಂತೆ ಎಲ್ಲ ವಸ್ತುಗಳು ಹಾನಿಯಾಗಿದೆ. ಚೌಡಿಕಟ್ಟೆಯಲ್ಲಿ ರಾಮಶೆಟ್ಟಿಗೆ ಸೇರಿದ 3 ಎಕರೆ ಹಾಗೂ ವೇಣುಗೋಪಾಲ್‌ಶೆಟ್ಟಿಯವರ ಫಲಕ್ಕೆ ಬಂದಿದ್ದ ಬಾಳೆಬೆಳೆ ಮಳೆಗೆ ನೆಲಕ್ಕೆ ಉರುಳಿದರೆ, ಕಲ್ಪನ ಡ್ಯಾನಿಯವರ ಮನೆ ಚಾವಣಿ ಹಾರಿಹೋಗಿದೆ.