Advertisement

ಮಳೆ ಕಾಟ; ಆಹಾರ ಉತ್ಪಾದನೆ ಖೋತಾ?

11:54 PM Nov 19, 2021 | Team Udayavani |

ಬೆಂಗಳೂರು: ರಾಜ್ಯದ ಬಹುತೇಕ ಕಡೆಗಳಲ್ಲಿ ಬೆಳೆಗಳು ಕಟಾವಿಗೆ ಬಂದಿರುವ ಸಮಯದಲ್ಲೇ ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆ ಆಹಾರ ಉತ್ಪಾದನೆ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದ್ದು, ನಿರೀಕ್ಷಿತ ಗುರಿ ಸಾಧನೆ ಅನುಮಾನವಾಗಿದೆ. ಇದು ಮುಂದಿನ ದಿನಗಳಲ್ಲಿ ರೈತರಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ಹೊರೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

Advertisement

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆಯು ಮುಂಗಾರು, ಹಿಂಗಾರು ಮತ್ತು ಬೇಸಗೆ ಮೂರೂ ಹಂಗಾಮು ಸೇರಿ 110 ಲಕ್ಷ ಹೆಕ್ಟೇರ್‌ಗಳಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಿ, 135.48 ಲಕ್ಷ ಟನ್‌ ಆಹಾರ ಮತ್ತು 15.23 ಲಕ್ಷ ಟನ್‌ ಎಣ್ಣೆಕಾಳು ಉತ್ಪಾದಿಸುವ ಗುರಿ ಹೊಂದಲಾಗಿತ್ತು. ಆದರೆ ಕಟಾವು ಮಾಡಿರುವ ಮತ್ತು ಕಟಾವಿಗೆ ಬಂದ ಭತ್ತ, ರಾಗಿ, ಮೆಕ್ಕೆಜೋಳ, ತೊಗರಿ, ಉದ್ದು ಸಹಿತ ಹಲವು ಬೆಳೆಗಳು ಮಳೆಗೆ ಸಿಲುಕಿ ಹಾಳಾಗಿವೆ. ಇದರಿಂದ ಉತ್ಪಾದನೆಯಲ್ಲಿ ಶೇ. 10ರಿಂದ ಶೇ. 15ರಷ್ಟು ಖೋತಾ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಆಹಾರ ಉತ್ಪಾದನೆ ಉತ್ತಮವಾಗಿದ್ದು, ಗುರಿಗಿಂತ ಹೆಚ್ಚು ಸಾಧನೆ ಮಾಡಲಾಗಿದೆ. 2020-21ರಲ್ಲಿ 110 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಿ, 133.05 ಲಕ್ಷ ಟನ್‌ ಉತ್ಪಾದನೆ ಗುರಿ ಹೊಂದಲಾಗಿತ್ತು. ಆ ವರ್ಷ ಸಕಾಲದಲ್ಲಿ ಉತ್ತಮ ಮಳೆಯಾದ್ದರಿಂದ 158.73 ಲಕ್ಷ ಟನ್‌ ಆಹಾರ, 12.02 ಲಕ್ಷ ಟನ್‌ ಎಣ್ಣೆಕಾಳು ಉತ್ಪಾದನೆ ಮಾಡಲು ಸಾಧ್ಯವಾಗಿತ್ತು. ಇನ್ನು 2019-20ರಲ್ಲಿ 138.67 ಲಕ್ಷ ಟನ್‌ ಆಹಾರಧಾನ್ಯ ಬೆಳೆಯುವ ಗುರಿ ಇತ್ತು. ಇದರಲ್ಲಿ 136.41 ಲಕ್ಷ ಟನ್‌ ಉತ್ಪಾದಿಸಲಾಗಿದೆ ಮಾಹಿತಿ ನೀಡಿದೆ.

ಇದನ್ನೂ ಓದಿ:ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ: ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

ರೈತರು ಕಂಗಾಲು
ಈ ಬಾರಿ ಕಟಾವಿಗೆ ಸರಿಯಾಗಿ ಮಳೆ ಆರಂಭವಾಗಿದೆ. ಅದರಲ್ಲೂ ನಿರಂತರವಾಗಿ ಸುರಿಯುತ್ತಿದ್ದು, ಬೆಂಗಳೂರು ನಗರ ಸಹಿತ ಹಲವೆಡೆ 15-20 ದಿನಗಳಿಂದ ವರುಣ ಬಿಡುವು ನೀಡಿಲ್ಲ. ಅಷ್ಟಕ್ಕೂ ಈ ಸಂದರ್ಭದಲ್ಲಿ ಮಳೆಯ ಅಗತ್ಯ ಇರುವುದಿಲ್ಲ. ಹಾಗಾಗಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಬೆಳೆದುನಿಂತಿದೆ. ಮಳೆಯಿಂದಾಗಿ ಈಗಾಗಲೇ ಹಲವೆಡೆ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದೆ. ಕಟಾವು ಮಾಡಿದ ಬೆಳೆಗಳನ್ನು ಒಣಗಿಸಲು ಕೂಡ ಆಗುತ್ತಿಲ್ಲ. ಇದರಿಂದ ಮೊಳಕೆ ಒಡೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿರೀಕ್ಷಿತ ಉತ್ಪಾದನೆ ಅನುಮಾನವಾಗಿದ್ದು, ಒಂದು ವೇಳೆ ಉತ್ಪಾದನೆಯಾದರೂ ಗುಣಮಟ್ಟ ಅಷ್ಟಕ್ಕಷ್ಟೇ ಇರಲಿದೆ ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next