Advertisement

ಅಮ್ಮನ ಮೇಲೆ ಮೂಡಿದ ಕಾಮನಬಿಲ್ಲು

01:37 PM May 15, 2018 | |

ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮಾತು ನಿಜ. ಜಗತ್ತಿನ ಪ್ರತಿ ಜೀವ ಸಂಕುಲಕ್ಕೂ ತಾಯಿಯೇ ಮೊದಲ ದೇವರು. ಬಡತನದಲ್ಲಿಯೇ ಬೆಳೆದ ನನಗೆ, ಅಮ್ಮನೇ ದಾರಿದೀಪ. ತನ್ನ ಮದುವೆಗೆ ಹೊಸ ಸೀರೆ ಉಟ್ಟಿದ್ದು ಬಿಟ್ಟರೆ, ಆಕೆ ಯಾವತ್ತೂ ಹೊಸ ಬಟ್ಟೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅವರ ಅಕ್ಕ ಕೊಟ್ಟರಷ್ಟೇ ಸೀರೆ ಎನ್ನುವ ಸ್ಥಿತಿ ಇತ್ತು. ಆಗ ನನಗೆ ಅನ್ನಿಸುತ್ತಿತ್ತು; ಅಮ್ಮನಿಗೆ ನಾ ಯಾವಾಗ ಹೊಸ ಸೀರೆ ತಂದುಕೊಡುತ್ತೇನೋ? ಅಂತ.

Advertisement

  ಆಗ ತಾನೆ ಪದವಿ ಮುಗಿಸಿ ಒಂದು ಶಿಕ್ಷಣ ಸಂಸ್ಥೆಯಲ್ಲಿ ತಾತ್ಕಾಲಿಕವಾಗಿ ಶಿಕ್ಷಕನಾಗಿ ಸೇವೆ ಸಲ್ಲಿಸಲು ಆರಂಭಿಸಿದೆ. ಪ್ರಾರಂಭದ ಒಂದು ತಿಂಗಳ ಸಂಬಳಕ್ಕಾಗಿ ಕಾದೆ. ಕೊನೆಗೂ ಮೂರು ಸಾವಿರ ರೂ. ಸಂಬಳ ನನ್ನ ಕೈ ಸೇರಿತು. ಅಂದು ಶಾಲೆ ಬಿಟ್ಟೊಡನೆ ಮೊದಲು ನಾನು ಹೋಗಿದ್ದು ಸೀರೆ ಅಂಗಡಿಗೆ. ಕಾಮನಬಿಲ್ಲಿನ ಬಣ್ಣಗಳನ್ನು ಹೊಂದಿರುವ ಒಂದು ಸುಂದರ ಸೀರೆಯನ್ನು ಪ್ಯಾಕ್‌ ಮಾಡಿಸಿಕೊಂಡು ಮನೆಯ ಕಡೆಗೆ ಹೊರಟೆ. ಮನೆಗೆ ಬಂದವನೇ ಅಮ್ಮನಿಗೆ ಕಣ್ಣು ಮುಚ್ಚಿಕೊಳ್ಳಲು ಹೇಳಿದೆ. ನಾನು ಮೆಲ್ಲನೆ ಅವಳ ಕೈಯಿಂದ, ಆ ಪ್ಯಾಕ್‌ ಅನ್ನು ಬಿಚ್ಚಿಸಿದೆ. 

  ಅಮ್ಮ ಕಣ್ತೆರೆದು ನೋಡಿದಳು. “ಆಹ್‌ ಸೀರೆ!’ ಎಂಬ ಅಚ್ಚರಿಯ ಉದ್ಗಾರ, ಆಕೆಯ ಬಾಯಿಯಲ್ಲಿ. ಅಮ್ಮನ ಕಣ್ಣಲ್ಲಿ ನೀರು ಜಿನುಗಿ, ಒಂದು ಹನಿ ಸೀರೆಯ ಮೇಲೆ ಬಿದ್ದಿತ್ತು. “ಮಗನೇ ಇಷ್ಟೊಂದು ದುಡ್ಡು ಖರ್ಚು ಮಾಡಿ ಇದನ್ನೇಕೆ ತಂದೆ?’ ಎಂದು ಹೇಳಿ ನನ್ನ ಹಣೆಗೊಂದು ಪ್ರೀತಿಯಿಂದ ಅಮೃತತ್ವದ ಮುತ್ತು ಕೊಟ್ಟಿದ್ದಳು ಅಮ್ಮ!

ಎಲ್. ಪಿ.ಕುಲಕರ್ಣಿ 

Advertisement

Udayavani is now on Telegram. Click here to join our channel and stay updated with the latest news.

Next