Advertisement

ರಾಜ್ಯದಲ್ಲಿ ಡಿ.13ರವರೆಗೆ ಮಳೆ ಮುಂದುವರಿಕೆ; 8 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಘೋಷಣೆ

09:04 PM Dec 10, 2022 | Team Udayavani |

ಬೆಂಗಳೂರು: ಮ್ಯಾಂಡಸ್‌ ಚಂಡಮಾರುತ ಪ್ರಭಾವದಿಂದ ರಾಜ್ಯದಲ್ಲಿ ಡಿ.13ರ ವರೆಗೆ ಮಳೆ ಮುಂದುವರಿಯಲಿದ್ದು, ರಾಜ್ಯದ 8 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

Advertisement

ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಡಿ.11ರಂದು ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಈ ಭಾಗಗಳಲ್ಲಿ ಮುಂದಿನ 2 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಡಿ.12ರಂದು ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮುಂದಿನ 2 ದಿನಗಳ ಕಾಲ ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ಡಿ.13 ರಿಂದ ಮತ್ತೆ ಸಹಜ ಸ್ಥಿತಿಗೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಶನಿವಾರ ಎಲ್ಲೆಲ್ಲಿ ಮಳೆ ?
ಶನಿವಾರ ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗದಲ್ಲಿ ಅಧಿಕ ಮಳೆಯಾಗಿದೆ. ಬೆಂಗಳೂರು ಸೇರಿ ದಕ್ಷಿಣ ಒಳನಾಡು, ಕರಾವಳಿ ಕರ್ನಾಟಕ, ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕೋಲಾರದ ರಾಯಲ್ಪಾಡುವಿನಲ್ಲಿ 3 ಸೆಂ.ಮೀ, ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ 2, ಕೋಲಾರದ ಮಾಲೂರಿನಲ್ಲಿ 1 ಸೆಂ.ಮೀ ಮಳೆಯಾಗಿದೆ. ದಾವಣಗೆರೆಯಲ್ಲಿ 13.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರುವ ಸಾಧ್ಯತೆಗಳಿದ್ದು, ಇದರಿಂದ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮಂಜು ಮುಸುಕುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಗರಿಷ್ಠ 21 ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ.

ಚಳಿಯೂ ಉಂಟಾಗಲಿದೆ:
ಚಂಡಮಾರುತದ ಪ್ರಭಾವವು ಡಿ.9ರಂದು ಚೆನ್ನೈನ ಕರಾವಳಿ ಭಾಗಗಳ ಮೇಲೆ ಬೀರಿತ್ತು. ಚೆನ್ನೈನಿಂದ ಕರ್ನಾಟಕದ ದ.ಒಳನಾಡಿನ ಕಡೆಗೆ ಬೀಸಿದ ಗಾಳಿಯಿಂದ ಈ ಭಾಗಗಳಲ್ಲಿ ಚಳಿಯಿಂದ ಕೂಡಿದ ಜಿಟಿ-ಜಿಟಿ ಮಳೆ ಉಂಟಾಗಿದೆ.

ಚಂಡಮಾರುತದ ಪ್ರಭಾವದಿಂದಲೇ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಚಳಿಯ ಪ್ರಮಾಣ ಅಧಿಕವಾಗಿದೆ. ಡಿ.11ರ ಬಳಿಕ ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಭಾವ ಬೀರುವ ಸಾಧ್ಯತೆಗಳಿವೆ. ಡಿ.13ರ ನಂತರ ಕರಾವಳಿ ಕರ್ನಾಟಕದಲ್ಲಿರುವ ಅರಬ್ಬಿ ಸಮುದ್ರದ ಮೂಲಕ ಗಾಳಿಯು ಬೇರೆಡೆ ಸಾಗಲಿದೆ. ನಂತರ ವಾತಾವರಣವು ಸಹಜ ಸ್ಥಿತಿಗೆ ಮರಳಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಅಂಡಮಾನಿನಲ್ಲಿ ವಾಯುಭಾರ ಕುಸಿತ ಉಂಟಾಗಿತ್ತು. ಜತೆಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ರಾಜ್ಯದ ವಾತಾವರಣದ ಮೇಲೆ ಪ್ರಭಾವ ಬೀರಿದೆ. ಮುಂದಿನ 2 ದಿನಗಳ ಕಾಲ ಚಳಿ ಹೆಚ್ಚಾಗಲಿದೆ.
– ಶ್ರೀನಿವಾಸ್‌ ರೆಡ್ಡಿ, ಹವಾಮಾನ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next