ಬೆಂಗಳೂರು/ಹುಬ್ಬಳ್ಳಿ/ಮಣಿಪಾಲ: ರಾಜಧಾನಿ ಬೆಂಗಳೂರು, ಕರಾವಳಿ ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ಮಂಗಳವಾರ ಹಿಂಗಾರು ಮಳೆ ಅಬ್ಬರ ಮುಂದುವರಿದಿದೆ.
ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ಯವ್ಯಸ್ತಗೊಂಡಿದೆ. ಯಾದಗಿರಿಯಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದೆ. ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ಕಲಬುರಗಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಗದಗ, ವಿಜಯಪುರ ಜಿಲ್ಲೆಗಳಲ್ಲೂ ದಿನವಿಡೀ ಸುರಿದ ಮಳೆಗೆ ಜನರು ಪರಿತಪಿಸಬೇಕಾಯಿತು.
ಯಾದಗಿರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಗುರುಮಠಕಲ್ ತಾಲೂಕಿನ ಯಲಸತ್ತಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ರೈತ ದೇವಪ್ಪ (38) ಮೃತಪಟ್ಟಿದ್ದಾರೆ. ಮೂವರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕುಗಳಲ್ಲಿ ಒಣಗಲಾ ರಂಭಿಸಿದ್ದ ಹಿಂಗಾರು ಬೆಳೆ ಗಳಿಗೆ ಜೀವ ಕಳೆ ಬಂದಿದೆ. ಹಾಸನ, ಅರಕಲಗೂಡು, ಆಲೂರು, ಬೇಲೂರು ತಾಲೂಕುಗಳಲ್ಲಿ ಮೆಕ್ಕೆ ಜೋಳ ಕಟಾವಿಗೆ ಬಂದಿದ್ದು, ನಿರಂತರ ಮಳೆ ಸುರಿದರೆ ಮೆಕ್ಕೆಜೋಳದ ಫಸಲು ಹಾಳಾಗಬಹುದೆಂಬ ಆತಂಕ ರೈತರನ್ನು ಕಾಡತೊಡಗಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಕೋಲಾರ ಜಿಲ್ಲೆಯ ಬಹುತೇಕ ಕಡೆ ಸುರಿಯುತ್ತಿರುವ ಜಡಿ ಮಳೆ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ದಕ್ಷಿಣ ಕನ್ನಡ, ಉಡುಪಿಯ ಜಿಲ್ಲೆಗಳಲ್ಲೂ ಮಂಗಳವಾರ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದೆ.
ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ: 18 ಜಿಲ್ಲೆಗೆ ಆರೆಂಜ್ ಅಲರ್ಟ್
ಬೆಂಗಳೂರು: ಬಂಗಾಲ ಉಪಸಾಗರದ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯಾದ್ಯಂತ ಅ. 19ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಈ ಜಿಲ್ಲೆಗಳಿಗೆ ಅ. 18ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.