Advertisement

ಮತ್ತೆ ಸೋರುತ್ತಿದೆ ವೇಣೂರು ಪ್ರಾ. ಆರೋಗ್ಯ ಕೇಂದ್ರ

02:25 AM Jun 28, 2018 | Team Udayavani |

ವೇಣೂರು: ಎರಡೆರಡು ಬಾರಿ ದುರಸ್ತಿ ಕಾರ್ಯ ನಡೆಸಿದ ಬಳಿಕವೂ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರ ಇದೀಗ ಮತ್ತೆ ಸೋರುತ್ತಿದೆ. ಕಟ್ಟಡದಲ್ಲಿ ನೀರು ಸೋರಿ ಕೊಠಡಿಗಳು ಈಜುಕೊಳದಂತಾಗಿರುವ ಬಗ್ಗೆ ಉದಯವಾಣಿ ಸುದಿನ 2017ರ ಮೇ 25ರಂದು ವರದಿ ಪ್ರಕಟಿಸಿತ್ತು. ವರದಿ ಆದರಿಸಿ ಕ್ರಮ ಕೈಗೊಂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸ್ಪತ್ರೆ ಕಟ್ಟಡದ ದುರಸ್ತಿ ಕಾರ್ಯ ನಡೆಸಿದರು. ಆದರೆ ದುರಸ್ತಿ ಕೆಲಸ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಸೋರುತ್ತಿದ್ದ ಮೇಲ್ಚಾವಣಿಗೆ ಹಾಕಿದ್ದ ಸಿಮೆಂಟ್‌ ಶೀಟ್‌ಗಳು, ಸಿಮೆಂಟ್‌ ಬ್ಲಾಕ್‌ ಗಳು ಅಕ್ಟೋಬರ್‌ ತಿಂಗಳಲ್ಲಿ ಮತ್ತೆ ಕುಸಿದು ಬಿದ್ದಿತ್ತು.  

Advertisement

ಈ ಬಗ್ಗೆ ಆಸ್ಪತ್ರೆ ಸಿಬಂದಿ ಸಂಬಂಧಿತ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರು. 2 ವಾರಗಳು ಕಳೆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲೇ ಇಲ್ಲ. ಘಟನೆಗೆ ಸಂಬಂಧಿಸಿ ವೇಣೂರು ಆರೋಗ್ಯ ಕೇಂದ್ರಕ್ಕೆ ಮತ್ತೆ ಅನಾರೋಗ್ಯ ಎಂಬ ಶಿರ್ಷಿಕೆಯಡಿ ಸುದಿನ ವರದಿ ಪ್ರಕಟಿಸಿತು. ವರದಿ ಗಮನಿಸಿ ತತ್‌ ಕ್ಷಣ ಎಚ್ಚೆತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಆಸ್ಪತ್ರೆಗೆ ದೌಡಾಯಿಸಿ, ಆದಿನವೇ ಆಸ್ಪತ್ರೆ ಕಟ್ಟಡದ ಮತ್ತೆ ದುರಸ್ತಿ ಕಾರ್ಯ ನಡೆಸಿದರು.


ಮುಂದುವರಿದ ಸಮಸ್ಯೆ

ಎರಡೆರಡು ಬಾರಿ ದುರಸ್ತಿಯ ಬಳಿಕವೂ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಇದೀಗ ಮತ್ತೆ ಸೋರುತ್ತಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಸೋರಿಕೆಯಿಂದ ಕೊಠಡಿಯೊಳಗೆ ನೀರು ಶೇಖರಣೆ ಆಗಿ ಕಟ್ಟಡ ಹಾಳಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸೋರಿಕೆ ಹೇಗೆ ?
ಸುಮಾರು 2001ರಲ್ಲಿ ನಿರ್ಮಾಣ ಮಾಡಲಾದ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಸುಸ್ಥಿತಿಯಲ್ಲೇ ಇದೆ. ಅಲ್ಲದೆ ಜಿ.ಪಂ. ಅನುದಾನದಡಿ ಕಳೆದ ಬಾರಿ ಸಾಕಷ್ಟು ನವೀಕರಣ ಮಾಡಲಾಗಿದೆ. ಕಟ್ಟಡದ ಮಧ್ಯ ಭಾಗದಲ್ಲಿ ಗಾರ್ಡನ್‌ ನಿರ್ಮಾಣ ಮಾಡುವ ಬಗ್ಗೆ ಯೋಜನೆ ನಿರ್ಮಿಸಿ ಬೆಳಕು ಬೀಳುವ ಉದ್ದೇಶದಿಂದ ತಾರಸಿಯನ್ನು ಮುಚ್ಚದೆ ತೆರೆದಿಟ್ಟು ಪ್ಲಾಸ್ಟಿಕ್‌ ಶೀಟ್‌ ಅಳವಡಿಸಲಾಗಿತ್ತು. ಆದರೆ ಬಳಿಕದ ದಿನಗಳಲ್ಲಿ ಗಾರ್ಡನ್‌ ನಿರ್ಮಿಸದೆ ಕೌಂಟರ್‌ ನಿರ್ಮಾಣಕ್ಕೆ ಸ್ಥಳಾವಕಾಶ ಕಾದಿರಿಸಲಾಗಿತ್ತು. ತಾರಸಿಯನ್ನು ಓಪನ್‌ ಇರಿಸಿದ್ದೇ ಇದೀಗ ಸಮಸ್ಯೆಗೆ ಮೂಲ ಕಾರಣ ಆಗಿದ್ದು, ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅವೈಜ್ಞಾನಿಕ ಕಾಮಗಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಎಂಜಿನಿಯರ್‌ ನೇರ ಹೊಣೆ
ವೇಣೂರು ಪ್ರಾ.ಆ. ಕೇಂದ್ರದ ಕಾಮಗಾರಿಯಲ್ಲಿ ಪದೇ ಪದೇ ಸಮಸ್ಯೆ ಉಂಟಾಗಲು ಎಂಜಿನಿಯರ್‌ ಅವರೇ ನೇರ ಹೊಣೆ. ಎರಡೆರಡು ಬಾರಿ ಸಮಸ್ಯೆ ಉಂಟಾದ ಕಾಮಗಾರಿಯನ್ನು ಎಂಜಿನಿಯರ್‌ ಅವರೇ ನಿಂತು ಮಾಡಿಸಬೇಕಾಗಿತ್ತು. ಕಳೆದ ಸಾಲಿನಲ್ಲಿ ಜಿ.ಪಂ.ನಿಂದ ಲಕ್ಷಾಂತರ ರೂ. ಅನುದಾನ ಇಲ್ಲಿಗೆ ಒದಗಿಸಿ ಕಟ್ಟಡದ ಪೂರ್ಣ ನವೀಕರಣ ಮಾಡಲಾಗಿದೆ. ಇನ್ನು ಗಾರ್ಡನ್‌ ನಿರ್ಮಿಸಲು ರೂ. 1 ಲಕ್ಷದಷ್ಟು ಅನುದಾನ ಮತ್ತೆ ದೊರೆಯಲಿದೆ. ಕಳಪೆ ಕಾಮಗಾರಿ ನಡೆಸಿದ ಎಂಜಿನಿಯರ್‌ ಹಾಗೂ ಗುತ್ತಿಗೆದಾರರ ಮೇಲೆ ಸಂಶಯ ಬರುವಂತೆ ಮಾಡಿದೆ. ತತ್‌ಕ್ಷಣ ಅವರೇ ಇದನ್ನು ದುರಸ್ತಿ ಮಾಡಿಸಬೇಕು.
– ಪಿ. ಧರಣೇಂದ್ರ ಕುಮಾರ್‌, ಜಿ.ಪಂ. ಸದಸ್ಯರು

Advertisement

ಶೀಘ್ರ ದುರಸ್ತಿ
ವೇಣೂರು ಪ್ರಾ. ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ನವೀಕರಣ ಕೆಲಸ ಮಾಡಲಾಗಿದೆ. ಗುತ್ತಿಗೆದಾರರು ಸರಿಯಾಗಿ ನಿರ್ವಹಿಸದ ಕಾರಣ ಅಲ್ಲಿ ಸಮಸ್ಯೆ ಮತ್ತೆ ಮತ್ತೆ ಸೃಷ್ಟಿಯಾಗಿದೆ. ಮತ್ತೆ ದುರಸ್ತಿಗೆ ಅನುದಾನಕ್ಕಾಗಿ ಸರಕಾರಕ್ಕೆ ಬರೆಯಲಾಗಿದ್ದು, ದುರಸ್ತಿ ಕಾರ್ಯ ಕೈಗೊಳ್ಳುತ್ತೇವೆ.
– ಡಾ| ಕಲಾಮಧು, ತಾಲೂಕು ವೈದ್ಯಾಧಿಕಾರಿ, ಬೆಳ್ತಂಗಡಿ

ಸಾರಣೆ ಮಾಡದೆ ಸಮಸ್ಯೆ
ತಾರಸಿಯ ಮೇಲೆ ಶೀಟ್‌ ಹಾಕಿ ಬದಿಗೆ ಕಾಂಕ್ರಿಟ್‌ ಹಾಕಲಾಗಿದೆ. ಕ್ಯೂರಿಂಗ್‌ ಆದ ಮೇಲೆ ಸಾರಣೆ ಮಾಡಿ ಎಂದು ತಿಳಿಸಿದ್ದೆ. ಆದರೆ ಗುತ್ತಿಗೆದಾರರು ಸಾರಣೆ ಮಾಡದೆ ಬಿಟ್ಟಿದ್ದರಿಂದ ನೀರು ಸೋರಿಕೆಯಾಗುತ್ತಿರಬಹುದು. ಮಳೆ ಕಡಿಮೆಯಾದ ತತ್‌ ಕ್ಷಣ ಕ್ರಮ ಕೈಗೊಳ್ಳುತ್ತೇವೆ.
– ತಮಣ್ಣ ಗೌಡ ಪಾಟೀಲ್‌, ಸಹಾಯಕ ಎಂಜಿನಿಯರ್‌, ಜಿ.ಪಂ. ಉಪವಿಭಾಗ ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next