Advertisement

Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ

12:34 AM Oct 18, 2024 | Team Udayavani |

ಹುಬ್ಬಳ್ಳಿ: ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ಕಟಾವಿಗೆ ಬಂದಿದ್ದ ಬೆಳೆ ಭಾರೀ ಪ್ರಮಾಣದಲ್ಲಿ ಹಾಳಾಗಿದ್ದು ರೈತರು ದಿಕ್ಕು ತೋಚದಂತಾಗಿದ್ದಾರೆ. ಹಾವೇರಿಯಲ್ಲಿ ಚರಂಡಿಗೆ ಬಿದ್ದು ಬಾಲಕ ಮೃತಪಟ್ಟರೆ, ಚಿತ್ರದುರ್ಗದಲ್ಲಿ ಮನೆ ಗೋಡೆ ಕುಸಿದು ವೃದ್ಧೆ ಅಸುನೀಗಿದ್ದಾರೆ.

Advertisement

ಹಾವೇರಿ ಜಿಲ್ಲೆಯಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದೆ. ಗುರುವಾರ ಬೆಳಗ್ಗೆ ಎಸ್ಪಿ ಕಚೇರಿ ಎದುರು ಮಳೆ ನೀರಿನಲ್ಲಿ ರಸ್ತೆ ಕಾಣದೆ ಚರಂಡಿಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ.

ಶಿವಾಜಿ ನಗರದ ನಿವಾಸಿ ನಿವೇದನ ಬಸವರಾಜ ಗುಡಿಗೇರ (12) ಬೆಳಗ್ಗೆ ತನ್ನ ಸಹಪಾಠಿಗಳೊಂದಿಗೆ ಶಿವಾಜಿ ನಗರದ ಬಳಿ ಗಿರಿಯಾಸ್‌ ಅಂಗಡಿ ಎದುರು ಆಟ ಆಡುತ್ತಿದ್ದ. ಈ ವೇಳೆ ತೆರೆದ ಕಾಲುವೆ ದಾಟಲು ಮುಂದಾದಾಗ ಕಾಲು ಜಾರಿ ಚರಂಡಿಯಲ್ಲಿ ಬಿದ್ದಿದ್ದಾನೆ. ಕಾರ್ಯಾಚರಣೆ ನಡೆಸಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾನೆ.

ಚಿತ್ರದುರ್ಗ ತಾಲೂಕು ಈಚಲನಾಗೇನಹಳ್ಳಿಯಲ್ಲಿ ಮನೆ ಗೋಡೆ ಕುಸಿದು ರಂಗಮ್ಮ (63) ಮೃತಪಟ್ಟಿದ್ದಾರೆ. ಹರಿಹರದ ಜೈಭೀಮ ನಗರದಲ್ಲಿ ಮನೆ ಗೋಡೆ ಕುಸಿದು ಬಾಲಕಿ ಆಯೇಷಾ (4) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆಯಲ್ಲಿ ಹರಿಹರ-ಹರಪನಹಳ್ಳಿ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ನೀರಿನಲ್ಲಿ ಮುಳುಗಿದ್ದರಿಂದ ರಸ್ತೆ ಮಾರ್ಗ ಬಂದ್‌ ಆಗಿದೆ. ದಾವಣಗೆರೆ-ಹಳೆ ಕುಂದುವಾಡ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಗಳೂರು ತಾಲೂಕಿನ ಜಿನಗಿ ಹಳ್ಳ ತುಂಬಿ ಹರಿಯುತ್ತಿದೆ. ಕೆರೆ ಕೋಡಿ ಹರಿದು ಹಿರೇಮಲ್ಲನಹೊಳೆ ಗ್ರಾಮ ಜಲಾವೃತವಾಗಿದ್ದರಿಂದ 40 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಹರಿಹರದಲ್ಲಿ ಕಾಲುವೆ ನೀರು ಮನೆಗಳಿಗೆ ನುಗ್ಗಿ 100 ಹೆಚ್ಚು ಕುಟುಂಗಳು ಅತಂತ್ರವಾಗಿವೆ. ಹೊಲಗಳಿಗೆ ನೀರು ನುಗ್ಗಿದ್ದರಿಂದ ಮೆಕ್ಕೆಜೋಳ, ಈರುಳ್ಳಿ ಬೆಳೆಗೆ ಅಪಾರ ಹಾನಿಯಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರಿಗೆ 31 ಸಾವಿರ ಹೆಕ್ಟೇರ್‌ ಈರುಳ್ಳಿ ಬೆಳೆಯಲಾಗಿತ್ತು. ಈ ಪೈಕಿ ಶೇ.25ರಷ್ಟು ಮಾತ್ರ ಕಟಾವು ಮಾಡಲಾಗಿದ್ದು ಶೇ.75ರಷ್ಟು ಬೆಳೆ ಹಾನಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು, ಸಿರಗುಪ್ಪ, ಕಂಪ್ಲಿಯಲ್ಲಿ ಸಾವಿರಾರು ಹೆಕ್ಟೇರ್‌ ಭತ್ತದ ಬೆಳೆ ನೆಲಕಚ್ಚಿದೆ. ಬೆಳಗಾವಿ ಜಿಲ್ಲೆಯಲ್ಲಿ ಗಾಳಿ ಮಳೆಗೆ ಕಬ್ಬು ನೆಲಕ್ಕುರುಳಿದೆ. ನೇಸರಗಿಯಲ್ಲಿ ಮನೆ ಗೋಡೆ ಕುಸಿದಿದ್ದು ಐವರು ಪಾರಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆ ನಷ್ಟವಾಗಿದೆ.

ಚಿತ್ರದುರ್ಗ ಜಿಲ್ಲೆ ಸಿರಿಗೆರೆ ತಾಲೂಕಿನ ಕೊಡಗವಳ್ಳಿ ಗ್ರಾಮದ ಕೆರೆ ತುಂಬಿ ತುಳುಕುತ್ತಿದ್ದು ಏರಿ ಕುಸಿಯುವ ಭೀತಿ ಎದುರಾಗಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ದೇವನೂರು ಗ್ರಾಮದಲ್ಲಿ ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿದ್ದ 150 ಕುರಿ ಹಾಗೂ ಮೂವರು ಕುರಿಗಾಹಿಗಳನ್ನು ರಕ್ಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next