ಹುಬ್ಬಳ್ಳಿ/ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ಬುಧವಾರವೂ ಹಿಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಧಾರಾಕಾರ ಮಳೆಗೆ ಮನೆಗಳ ಗೋಡೆಗಳು ಕುಸಿದಿವೆ.
ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕಟಾವಿಗೆ ಬಂದ ಈರುಳ್ಳಿ, ಮೆಕ್ಕೆಜೋಳ, ಭತ್ತ, ಹತ್ತಿ ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಡಹಳ್ಳಿಯಲ್ಲಿ ಹಿರೇಹಳ್ಳ ಉಕ್ಕಿ ಹರಿಯುತ್ತಿದ್ದು, ಕೊಕಟನೂರ ಯಲ್ಲಮ್ಮದೇವಿ ದೇವಸ್ಥಾನ ಜಲಾವೃತಗೊಂಡಿದೆ. ಬೆಳಗಾವಿ ತಾಲೂಕಿನಲ್ಲಿ 143 ಹೆಕ್ಟೇರ್, ಖಾನಾಪುರ ತಾಲೂಕಿನಲ್ಲಿ 8.13 ಹೆಕ್ಟೇರ್ ಪ್ರದೇಶದ ಭತ್ತ ಹಾನಿಯಾಗಿದೆ.
ಬಾಗಲಕೋಟೆ ತಾಲೂಕಿನ 6 ಗ್ರಾಮಗಳ ಸುಮಾರು 1,142 ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಕಳಸಕೊಪ್ಪ ಕೆರೆ ಕೋಡಿ ಬಿದ್ದಿದೆ. ಮುಧೋಳ ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ನೂರಾರು ಹೆಕ್ಟೇರ್ ಮೆಕ್ಕೆಜೋಳ, ಈರುಳ್ಳಿ ಬೆಳೆ ಹಾನಿಯಾಗಿದೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನಲ್ಲಿ ಸೋನಾ ಮಸೂರಿ, ಆರ್‌ಎನ್‌ಆರ್ ಭತ್ತದ ಬೆಳೆ ನೆಲಕ್ಕುರುಳಿವೆ. ಚಿಕ್ಕಮಗಳೂರು ತಾಲೂಕಿನ ಬಾಳೆಹೊನ್ನೂರಿನಿಂದ ಕಾರ್ಕಿ ಮೂಲಕ ಹಲಸೂರು ಸಂಪರ್ಕಿಸುವ ರಸ್ತೆ ಕುಸಿದು ಬಿದ್ದಿದೆ. ಕಾಫಿ, ಅಡಿಕೆ ಬೆಳೆಗೆ ಹಾನಿಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರದಲ್ಲಿ ಸಾಧಾರಣ ಮಳೆಯಾಗಿದೆ. ರಾಯಚೂರಿನಲ್ಲಿ ಭಾರೀ ಮಳೆಗೆ ಹತ್ತಿ ಬೆಳೆಗೆ ಹಾನಿಯಾಗಿದೆ.
ದ್ರಾಕ್ಷಿ ಬೆಳೆಗೆ ರೋಗ ಭೀತಿ
ಗದಗ ಜಿಲ್ಲೆಯಲ್ಲಿ ಈರುಳ್ಳಿ ಬೆಳೆ ರಕ್ಷಣೆಗೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನಲ್ಲಿ ಸತತ ಮಳೆ, ಮೋಡ ಕವಿದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ಡೌನಿ, ಕೊಳೆ, ಬೂದಿ ರೋಗ ಕಾಣಿಸಿಕೊಳ್ಳುತ್ತಿದ್ದು, ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಧಾರವಾಡ, ದಾವಣಗೆರೆ, ಚಿತ್ರದುರ್ಗದಲ್ಲಿ ಸಾಧಾರಣ ಮಳೆಯಾಗಿದೆ.