Advertisement

Bengaluru Rain: ಮಳೆಗೆ 4 ಬಡಾವಣೆ ನಿವಾಸಿಗಳ ಗುಳೆ!

10:36 AM Oct 17, 2024 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಎರಡು ದಿನ ನಿರಂತರ ಮಳೆಯಾಗಿದ್ದು, ನಗರದಲ್ಲಿ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ. ಮಂಗಳವಾರ ಬೆಂಗಳೂರಿನ ಜಿಕೆವಿಕೆ ಯಲ್ಲಿ 10 ಸೆಂ.ಮೀ. ಮಳೆ ಸುರಿದಿದ್ದು, ಇದು ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ.

Advertisement

ವಿವಿಧೆಡೆ 47 ಬೃಹತ್‌ ಮರಗಳು, 57 ರೆಂಬೆಕೊಂಬೆಗಳು ಬಿದ್ದಿವೆ. ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ- ಇಂದಿರಾ ನಗರ ನಿಲ್ದಾಣಗಳ ನಡುವೆ ಮರದ ಕೊಂಬೆ ಬಿದ್ದ ಪರಿಣಾಮ 2 ಗಂಟೆ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ಜೊತೆಗೆ ನೂರಾರು ಮನೆಗಳಿಗೆ ನೀರು ನುಗ್ಗಿವೆ. ನಿರಂತರ ಮಳೆಯಿಂದ 4 ಲೇಔಟ್‌ಗಳು ಸಂಪೂರ್ಣ ಮುಳುಗಡೆಯಾಗಿದ್ದು, ನಿವಾಸಿಗಳು ನರಕ ಯಾತನೆ ಅನುಭವಿಸಿದರು.

ಯಲಹಂಕ ಸಮೀಪದ ಕೇಂದ್ರಿಯ ವಿಹಾರ ಲೇಔಟ್‌, ರಮಣಶ್ರೀ ಕ್ಯಾಲಿಪೋರ್ನಿಯಾ ಲೇಔಟ್‌, ನಾರ್ತ್‌ ಹುಡ್‌ ವಿಲ್ಲಾ ಹಾಗೂ ಹೊರಮಾವು ಬಳಿಕ ಸಾಯಿ ಲೇಔಟ್‌ನ ಮನೆಗಳ ಒಳಗೆ ದಿಢೀರ್‌ ಎಂದು ನೀರು ನುಗ್ಗಿದ ಹಿನ್ನೆಲೆಯಲ್ಲಿ ನಿವಾಸಿಗಳು ರಾತ್ರಿಯಿಡೀ ಭಯದಲ್ಲಿ ಕಾಲ ಕಳೆದರು. ಮನೆಯಿಂದ ಹೊರಬರಲಾಗದೆ ಹಿರಿಯರು, ಪುಟಾಣಿ ಮಕ್ಕಳು ಅನ್ನ, ಆಹಾರವಿಲ್ಲದೆ ದಿನದೂಡಿದರು.

ಪಾರ್ಕಿಂಗ್‌ನಲ್ಲಿದ್ದ ಕಾರುಗಳು, ಬೈಕ್‌ಗಳು ಸಂಪೂರ್ಣ ವಾಗಿ ಮುಳುಗಿದ್ದವು. ಅಪಾಯದ ಸ್ಥಿತಿಯನ್ನು ಅರಿತ ಕೇಂದ್ರಿಯ ವಿಹಾರ ಲೇಔಟ್‌ ಹಾಗೂ ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್‌ ನಿವಾಸಿಗಳು ಹೋಟೆಲ್‌ ಹಾಗೂ ಸಂಬಂಧಿಕರ ಮನೆಗಳಿಗೆ ವಲಸೆ ಹೋದರು. ನಾರ್ತ್‌ ಹುಡ್‌ ವಿಲ್ಲಾ ನಿವಾಸಿಗಳು ಹೋಟೆಲ್‌ಗ‌ಳಿಗೆ ಸ್ಥಳಾಂತರಗೊಂಡರು. ಸಾಯಿಲೇಔಟ್‌ ನಿವಾಸಿಗಳಿಗೆ ಬಿಬಿಎಂಪಿ ವತಿಯಿಂದ ತೆರೆದಿದ್ದ ಆಶ್ರಯ ಕೇಂದ್ರದಲ್ಲಿ ಆಶ್ರಯ ನೀಡಲಾಯಿತು. ಈ ಬಡಾವಣೆಗಳಲ್ಲಿ ನಿಂತಿದ್ದ ಮಳೆ ನೀರನ್ನು ಪಂಪ್‌ಗ್ಳ ಮೂಲಕ ಹೊರಗೆ ಹಾಕಲಾಯಿತು. ರಾಜಕಾಲುವೆ ನೀರು ಭಾರೀ ಪ್ರಮಾಣದಲ್ಲಿ ನುಗ್ಗಿದ್ದರಿಂದ ಪ್ರವಾಹ ಸೃಷ್ಟಿಯಾಗಿತ್ತು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಖುದ್ದು ಈ ಲೇಔಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿರು. ಮನೆಯೊಳಗೆ ಸಿಲುಕಿದ್ದ ಜನರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದರು.

ಬಳಿಕ ಟ್ರ್ಯಾಕ್ಟರ್‌ಗಳ ಮೂಲಕ ಹೋಟೆಲ್‌, ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ಪ್ರತಿಬಾರಿಯೂ ನಗರದಲ್ಲಿ ಭಾರೀ ಮಳೆ ಸುರಿದರೆ ಈ ನಾಲ್ಕು ಲೇಔಟ್‌ಗಳು ಮುಳಗಡೆಯಾಗುತ್ತವೆ. ಮನೆಗಳಿಗೆ ನೀರು ನುಗ್ಗುತ್ತವೆ. ಜೀವಭಯದಲ್ಲಿ ಕಾಲ ಕಳೆಯಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜೊತೆಗೆ ನಗರದಲ್ಲಿ ಇತ್ತೀಚೆಗಷ್ಟೇ ದುರಸ್ತಿ ಮಾಡಲಾಗಿದ್ದ ರಸ್ತೆ ಗುಂಡಿಗಳು ಜಲ್ಲಿ ಸಹಿತ ಕಿತ್ತು ಬಂದಿವೆ. ಮೆಜೆಸ್ಟಿಕ್‌ ಬಳಿಯ ರಸ್ತೆಗಳು ಸೇರಿದಂತೆ ಸಾಕಷ್ಟು ರಸ್ತೆಗಳು ಹಾಳಾಗಿವೆ. ಬಿಬಿಎಂಪಿಯ ಕಳಪೆ ಕಾಮಗಾರಿಯಲ್ಲಿ ಈ ಮಳೆ ಬೆತ್ತಲೆ ಮಾಡಿದೆ. ನಗರದಲ್ಲಿ ಬುಧವಾರವೂ ಮಳೆ ಮುಂದುವರಿದಿದ್ದು, ಹಲವೆಡೆ ಸಾಧಾರಣ ಮಳೆಯಾಗಿದೆ. ಗುರುವಾರ ಕೂಡ ಮಳೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆ ಯಲ್ಲಿ ಗುರುವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.  ಪಾಲಿಕೆ ವ್ಯಾಪ್ತಿಯಲ್ಲಿ ನೀರು ನುಗ್ಗಿರುವ ಮನೆಗಳ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ವಿತರಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರೀಯ ವಿಹಾರ ಲೇಔಟ್‌: ಸಂಬಂಧಿಕರ ಮನೆಗೆ ವಲಸೆ: ಯಲಹಂಕ ದ ಕೆರೆಯ ನೀರು ಕೇಂದ್ರಿಯ ವಿಹಾರ್‌ ಅಪಾರ್ಟ್‌ಮೆಂಟ್‌ ಜಲಾವೃತ್ತವಾಗಿ ದ್ದರಿಂದ ಇಲ್ಲಿನ ನಿವಾಸಿಗಳು ಹೈರಾಣಾದರು. ಸುಮಾರು 603 ಅಪಾರ್ಟ್‌ಮೆಂಟ್‌ಗಳಲ್ಲಿ 2 ಸಾವಿ ರಕ್ಕೂ ಅಧಿಕ ಮಂದಿ ಇಲ್ಲಿ ನೆಲೆಸಿದ್ದಾರೆ. ಯಲಹಂಕ ಕೆರೆ ನೀರು ಅಪಾರ್ಟ್‌ಮೆಂಟ್‌ ತಳಪಾಯದ ಒಳ ನುಗ್ಗಿದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ ಒಳಗೆ ದಿನದೂಡಿದರು. 80ಕ್ಕೂ ಅಧಿಕ ಕಾರುಗಳು, 100ಕ್ಕೂ ಅಧಿಕ ಬೈಕ್‌ಗಳು ನೀರಿನಲ್ಲಿ ಮುಳುಗಿದ್ದವು. ಅಪಾಯದ ಪರಿಸ್ಥಿತಿ ಅರಿತ ಪಾಲಿಕೆ ಅಧಿಕಾರಿಗಳು, ಅಗ್ನಿಶಾಮಕ ದಳ ತಂಡ ಸ್ಥಳಕ್ಕೆ ದೌಡಾಯಿಸಿ ಟ್ರ್ಯಾಕ್ಟರ್‌ ಮೂಲಕ ಹಲವು ಜನರನ್ನು ಸುರಕ್ಷಿತ ದಡ ಸೇರಿಸಿದರು.

ಇನ್ನೂ ಕೆಲವರು ಸುರಕ್ಷತೆಯ ಹಿನ್ನೆಲೆಯಲ್ಲಿ ತಮ್ಮ ಸಂಬಂಧಿಕರ ಮನೆ ಸೇರಿದರು. ಈ ವೇಳೆ ಮಾತನಾಡಿದ ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರು, ನನ್ನ ಪತಿ ಕೇಂದ್ರ ಸರ್ಕಾರದ ಉದ್ಯೋಗಿ. ಈ ಹಿಂದೆ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಕರ್ನಾಟಕಕ್ಕೆ ಅವರಿಗೆ ವರ್ಗವಾಗಿದೆ. ಆ ಹಿನ್ನೆಲೆಯಲ್ಲಿ ಕೇಂದ್ರಿಯ ವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ಕಳೆದು 5 ವರ್ಷ ಗಳಿಂದ ನೆಲೆಸಿದ್ದೇವೆ. ಮಳೆ ಬಂತು ಎಂದರೆ ಇದೇ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಸುರಕ್ಷಿತ ದೃಷ್ಟಿಯಿಂದ ಸಂಬಂಧಿಕರ ಮನೆಗೆ ತೆರಳುತ್ತಿರುವುದಾಗಿ ಹೇಳಿದರು.

ರಕ್ಷಣಾ ಸಿಬ್ಬಂದಿಯಿಂದ ಜನರ ರಕ್ಷಣೆ: 20ಕೂ ಅಧಿಕ ರಕ್ಷಣಾ ಸಿಬ್ಬಂದಿ 2 ಟ್ರ್ಯಾಕ್ಟರ್‌ ಬಳಕೆ ಮಾಡಿ ಜನರಿಗೆ ಆಸರೆಯಾದರು. ಅಪಾರ್ಟ್‌ಮೆಂಟ್‌ ಸುತ್ತಮುತ್ತಾ ಸುಮಾರು 3 ಅಡಿ ನೀರು ನಿಂತಿದ್ದ ಹಿನ್ನೆಲೆಯಲ್ಲಿ ಹಲವು ಹೊತ್ತು ನೀರನ್ನು ಹೊರತೆಗೆಯುವ ಕೆಲಸ ಮಾಡಿದರು. ಬಿಸ್ಕತ್ತು, ಹಾಲು, ನೀರು, ಬ್ರೇಡ್‌ ನೀಡಿದರು. ಇಟಾಚಿ ಯಂತ್ರ ಬಳಸಿ ಒಳಚರಂಡಿಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿದರು. ಈ ವೇಳೆ ಮಾತನಾಡಿದ ಅಪಾರ್ಟ್‌ಮೆಂಟ್‌ ನಿವಾಸಿಯೊಬ್ಬರು, ಹಲವು ವರ್ಷಗಳಿಂದ ಈ ಸಮಸ್ಯೆ ಯಿದೆ. ಕಳೆದ ಸಲ ಮಳೆ ಬಂದಾಗಲೂ ಬೆಂಗಳೂರು ಉಸ್ತುವಾರಿ ಸಚಿವರು ಮತ್ತು ಪಾಲಿಕೆ ಮುಖ್ಯ ಆಯ್ತುರು ಭೇಟಿ ನೀಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ ಕಾಲುವೆ ಒತ್ತುವರಿ ಮಾಡಿ ಅಪಾರ್ಟ್‌ ಮೆಂಟ್‌ ನಿರ್ಮಾಣ ಮಾಡಲಾಗಿದೆ ಎಂದು ಸಬೂಬು ಹೇಳು ಸುಮ್ಮನಾಗುತ್ತಾರೆ ಎಂದು ದೂರಿದರು.

ನಾರ್ತ್‌ ಹುಡ್‌ ವಿಲ್ಲಾ ನಿವಾಸಿಗಳು ಹೋಟೆಲ್‌ ಗೆ ಯಲಹಂಕದ ನಾರ್ತ್‌ ಹುಡ್‌ ವಿಲ್ಲಾ ಸಂಪೂರ್ಣ ಜಲಾವೃತವಾಗಿದೆ. ಮಳೆ ನೀರು ತಗ್ಗಿದರೂ ಸಂಪ್‌ ಗಳಿಗೆ ನೀರು ನುಗ್ಗಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಜೊತೆಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿರುವುದರಿಂದ ಕೆಲ ನಿವಾಸಿಗಳು ಮನೆ ಖಾಲಿ ಮಾಡಿ ಹೋಟೆಲ್‌ಗ‌ಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್‌ ಒಳಗೂ ನೀರು ನುಗ್ಗಿದ್ದ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಲೇಔಟ್‌ ಒಳಗೆ ನುಗ್ಗಿದ ನೀರನ್ನು ಪಂಪ್‌ಗಳ ಮೂಲಕ ಹೊರತೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಸಿಬ್ಬಂದಿ ಮತ್ತು ರಕ್ಷಣ ತಂಡ ಪಂಪ್‌ ಸೆಟ್‌ಗಳ ಮೂಲಕ ನೀರು ಹೊರತೆಗೆದು ಸ್ಥಳೀಯ ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿತು. ರಾಜಕಾಲುವೆ ಒತ್ತುವರಿ ಮಾಡಿರುವುದೇ ಇಷ್ಟೇಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದರು.

ಸಾಯಿ ಲೇಔಟ್‌ ನಿವಾಸಿಗಳಿಗೆ ಆಶ್ರಯ ಕೇಂದ್ರದಲ್ಲಿ ಆಸರೆ: ಹೊರಮಾವು ಬಳಿಯ ಸಾಯಿಲೇಔಟ್‌ ನಿವಾಸಿಗಳು ಮಳೆಗೆ ಅಕ್ಷರಶಃ ನರ ಳಾಡಿ ಹೋದರು. ಸಾಕಪ್ಪ ಸಾಕು ಜೀವನ ಎಂಬ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ರಾಜಕಾಲುವೆ ನೀರು ರಸ್ತೆಗಳಲ್ಲಿ ಉಕ್ಕಿ ಮನೆಗಳಿ ಗೆ ನುಗ್ಗಿದ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿದ್ದ ವಸ್ತುಗಳನ್ನು ಸಂರಕ್ಷಿಸಿಕೊಳ್ಳಲು ಹರಸಾಹಸ ಪಟ್ಟರು. ಪ್ರತಿ ಸಲ ಮಳೆ ಬಂದರೆ ಸಾಯಿ ಲೇಔಟ್‌ಗೆ ರಾಜಕಾಲುವೆ ನೀರು ಹರಿದ ಹಲವು ಅವಾಂತರಗಳನ್ನು ಸೃಷ್ಟಿ ಮಾಡುತ್ತದೆ. ಈ ಬಾರಿ ಕೂಡ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಹಲವು ಮನೆಗಳ ಒಳಗೆ ನೀರು ನುಗ್ಗಿದೆ. ಜತೆಗೆ ರಾಜಕಾಲುವೆ ಕೊಳಚೆ ನೀರು ಸಂಪೂರ್ಣವಾಗಿ ಕುಡಿಯುವ ನೀರಿನ ಸಂಪ್‌ ಒಳಗೆ ಸೇರಿದ್ದು, ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಟ ನಡೆಸಿದರು. ಆಹಾರ ಇಲ್ಲದೆ ಮನೆಯಿಂದ ಹೊರಬರಲಾರದೆ ಒದ್ದಾಡಿದರು. ಹಲವು ಮನೆಗಳ ಅರ್ಧ ಗೇಟ್‌ಗಳು ಮುಳುಗಿದ್ದ ದೃಶ್ಯ ಕಂಡು ಬಂತು. ಅಪಾಯದ ಹಿನ್ನೆಲೆಯಲ್ಲಿ ಕೆಲವರು ಹೋಟೆಲ್‌ ಮತ್ತು ಸಂಬಂಧಿಕರ ಮನೆಯ ಆಶ್ರಯ ಪಡೆದರು.

ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಹೊತ್ತು ಜನರು ಸುರಕ್ಷಿತ ಪ್ರದೇಶದತ್ತ ಮುಖ ಮಾಡಿದರು. ಆಹಾರ, ನೀರು ನೀಡಿ ಮಾನವೀಯತೆ ಭಾರಿ ಮಳೆಯ ಹಿನ್ನೆಲೆಯಲ್ಲಿ ಅನ್ನ ಆಹಾರವಿಲ್ಲದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಯಿತು. ಆ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ನೆರೆ ಹೊರೆಯವರು ಆಹಾರ, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದರು.

ಇದಾದ ಬಳಿಕ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಅಪಾರ ಪ್ರಮಾಣದ ನೀರನ್ನು ಹೊರಹಾಕುವ ಕೆಲಸ ಮಾಡಿದರು. ಜತೆಗೆ ಟ್ರ್ಯಾಕ್ಟರ್‌ ಮೂಲಕ ಶುದ್ಧ ಕುಡಿಯುವ ನೀರು ಪೊರೈಸಿದರು. ಸಾಯಿಲೇಔಟ್‌ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಮನೆಗಳಿವೆ. ಪ್ರತಿ ಸಲ ಮಳೆ ಬಂದಾಗಲೂ ಇದೇ ಪರಿಸ್ಥಿತಿ ತಲೆದೂರಲಿದೆ. ರಾಜಕಾಲುವೆ ಕಾಮಗಾರಿಯ ವಿಳಂಬದ ಹಿನ್ನೆಲೆಯಲ್ಲಿ ಈ ಎಲ್ಲ ಸಮಸ್ಯೆ ಎದುರಾಗುತ್ತಿವೆ ಎಂದು ಆಳಲು ತೊಡಿಕೊಂಡರು. ಕುಡಿಯಲು ನೀರಿಲ್ಲ. ಅಡುಗೆ ಮಾಡಲು ನೀರಿಲ್ಲ. ಮನೆಯೊಳಗೆ ಇಟ್ಟಿದ್ದ ವಸ್ತುಗಳು ಸಂಪೂರ್ಣ ಹಾನಿಯಾಗಿ ವೆ. ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಗೃಹಿಣಿಯೊಬ್ಬರು ದೂರಿದರು.

ರಾಜಕಾಲುವೆ ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆ ಪರಿಹಾರ: ಎಂಜಿನಿಯರ್‌: ಪಾಲಿಕೆಯ ಸ್ಥಳೀಯ ಸಹಾಯಕ ಎಂಜಿನಿಯರ್‌ ಮಾತನಾಡಿ, ಮನೆಯೊಳಗೆ ನೀರು ನುಗ್ಗಿ ಪರದಾಡುತ್ತಿದ್ದ ನಿವಾಸಿಗಳನ್ನು ರಕ್ಷಿಸಲಾಗಿದೆ. ಆಶ್ರಯ ಕೇಂದ್ರಗಳಲ್ಲಿ ಅವರಿಗೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಊಟ, ಬೆಳಗ್ಗೆ ಉಪಾಹಾರ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಔಷಧೋಪಚಾರವನ್ನು ಕೂಡ ಮಾಡಲಾಗಿದೆ. ಜಲಮಂಡಳಿಯ ಟ್ಯಾಂಕರ್‌ ಅಳವಡಿಸಿ ಸ್ನಾನ ಮಾಡಲು ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.

ಹೆಬ್ಬಾಳ, ಬಾಣಸವಾಡಿ, ಮಾನ್ಯತಾ ಟೆಕ್‌ ಪಾರ್ಕ್‌ನ ನೀರೆಲ್ಲವೂ ಈ ರಾಜಕಾಲುವೆ ಮೂಲಕವೇ ಹಾದು ಹೋಗಲಿದೆ. ಈಗಾಗಲೇ ರಾಜಕಾಲುವೆ ಕೆಲಸಗಳು ನಡೆಯುತ್ತಿದ್ದು ಅದು ಪೂರ್ತಿಗೊಂಡ ಬಳಿಕ ಈ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next