Advertisement

Rain; ಕರಾವಳಿಯ ವಿವಿಧೆಡೆ ಸಿಡಿಲಬ್ಬರದ ಮಳೆ:ಇನ್ನೂ 2 ದಿನ ಮುಂದುವರಿಯುವ ಸಾಧ್ಯತೆ

11:56 PM Nov 05, 2023 | Team Udayavani |

ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಹಿಂಗಾರು ಚುರುಕುಗೊಂಡಿದ್ದು, ಹಲವು ಕಡೆ ಗಳಲ್ಲಿ ರವಿವಾರ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.

Advertisement

ಮಂಗಳೂರು, ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ ಸಹಿತ ದ.ಕ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಜೆ ಬಳಿಕ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ. ಗ್ರಾಮೀಣ ಭಾಗದಲ್ಲಿ ಆಗಾಗ ವಿದ್ಯುತ್‌ ಪೂರೈಕೆ ಕಡಿತವಾಗುತ್ತಿತ್ತು.

ಮಣಿಪಾಲ, ಪಡುಬಿದ್ರಿ, ಕಾಪು, ಕಟಪಾಡಿ, ಉದ್ಯಾವರ, ಬ್ರಹ್ಮಾವರ, ಕೋಟ, ಸಾಲಿಗ್ರಾಮ, ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ ಸಹಿತ ಉಡುಪಿ ಜಿಲ್ಲೆ ವಿವಿಧೆಗಳಲ್ಲಿ ಸಂಜೆ, ರಾತ್ರಿ ಮಳೆ ಸುರಿಯಿತು.

ಇನ್ನೂ 2 ದಿನ ಮಳೆ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ನ. 6ರಿಂದ 8ರ ವರೆಗೆ ಎಲ್ಲೋ ಅಲರ್ಟ್‌ ಘೋಷಿಸಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ 30.1 ಡಿ.ಸೆ. ಗರಿಷ್ಠ ಮತ್ತು 24.1 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

ಉಜಿರೆ: ವಿದ್ಯುತ್‌ ಟವರ್‌ ಕುಸಿದು ವಾಹನಗಳಿಗೆ ಹಾನಿ

Advertisement

ಭಾರೀ ಮಳೆಯ ಪರಿಣಾಮ ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್‌ ಬಳಿ ಉಜಿರೆ-ಧರ್ಮಸ್ಥಳ ವಿದ್ಯುತ್‌ ಸಂಪರ್ಕದ ಮುಖ್ಯ ಲೈನ್‌ನ ಟವರ್‌ ಕುಸಿದು ಬಿದ್ದು ಒಂದು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ.

ರಾತ್ರಿ ವೇಳೆ ವಿದ್ಯುತ್‌ ಟವರ್‌ ನೆಲದತ್ತ ಬಾಗುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್‌ ಮ್ಯಾನ್‌ ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಂಬಂಧಪಟ್ಟವರು ಆಗಮಿಸಿ ಸ್ಥಳದಲ್ಲಿ ವಾಹನ ನಿಲ್ಲಿಸಿ, ಪರಿಶೀಲನೆಗೆ ತೆರಳುತ್ತಿದ್ದಂತೆ ವಿದ್ಯುತ್‌ ಟವರ್‌ ವಾಹನಗಳ ಮೇಲೆಯೇ ಕುಸಿದು ಬಿದ್ದಿದೆ. ಸ್ಥಳದಲ್ಲಿದ್ದವರು ಸಣ್ಣ, ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮೆಸ್ಕಾಂನ ತುರ್ತು ಸ್ಪಂದನೆಯಿಂದ ಹೆಚ್ಚಿನ ಅಪಾಯ ತಪ್ಪಿದೆ. ಟವರ್‌ ಕುಸಿತದ ಕಾರಣ ಧರ್ಮಸ್ಥಳ ಭಾಗದ ವಿದ್ಯುತ್‌ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಸಿಡಿಲು ಬಡಿದು ಮನೆಗೆ ಹಾನಿ
ಕುವೆಟ್ಟು ಗ್ರಾ.ಪಂ.ನ ಪಿಲಿಚಂಡಿ ಕಲ್ಲು ಒಂದನೇ ವಾರ್ಡಿನ ನಿವಾಸಿ ಶೇಕ್‌ ಇಮಾಮ್‌ ಸಾಹೇಬ್‌ ಅವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್‌ ಸಂಪರ್ಕ ಹಾಗೂ ಮನೆಯ ಕಟ್ಟಡದ ಗೋಡೆಗಳಿಗೆ ಹಾನಿಯಾಗಿದೆ. ಮನೆಗೆ ಸ್ಥಳೀಯ ಗ್ರಾ.ಪಂ. ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರು ವಂತೆಯೇ ಬೆಳ್ತಂಗಡಿ ಹಳೆಕೋಟೆ, ಚರ್ಚ್‌ ತಿರುವು ರಸ್ತೆಯ ಬಳಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ರವಿವಾರ ಸಂಜೆ ಮಳೆಗೆ ಭಾರೀ ನೀರು ರಸ್ತೆಯ ಮೇಲೆಯೇ
ಹರಿದು ರಸ್ತೆಯ ಒಂದು ಪಾರ್ಶ್ವದಲ್ಲಿರುವ ಮಿನಿ ಕ್ಯಾಂಟೀನ್‌ ಮತ್ತು ಗೂಡಂಗಡಿಗೆ ಚರಂಡಿ ನೀರು ನುಗ್ಗಿ ತೊಂದರೆ ಎದುರಾಗಿದೆ.

ಹೆಬ್ರಿ ಸುತ್ತಮುತ್ತ ಭಾರೀ ಮಳೆ; ಹೆದ್ದಾರಿ ಕೆಸರುಮಯ

ಹೆಬ್ರಿ ಹಾಗೂ ಪರಿಸರ ದಲ್ಲಿ ರವಿವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಹೆಬ್ರಿ – ಉಡುಪಿ ನಡುವೆ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಚರಂಡಿಯ ಕೆಲಸ ನಡೆಯುತ್ತಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆಯಿಡೀ ಕೆಸರುಮಯವಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮಳೆಯ ನಡುವೆಯೂ ರಸ್ತೆ ಕಾಮಗಾರಿ ಗುತ್ತಿಗೆದಾರರು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆಯಲ್ಲಿ ನಿಂತ ನೀರನ್ನು ಜೆಸಿಬಿ ಮೂಲಕ ಹೊರ ಹರಿಯುವಂತೆ ಮಾಡಿದರು. ಆದರೆ ಹೊಸದಾಗಿ ಹಾಕಿದ ಮಣ್ಣು ಆದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ಧರ್ಮಸ್ಥಳ: 4 ಸೆಂ.ಮೀ. ಮಳೆ
ರವಿವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಯಿತು. ಧರ್ಮಸ್ಥಳ, ಸೋಮವಾರಪೇಟೆ, ಹುಣಸೂರು, ಸಕಲೇಶಪುರಗಳಲ್ಲಿ ಗರಿಷ್ಠ 4 ಸೆಂ.ಮೀ. ಮಳೆಯಾಗಿದೆ.

ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ (ಸೆಂ.ಮೀ.ಗಳಲ್ಲಿ): ಮಂಗಳೂರು, ಬೆಂಗಳೂರು ಎಚ್‌ಎಎಲ್‌ ವಿಮಾನನಿಲ್ದಾಣ, ರಾಮನಗರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಮಡಿಕೇರಿ 3, ಪುತ್ತೂರು, ಬೆಳ್ತಂಗಡಿ, ಕಳಸ, ಭಾಗಮಂಡಲ, ಮಡಿಕೇರಿ, ದೇವನಹಳ್ಳಿ, ಮಾಗಡಿ, ಕೊಳ್ಳೇಗಾಲ, ಪೊನ್ನಂಪೇಟೆ 2, ಉಪ್ಪಿನಂಗಡಿ, ಮಾಣಿ, ಮದ್ದೂರು, ರಾಯಲ್ಪಡು, ಹೊಸ್ಕೋಟೆ, ದೊಡ್ಡಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಕೆಐಎಎಲ್‌ ತಲಾ 1.ರಾಜ್ಯದೆಲ್ಲೆಡೆ ಕನಿಷ್ಠ ತಾಪಮಾನದಲ್ಲಿ ಹೆಚ್ಚೇನೂ ಬದಲಾವಣೆ ಕಂಡು ಬರಲಿಲ್ಲ. ವಿಜಯಪುರದಲ್ಲಿ ರಾಜ್ಯದಲ್ಲಿಯೇ ಕನಿಷ್ಠ 18 ಡಿ.ಸೆ. ತಾಪಮಾನ ದಾಖಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next