Advertisement
ಯಾವಾಗ ನಿಲ್ಲುತ್ತಪ್ಪಾ ಈ ಮಳೆ, ಸಾಕಾಗಿ ಹೋಯಿತು. ನವರಾತ್ರಿ ಕಳೆದು, ದೀಪಾವಳಿ ಮುಗಿದು ಕೆಲವು ವಾರಗಳೇ ಸಂದರೂ ಮಳೆ ಮಾತ್ರ ನಿಲ್ಲುತ್ತಿಲ್ಲ. ಮಳೆಗಾಲದ ಪ್ರಾರಂಭದಲ್ಲಿ ಇರುವಂತೆ ಎಲ್ಲೆಲ್ಲೂ ಗಿಜಿ ಗಿಜಿ. ಯಾವಾಗ ಈ ಮಳೆ ನಿಲ್ಲುತ್ತದೆಯೋ… ಈ ರೀತಿಯ ಉದ್ಗಾರಗಳು ಈಗ ಎಲ್ಲರ ಬಾಯಲ್ಲೂ ಕೇಳಿಬರುತ್ತಿವೆ.
ಇದು ಈ ವರ್ಷ ಏಕಾಏಕಿಯಾಗಿ ಉದ್ಭವಿಸಿದ ಸಮಸ್ಯೆ ಏನಲ್ಲ. ಕಳೆದ ಕೆಲವು ವರ್ಷಗಳಿಂದೀಚೆಗೆ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಆದರೆ ಈ ಬಾರಿಯಂತೂ ಋತುಮಾನ ಚಕ್ರವೇ ಅದಲುಬದಲಾದಂತೆ ತೋರು ತ್ತಿದೆ. ಆದರೆ ಈ ಎಲ್ಲ ಸಮಸ್ಯೆಗೆ ಕಾರಣೀಭೂತರು ನಾವು ಮತ್ತು ನಮ್ಮ ಆಡಳಿತ ವ್ಯವಸ್ಥೆ ಎಂದರೆ ಅದರಲ್ಲಿ ಕಿಂಚಿತ್ ಅತಿಶಯೋಕ್ತಿ ಇರಲಾರದು. ಯಾಕೆ ಹೀಗೆ?
ಅರಬಿ ಸಮುದ್ರ ಬಿಸಿಯಾಗಿದೆ: ಭಾರತದ ಪಶ್ಚಿಮದ ಅರಬಿ ಸಮುದ್ರವು, ಪೂರ್ವದ ಬಂಗಾಲ ಕೊಲ್ಲಿಗಿಂತ ಯಾವಾಗಲೂ ತಂಪು. ವಿಜ್ಞಾನಿಗಳ ಪ್ರಕಾರ ಇಲ್ಲಿಯವರೆಗೆ ಅರಬಿ ಸಮುದ್ರದ ಸರಾಸರಿ ಉಷ್ಣತೆ 28 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ. ಆದರೆ ಬಂಗಾಲ ಕೊಲ್ಲಿಯ ಉಷ್ಣತೆ 31 ಡಿ. ಸೆ.ಗಿಂತ ಹೆಚ್ಚು. ಚಂಡಮಾರುತ ಸೃಷ್ಟಿಯಾಗಬೇಕಾದರೆ ಸಮುದ್ರದ ಉಷ್ಣತೆಯ ಮಿತಿ 28 ಡಿ. ಸೆ.ಗಳಷ್ಟಿರಬೇಕು. ಮುಂಗಾರು ಮಳೆ ಪ್ರಾರಂಭ ಹಾಗೂ ಮುಗಿಯುವ ಕಾಲದಲ್ಲಿ ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ಹೆಚ್ಚು. ಅರಬಿ ಸಮುದ್ರದಲ್ಲಿ ಚಂಡ ಮಾರುತ ಅತೀ ವಿರಳ. ವಿಜ್ಞಾನಿಗಳ ಪ್ರಕಾರ ಈಗ ಅರಬಿ ಸಮುದ್ರದ ಉಷ್ಣತೆ ಮಾಮೂಲಿಗಿಂತ ಹೆಚ್ಚಾಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಅರಬಿ ಸಮುದ್ರದಲ್ಲಿ ಚಂಡಮಾರುತ ಹೆಚ್ಚಾಗುತ್ತಿದೆ. ಸರಾಸರಿ 27 ಡಿಗ್ರಿ ಉಷ್ಣತೆಯಿಂದ ತಂಪಾಗಿದ್ದ ಅರಬಿ ಸಮುದ್ರ ಈಗ 29 ಡಿಗ್ರಿಗಿಂತಲೂ ಅಧಿಕವಾಗಿರುವುದರಿಂದ ಬಂಗಾಲ ಕೊಲ್ಲಿಯಲ್ಲಿ ಸಂಭವಿಸುವಂತೆ ಇಲ್ಲೂ ಚಂಡಮಾರುತ ಹೆಚ್ಚಾಗುತ್ತಿದೆ. ಇದೊಂದು ಎಚ್ಚರಿಕೆಯ ಕರೆಗಂಟೆ.
Related Articles
Advertisement
ಹವಾಮಾನ ಬದಲಾವಣೆಈಗ ಅತೀ ಹೆಚ್ಚು ಮಳೆ, ಚಳಿಗಾಲದಲ್ಲಿ ತಡೆದು ಕೊಳ್ಳಲಾಗದ ಚಳಿ ಹಾಗೂ ಮೈ ಸುಟ್ಟೇ ಹೋಗುವುದೋ ಎನ್ನುವಂತಹ ಬಿಸಿಲು, ಅನೇಕ ಚಂಡಮಾರುತಗಳು ಈ ಎಲ್ಲ ಹವಾಮಾನ ಬದಲಾವಣೆ, ವೈಪರೀತ್ಯಗಳಿಗೆ ಪ್ರಮುಖ ಕಾರಣಗಳೆಂದರೆ ಪಶ್ಚಿಮ ಘಟ್ಟಗಳ ನಾಶ ಮತ್ತು ಭೂಮಿಯ ವಾತಾವರಣದ ಉಷ್ಣತೆ ಏರಿಕೆ.
ಪ್ರಕೃತಿ ರಮ್ಯ ಪಶ್ಚಿಮ ಘಟ್ಟಗಳ ನಾಶ: ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳಗಳನ್ನು ಅಪ್ಪಿಕೊಂಡಿರುವ ಭಾರತದ ಭವ್ಯ ಪಶ್ಚಿಮ ಘಟ್ಟದ ಸಾಲುಗಳಲ್ಲಿ ಅತಿಯಾದ ಅರಣ್ಯ ನಾಶ ಹಾಗೂ ಗಣಿಗಾರಿಕೆ ಈ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣ. ಸುಮಾರು 1,600 ಕಿ.ಮೀ. ಉದ್ದವಿರುವ ಈ ಪರ್ವತ ಶ್ರೇಣಿಯು 1,40,000 ಚದರ ಕಿ.ಮೀ. ವ್ಯಾಪಿಸಿದೆ. ವಿಶ್ವ ಜೀವ ವೈವಿಧ್ಯತೆಯ ತಾಣವಾಗಿರುವ ಈ ನಮ್ಮ ಪಶ್ಚಿಮ ಘಟ್ಟ ದಕ್ಷಿಣ ಭಾರತದಲ್ಲಿರುವ ಅನೇಕ ನದಿಗಳ ಉಗಮ ತಾಣ. ಕಳೆದ 17 ವರ್ಷಗಳಲ್ಲಿ ಸುಮಾರು 20,000 ಹೆಕ್ಟೇರ್ ಅರಣ್ಯ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಲಕ್ಷೋಪಲಕ್ಷ ವರ್ಷಗಳಿಂದ ಬೆಳೆದುಬಂದಿರುವ ಈ ಹಸುರು ಸಂಪತ್ತಿನ ನಾಶ ಸರಿಪಡಿಸಲಸಾಧ್ಯ. ಇದರ ಪರಿಣಾಮ ಈ ವಿಚಿತ್ರ ಹವಾಮಾನ ಬದಲಾವಣೆಗಳೆಂದು ವಿಜ್ಞಾನಿಗಳು ಅನೇಕ ಬಾರಿ ಎಚ್ಚರಿಸಿದ್ದರು. ಈಗ ನಡುಕ ಹುಟ್ಟುವ ರೀತಿಯಲ್ಲಿ ಪ್ರಕೃತಿ ಮುನಿದಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರವು ಕೇರಳದ ಭೂ ಕುಸಿತ, ನೆರೆ ಹಾವಳಿಗೆ 2019ರಲ್ಲೇ ಕಾಡು ನಾಶ ಮತ್ತು ಮಳೆಯ ಅವಾಂತರಗಳ ನೇರ ಸಂಬಂಧವನ್ನು ತಿಳಿಸಿ ಎಚ್ಚರಿಸಿದೆ. ಪಶ್ಚಿಮ ಘಟ್ಟದ ಪರಿಸರ ನಾಶದಿಂದ ಇಡೀ ದೇಶದಲ್ಲಿ ಮುಂಗಾರು, ಹಿಂಗಾರು ಮಳೆಗಳ ಅವ್ಯವಸ್ಥೆಯನ್ನು ಗಮನಿಸಬಹುದು. ಭೂಮಿಯ ವಾತಾವರಣದ ಉಷ್ಣತೆ ಏರಿಕೆ: ಭೂಮಿಯ ಹಿತಮಿತವಾದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೆಡ್‌ನ ಪ್ರಮಾಣ ಅದೆಷ್ಟು ಹೆಚ್ಚಿದೆ ಎಂದರೆ ಊಹೆಗೂ ನಿಲುಕದಷ್ಟು. ಈಗ ಎಲ್ಲ ರಾಷ್ಟ್ರಗಳೂ ತಮ್ಮ ತಪ್ಪನ್ನು ಇತರರ ಮೇಲೆ ಹೇರುತ್ತಿವೆ. ಈ ಕಲುಷಿತ ವಾತಾವರಣದಿಂದ ಭೂಮಿಯ ಉಷ್ಣತೆ ಕಳೆದ ಕೆಲವು ವರ್ಷಗಳಿಂದೀಚೆಗೆ ಒಂದೇ ಸಮನೆ ಏರುತ್ತಿದೆ. ಇದರ ಪರಿಣಾಮ ಧ್ರುವ ಪ್ರದೇಶದ ಹಿಮಗಡ್ಡೆಗಳು ಕರಗಿ ಸಮುದ್ರ ಸೇರಿ ಸಮುದ್ರಮಟ್ಟವನ್ನು ಏರಿಸುತ್ತಿವೆ. ಇದರಿಂದಾಗಿ ಸಮುದ್ರ ತೀರ ಮುಳುಗುವ ಸ್ಥಿತಿ. ಒಂದು ಅಂದಾಜಿನ ಪ್ರಕಾರ ಸುಮಾರು 25 ವರ್ಷಗಳಲ್ಲಿ ಭೂಮಿಯ ಸಮುದ್ರ ತೀರದ ಅನೇಕ ಪ್ರದೇಶಗಳು ಮುಳುಗಲಿವೆ. ಅದರಲ್ಲಿ ನಮ್ಮ ಭಾರತದ ಮುಂಬಯಿ, ಸೂರತ್, ಗೋವಾ, ಕೇರಳ, ಕರ್ನಾಟಕದ ಕೆಲವು ತೀರಗಳು, ಚೆನ್ನೈ, ಕೊಲ್ಕತಾ ಹಾಗೂ ವಿಶಾಖಪಟ್ಟಣ ಅಪಾಯಕಾರಿ ಸ್ಥಿತಿಯಲ್ಲಿವೆ. ಈ ತೀರ ಪ್ರದೇಶಗಳ ಸುಮಾರು 28 ಮಿಲಿಯ ಜನರಿಗೆ ತೊಂದರೆ ಖಂಡಿತ. ಎಚ್ಚರಿಕೆಯ ಮುನ್ಸೂಚನೆ
ಈ ವರ್ಷದ ದೇಶದಲ್ಲಿನ ವಿಚಿತ್ರ ಮಳೆ ಇನ್ನು ಪ್ರತೀ ವರ್ಷ ಮುಂದುವರಿಯಲಿದೆ. 2030ರ ವರೆಗಂತೂ ಖಂಡಿತ ಇದೇ ರೀತಿಯ ಹವಾಮಾನ ವೈಪರೀತ್ಯಗಳು ಸಂಭವಿಸುತ್ತದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ದೇಶದಲ್ಲಿ ಮಳೆ ಬೀಳುವ ಪ್ರದೇಶಗಳಲ್ಲಿ ಈ ತೆರನಾದ ವಿಚಿತ್ರ ಮಳೆ ಹೆಚ್ಚಾಗಲಿದ್ದರೆ ಮಳೆಯೇ ಇಲ್ಲದ ಪ್ರದೇಶಗಳನ್ನು ಬರ ಇನ್ನಷ್ಟು ಕಾಡಲಿದೆ ಎಂದೂ ಅವರು ತಿಳಿಸಿದ್ದಾರೆ. ಈಗೇನು ಮಾಡಬೇಕು?
ಇನ್ನಾದರೂ ಎಲ್ಲ ರಾಷ್ಟ್ರಗಳೂ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಮತ್ತು ನಿಯಂತ್ರಣಕ್ಕೆ ಸೂಕ್ತವಾದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ನೈಜ ಪರಿಸ್ಥಿತಿಯ ಅರಿವು ಆಡಳಿತ ವ್ಯವಸ್ಥೆ ಮತ್ತು ಜನರಿಗಾಗಬೇಕಿದೆ. ಪ್ರಕೃತಿ ನಾಶ ನಮ್ಮ ನಾಶವೆಂಬ ಎಚ್ಚರಿಕೆಯಿಂದ ಪ್ರಕೃತಿಯ ಸಮತೋಲನವನ್ನು ಉಳಿಸಲು ಶ್ರಮಿಸಲೇಬೇಕಾದ ಅನಿವಾರ್ಯ ಬಂದೊದಗಿದೆ. ಸಸ್ಯ ಸಂಪತ್ತು, ಭೂ ಸಂಪತ್ತು ಹಾಗೂ ಪರಿಸರ ಸಂಪತ್ತನ್ನು ಮುಂದಿನ ತಲೆಮಾರಿಗೆ ಆದಷ್ಟು ಉಳಿಸುವ ಪ್ರಯತ್ನ ಪ್ರಾಮಾಣಿಕವಾಗಿ ಆಗಬೇಕಿದೆ. ನಮ್ಮ ಪ್ರತೀ ಹಳ್ಳಿಗಳು ಹಾಗೂ ಪಟ್ಟಣಗಳಲ್ಲಿ ಮುಂಜಾಗ್ರತ ಕ್ರಮಗಳನ್ನು ಅನಿವಾರ್ಯವಾಗಿ ಕೈಗೊಳ್ಳಲೇಬೇಕಿದೆ. -ಡಾ| ಎ.ಪಿ. ಭಟ್, ಉಡುಪಿ