ನವಲಗುಂದ: ಮಂಗಳವಾರ ಸುರಿದ ಮಳೆಗೆ ತಾಲೂಕಿನ ವಿವಿಧೆಡೆ ಅಪಾರ ಹಾನಿ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಸ್ತೆ, ಸೇತುವೆ, ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿದ್ದು, ಜಾವೂರ ಗ್ರಾಮದಲ್ಲಿ ಯುವಕನೊಬ್ಬ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ.
ಹಾಲಕುಸುಗಲ್ ಗ್ರಾಮದಲ್ಲಿ ಎರಡು ಬಣವೆಗಳು ಸಿಡಿಲಿಗೆ ಆಹುತಿಯಾಗಿವೆ. ಹಣಸಿ ಗ್ರಾಮದಲ್ಲಿ ಸುಮಾರು 55 ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದ್ದು, ನಾಲ್ಕು ಮನೆಗಳ ಭಾಗಶಃ ಗೋಡೆಗಳು ಬಿದ್ದಿವೆ. ಅಲ್ಲದೇ ಅದೇ ಗ್ರಾಮದಲ್ಲಿ ಸುಮಾರು 15 ಮೇವಿನ ಬಣವೆ, ಕಡಲೆ, ಗೋದಿ,
ಜೋಳ ಬೆಳೆ ಜಲಾವೃತಗೊಂಡು ಅಪಾರ ಪ್ರಮಾಣದ ಹಾನಿಯಾಗಿದೆ. ಎರಡು ಬಣವೆ ನೀರಿನ ರಭಸಕ್ಕೆ ತೇಲಿ ಹೋಗಿದೆ. ತಿರ್ಲಾಪುರ-ಮೊರಬ ರಸ್ತೆಯ ಸೇತುವೆಗಳು ಶಿಥಿಲಗೊಂಡು ಒಡೆದು ಹೋಗಿದ್ದು, ರಸ್ತೆಯೂ ಸಂರ್ಪೂಣ ಹದಗೆಟ್ಟಿದೆ. ಶಿರಕೋಳ ಮತ್ತು ಹಣಸಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮೊರಬ ಜಿಪಂ ಕ್ಷೇತ್ರ ವ್ಯಾಪ್ತಿಯ ಹೊಲದ ಒಡ್ಡುಗಳು ಒಡೆದು ಹಾಳಾಗಿವೆ.
ಶಾಸಕರಿಂದ ಪರಿಶೀಲನೆ: ಮೊರಬ, ಶಿರಕೋಳ, ಹಣಸಿ, ತುಪ್ಪತ ಕುರಹಟ್ಟಿ ಗ್ರಾಮದಲ್ಲಿ ಹಾನಿಯಾದ ಪ್ರದೇಶಗಳಿಗೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿ ಪರಿಶೀಲಿಸಿದರು. ಹಾನಿ ಪ್ರದೇಶದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಮೊರಬ ಗ್ರಾಮಕ್ಕೆ ಶಾಸಕರು ಭೇಟಿ ನೀಡಿದ್ದ ವೇಳೆ, ಪ್ರತಿ ಬಾರಿ ಮಳೆಯಾದ ಸಂದರ್ಭದಲ್ಲಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ನೀರು ನುಗ್ಗಿ ವಿದ್ಯಾರ್ಥಿಗಳಿಗೆ-ಶಿಕ್ಷಕರಿಗೆ ಹೋಗಲು ಸಾಧ್ಯವಾಗದೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿತ್ತರು. ಅದಕ್ಕೆ ಸ್ಪಂದಿಸಿದ ಶಾಸಕ ಮುನೇನಕೊಪ್ಪ, ಕೂಡಲೇ ಜೆಸಿಬಿ ಯಂತ್ರ ಬಳಸಿ ಅಕ್ಕಪಕ್ಕದ ಹೂಳು ತೆರವುಗೊಳಿಸಿ ನೀರು ಸಲೀಸಾಗಿ ಹೋಗಲು ದಾರಿ ಮಾಡಬೇಕೆಂದು ತಹಶೀಲ್ದಾರ್ ಕೆ.ಬಿ. ಕೋರಿಶೆಟ್ಟರ ಅವರಿಗೆ ಸೂಚನೆ ನೀಡಿದರು.
ಹಣಸಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಸವರಾಜ ಜಕಾತಿ ಎಂಬ ಸಂತ್ರಸ್ತ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಕಾಲು ಹಿಡಿದು ನನ್ನ ಮನೆ ನೋಡ ಬನ್ನಿ, ಎಲ್ಲ ಮೇಂಬರುಗಳು ಇಲ್ಲಿಯೇ ಇದ್ದೀರಿ ಎಂದು ಗೋಗರೆದು ಗಮನ ಸೆಳೆದನು.