ಸುರತ್ಕಲ್: ಸುರತ್ಕಲ್ ಸುತ್ತಮುತ್ತಲಿನ ತೋಡು, ರಾಜಕಾಲುವೆಯ ಸಮಸ್ಯೆಯೂ ಇದೇ. ಇಲ್ಲಿಯೂ ಮಳೆಗಾಲ ಆರಂಭವಾಗುವ ಮುನ್ನವೇ ಹೂಳು ತೆಗೆದು ಸರಿಪಡಿಸಬೇಕಿದೆ. ಇಲ್ಲವಾದರೆ ಈ ಮಳೆಗಾಲಕ್ಕೂ ಸಮಸ್ಯೆ ತಪ್ಪಿದ್ದಲ್ಲ.
ವಾರ್ಡ್ ನಂಬ್ರ 6, 2, 7, 8, 10, 17ರಲ್ಲಿ ಚಿತ್ರಾಪುರ ಕಾಲುವೆ ಸಹಿತ ಸಣ್ಣ ಪುಟ್ಟ ತೋಡುಗಳ ಹೂಳೆತ್ತಿಲ್ಲ. ಇದರಿಂದ ಸಮಸ್ಯೆಯ ತೀವ್ರತೆ ಹೆಚ್ಚುವ ಭೀತಿ ಇದೆ. ಹಾಗಾಗಿ ರಾಜಕಾಲುವೆಯಷ್ಟೇ ಅಲ್ಲ, ಸಂಪರ್ಕ ಕಲ್ಪಿಸುವ ತೋಡುಗಳನ್ನು ಸ್ವತ್ಛಗೊಳಿಸಿ ಸುಸ್ಥಿತಿಯಲ್ಲಿಡಬೇಕಿದೆ. ಸುರತ್ಕಲ್ ಕಟ್ಲ, ಹೊಸಬೆಟ್ಟು, ಚಿತ್ರಾಪುರ, ಗುಡ್ಡೆಕೊಪ್ಲ, ಪಡ್ರೆ ಮತ್ತಿತರ ಭಾಗಗಳಲ್ಲಿ ರಾಜಕಾಲುವೆ ಸಂಪರ್ಕ ತೋಡುಗಳಿವೆ. ಇನ್ನೂ ಸ್ವಚ್ಛತಾ ಕಾರ್ಯ ಆರಂಭವಾಗಿಲ್ಲ. ಹೆದ್ದಾರಿ ಬದಿಯಲ್ಲಿ ತೋಡು ಸ್ವಚ್ಛ ಮಾಡುವ ಬಗ್ಗೆಯೂ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಕುಳಾಯಿ, ಹೊನ್ನಕಟ್ಟೆ ಬಳಿ ಪ್ರತೀ ವರ್ಷ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಬೈಕಂಪಾಡಿ ಜಂಕ್ಷನ್‌ನಲ್ಲಿ ತೋಡು ನಾಪತ್ತೆಯಾಗಿ ಮಳೆ ನೀರು ನಿಂತು ಹೊಂಡ ತಿಳಿಯದ ಪರಿಸ್ಥಿತಿ ಇದೆ. ರಸ್ತೆಯ ಇಕ್ಕೆಲಗಳಲ್ಲೂ ತಗ್ಗು ಪ್ರದೇಶದಲ್ಲಿ ಮನೆ, ಅಂಗಡಿ ಮುಂಗ್ಗಟ್ಟುಗಳಿದ್ದು, ಸಮಸ್ಯೆಯ ಭೀತಿ ಎದುರಿಸುತ್ತಿದೆ. ಹೊಸಬೆಟ್ಟು ಕುಳಾಯಿ ಪ್ರದೇಶದಲ್ಲಿನ ರಾಜಕಾಲುವೆ ಸಂಪೂರ್ಣಗೊಂಡಿಲ್ಲ.
ಇದಕ್ಕೆ ಸಂಪರ್ಕ ಕಲ್ಪಿಸುವ ಜಾಗಗಳೂ ಅತಿಕ್ರಮಣಗೊಂಡಿರುವ ದೂರು ಕೇಳಿ ಬಂದಿದೆ. ಹಾಗಾಗಿ ರಾಜಕಾಲುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಜನರ ಮನವಿಗೂ ಹೆಚ್ಚಿನ ಆದ್ಯತೆ ದೊರಕಿಲ್ಲ. ಲೋಟಸ್ ಪಾರ್ಕ್, ಹೊಸಬೆಟ್ಟು ಸುತ್ತ ಸುಮಾರು 100ಕ್ಕೂ ಅಧಿಕ ಮನೆಗಳು ನೆರೆಯ ಅಪಾಯದಲ್ಲಿವೆ. ರಾಜಕಾಲುವೆ ಪೂರ್ಣವಾಗದ ಕಾರಣ ಕೋಡಿಕಲ್, ಕೊಟ್ಟಾರ ಚೌಕಿ ಭಾರೀ ಮಳೆಗೆ ಜಲಾವೃತ ಸಾಮಾನ್ಯ ಎಂಬಂತಾಗಿದೆ.
ಫೋರ್ತ್‌ಮೈಲ್ ಬಳಿ ಕಲ್ವರ್ಟ್ ನಿರ್ಮಾಣ, ಕಾಲುವೆ ಸಂಪರ್ಕ ಕೆಲಸ ಬಾಕಿಯುಳಿದಿದ್ದು, ಅವೈಜ್ಞಾನಿಕ ಕಾಮಗಾರಿಯ ಆರೋಪವೂ ವ್ಯಕ್ತವಾಗಿದೆ. ಚೌಕಿ ಪ್ರದೇಶ ಮತ್ತಷ್ಟು ವಿಸ್ತಾರವಾಗಿ ಮುಳುಗುವ ಆತಂಕ ನಿವಾಸಿಗಳಲ್ಲಿ ಎದುರಾಗಿದೆ.