ಪಿರಿಯಾಪಟ್ಟಣ: ತಾಲೂಕು ಅರೆ ಮಲೆನಾಡು ಪ್ರದೇಶವಾಗಿದ್ದು, ಅವಧಿಗೂ ಮುನ್ನ ಮುಂಗಾರು ಮಳೆ ಸುರಿದ ಕಾರಣ, ರೈತರು ಏಪ್ರಿಲ್, ಮೇನಲ್ಲೇ ಪ್ರಮುಖ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಶುಂಠಿ, ಹೊಗೆಸೊಪ್ಪು (ತಂಬಾಕು) ಬಿತ್ತನೆ ಮಾಡಿದ್ದರು. ಆದರೆ, ಈಗ ಮಳೆ ಕೈಕೊಟ್ಟಿದ್ದು, ಬೆಳೆ ಒಣಗಲಾರಂಭಿಸಿದೆ.
ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಕಾರಣ, ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ, 15 ದಿನಗಳಿಂದ ಮಳೆ ಬೀಳದೆ ಬಿತ್ತಿದ ಬೆಳೆ ಬಿಸಿಲಿಗೆ ಬಾಡಿದೆ. ನೀರಾವರಿ ಸೌಲಭ್ಯ ಹೊಂದಿದ್ದವರಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಮಳೆ ನಂಬಿಕೊಂಡಿದ್ದವರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ತಾಲೂಕಿನ ಬಹುಭಾಗ ರೈತರು ಹೊಗೆಸೊಪ್ಪು ಮುರಿಯಲಾರಂಭಿಸಿದ್ದರೆ, ಉಳಿದವರು ಸಾಲ ಮಾಡಿ ಬಿತ್ತನೆ ಮಾಡಿದ್ದ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಸಬಾ ಹೋಬಳಿ ಸೇರಿ ತಾಲೂಕಿನ 25 ಸಾವಿರ ಹೆಕ್ಟೇರ್‌ನಲ್ಲಿ ಹೊಗೆಸೊಪ್ಪು ಬೆಳೆಯಲಾಗುತ್ತಿದೆ. ಆದರೆ, ಈ ಬಾರಿ ಮಳೆ ವೈಫಲ್ಯದಿಂದ ಶೇ.50 ಪ್ರದೇಶದಲ್ಲಿ ಮಾತ್ರ ಹೊಗೆಸೊಪ್ಪನ್ನು ಕೈಗೊಳ್ಳಲಾಗಿದೆ. ಈ ಪೈಕಿ ಶೇ.20ರಷ್ಟು ಬೆಳೆ ಮಾತ್ರ ನೀರಾವರಿಯಿಂದ ಕಟಾವಿಗೆ ಬಂದಿದೆ.
ನೆರಳಿನಲ್ಲಿ ಇಡಬೇಕು: ರೈತರು ತಮ್ಮ ಜಮೀನಿನಲ್ಲಿ ಬೆಳೆದ ತಂಬಾಕನ್ನು ಮಂಡಳಿ ಶಿಫಾರಸಿನಂತೆ ಮಾಡಬೇಕು. ಎಲೆಗಳನ್ನು ಬೆಳಗಿನ ವೇಳೆಯಲ್ಲಿಯೇ ಮುರಿದು, ಅದೇ ದಿನ ಸಂಜೆಯೊಳಗೆ ಬ್ಯಾರೆಲ್‌ನಲ್ಲಿ ಜೋಡಿಸಿ ಹದ ಮಾಡುವ ಕಾರ್ಯ ಪ್ರಾರಂಭಿಸಬೇಕು. ಪ್ರತಿ ಗಿಡದಲ್ಲಿ ಸರಿಯಾಗಿ ಬಲಿತ ಒಂದೆರಡು ಎಲೆ ಮಾತ್ರ ಮುರಿದು ಹದ ಮಾಡಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಮುರಿದ ಎಲೆಗಳು ಜಾಗರೂಕತೆ ವಹಿಸಿ ಬಿಸಿಲಿನ ಬೇಗೆಗೆ ಒಡ್ಡದಂತೆ ಗೋಣಿ ತಾಟಿನಿಂದ ಮುಚ್ಚಿ ತಕ್ಷಣವೇ ಸಾಗಿಸಿ ನೆರಳಿನಲ್ಲಿ ಇಡಬೇಕು.
ತೇವಾಂಶ ಕಳೆದುಕೊಳ್ಳದಿರಲಿ: ಒಂದು ಟಾರ್ಪಲಿನ್ ಮೇಲೆ ಎಲೆಗಳನ್ನು ಜೋಡಿಸಿ ಎಲೆ ತೇವಾಂಶ ಕಳೆದುಕೊಳ್ಳದಂತೆ ಜಾಗ್ರತೆ ವಹಿಸಬೇಕು. ಈ ಎಲ್ಲಾ ಪ್ರಕ್ರಿಯೆ ಬಗ್ಗೆ ಕಳೆದ ಬಾರಿ ತಂಬಾಕು ಮಂಡಳಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ ವಾರಕ್ಕೆ ಒಮ್ಮೆ ಸಲಹೆ ಮಾಡತೊಡಗಿದ್ದರು. ಆದರೆ, ಈ ಬಾರಿ ಜೂನ್ ತಿಂಗಳು ಮುಗಿಯುವ ಹಂತಕ್ಕೆ ಬಂದಿದ್ದರೂ ಅಧಿಕಾರಿ, ಸಿಬ್ಬಂದಿ ಒಮ್ಮೆಯೂ ತಿರುಗಿ ನೋಡಿಲ್ಲ.
ತಲೆ ಮೇಲೆ ಕೈಹೊತ್ತು ಕೂತ ಬೆಳೆಗಾರ: ಕಳೆದ ಬಾರಿ ಇದೇ ಅವಧಿಯಲ್ಲಿ ಶೇ.30 ಬೆಳೆ ಕೈಗೆ ಬಂದಿದ್ದ ಹಿನ್ನೆಲೆ ಸೊಪ್ಪು ಮುರಿದು, ಬೇಯಿಸುವ ಕಾಯಕ ಪ್ರಗತಿಯಲ್ಲಿತ್ತು. ಅದೇ ನಿರೀಕ್ಷೆಯಲ್ಲಿ ಈ ಸಾಲಿನಲ್ಲಿಯೂ ತಂಬಾಕು ಬಿತ್ತನೆ ಕೈಗೊಳ್ಳಲಾಗಿತ್ತು. ಸಕಾಲದಲ್ಲಿ ಮಳೆಯಾಗದ ಪರಿಣಾಮ ಬೆಳೆಗಾರರ ತಲೆ ಮೇಲೆ ಕೈಹೊತ್ತು, ಪ್ರತಿನಿತ್ಯ ಮೋಡದತ್ತ ನೋಡುವಂತಾಗಿದೆ.
ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ