Advertisement

ಸಿತ್ರಂಗ್‌ಗೆ 24 ಬಲಿ; ಬಾಂಗ್ಲಾದಲ್ಲಿ ಚಂಡಮಾರುತದ ಅಬ್ಬರ

08:22 PM Oct 25, 2022 | Team Udayavani |

ಢಾಕಾ/ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಎದ್ದ ಸಿತ್ರಂಗ್‌ ಚಂಡಮಾರುತವು ಬಾಂಗ್ಲಾದೇಶದಲ್ಲಿ ಜನಜೀವನವನ್ನು ಅಲ್ಲೋಲಕಲ್ಲೋಲವಾಗಿಸಿದೆ. ಸೋಮವಾರ ರಾತ್ರಿಯೇ ಬಾಂಗ್ಲಾ ಕರಾವಳಿಗೆ ಚಂಡಮಾರುತ ಅಪ್ಪಳಿಸಿದ್ದು, ಅಪಾರ ಪ್ರಮಾಣದ ಹಾನಿ ಉಂಟುಮಾಡಿದೆ. ಒಂದೇ ದಿನ ಬರೋಬ್ಬರಿ 24 ಮಂದಿಯನ್ನು ಸಿತ್ರಂಗ್‌ ಬಲಿಪಡೆದಿದೆ.

Advertisement

ಬರ್ಗುನಾ, ನರೈಲ್‌, ಸಿರಾಜ್‌ಗಂಜ್‌, ಭೋಲ್‌ ಸೇರಿದಂತೆ ಅತಿ ಹೆಚ್ಚು ಜನದಟ್ಟಣೆ ಇರುವ 13 ಜಿಲ್ಲೆಗಳಲ್ಲಿ ಮತ್ತು ತಗ್ಗುಪ್ರದೇಶಗಳಲ್ಲಿ ಚಂಡಮಾರುತವು ಭಾರೀ ಹಾನಿ ಉಂಟುಮಾಡಿದೆ. ಕೆಲವು ಜಿಲ್ಲೆಗಳಲ್ಲಿನ ಸಾವು-ನೋವಿನ ಮಾಹಿತಿ ಮಾತ್ರ ಬಂದಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಲ್ಲಿ ಅನೇಕರು ಮರ ಬಿದ್ದು, ಮನೆ ಕುಸಿದು ಸಾವಿಗೀಡಾಗಿದ್ದಾರೆ. ಇವರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ. ಒಂದೇ ಕುಟುಂಬದ ಮೂವರು ಮನೆ ಮೇಲೆ ಮರ ಬಿದ್ದ ಕಾರಣ ಅಸುನೀಗಿದ್ದಾರೆ.

ಚಂಡಮಾರುತದ ಎಫೆಕ್ಟ್ ಎಂಬಂತೆ ಬೀಸಿದ ಬಿರುಗಾಳಿಯಿಂದ ನೂರಾರು ಮರಗಳು ಧರಾಶಾಹಿಯಾಗಿವೆ. ಲೈಟ್‌ ಕಂಬಗಳು, ಮರಗಳು ರಸ್ತೆ ಮೇಲೆ ಉರುಳಿಬಿದ್ದ ಪರಿಣಾಮ ಹಲವು ರಸ್ತೆಗಳಲ್ಲಿ ಕೆಲ ಗಂಟೆಗಳ ಕಾಲ ಸಂಪರ್ಕವೇ ಸಾಧ್ಯವಾಗಲಿಲ್ಲ. ಮೊಬೈಲ್‌, ಇಂಟರ್ನೆಟ್‌ ಸೇವೆಗಳಲ್ಲೂ ವ್ಯತ್ಯಯ ಉಂಟಾಯಿತು.

ಚಂಡಮಾರುತದಿಂದ ಹಾನಿಗೀಡಾದ ಮನೆಗಳು- 10,000
ಹಾನಿಗೊಳಗಾದ ಕೃಷಿ ಭೂಮಿ- 6,000 ಹೆಕ್ಟೇರ್‌
ನಾಶವಾದ ಸಿಗಡಿ ಫಾರ್ಮ್- 1,000
ನಿರಾಶ್ರಿತರಾದವರು- 10 ಲಕ್ಷ
ಶಿಬಿರಗಳಲ್ಲಿ ಆಶ್ರಯ ಪಡೆದವರು- 6,925
ಸ್ಥಳಾಂತರಗೊಂಡವರ ಸಂಖ್ಯೆ- 2 ಲಕ್ಷ

Advertisement

ಭಾರತ ಬಚಾವ್‌!
ಸಿತ್ರಂಗ್‌ ಚಂಡಮಾರುತವು ಭಾರತದ ಪಶ್ಚಿಮ ಬಂಗಾಳ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಅಪಾರ ಹಾನಿ ಉಂಟುಮಾಡಬಹುದು ಎಂಬ ಆತಂಕ ದೂರವಾಗಿದೆ. ಸೋಮವಾರ ರಾತ್ರಿ ಚಂಡಮಾರುತವು ಪ.ಬಂಗಾಳ ಕರಾವಳಿಯನ್ನು ದಾಟಿ ಗಂಟೆಗೆ 56 ಕಿ.ಮೀ. ವೇಗದಲ್ಲಿ ಬಾಂಗ್ಲಾ ಕರಾವಳಿಯತ್ತ ಸಂಚರಿಸಿತು.

ಹೀಗಾಗಿ, ಬಂಗಾಳದಾದ್ಯಂತ ಅಲ್ಪಪ್ರಮಾಣದಿಂದ ಮಧ್ಯಮ ಪ್ರಮಾಣದಲ್ಲಿ ಮಳೆಯಾಯಿತು. ಯಾವುದೇ ಸಾವು-ನೋವು, ಆಸ್ತಿಪಾಸ್ತಿ ಹಾನಿ ಉಂಟಾಗಲಿಲ್ಲ. ಆದರೆ, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರದಲ್ಲಿ ಧಾರಾಕಾರ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next