ಬೇಸಿಗೆಗೆ ದೀರ್ಘಾಯಸ್ಸು ಇಲ್ಲ ಎಂದು ಗೊತ್ತಿದ್ದರೂ ಧಗೆ ಇಡೀ ಆಯುಷ್ಯವನ್ನು ನುಂಗಿದಂತೆ ಅನ್ನಿಸಿ ಕಳವಳ ಉಂಟು ಮಾಡುತ್ತದೆ. ಹೀಗಾದಾಗಲೆಲ್ಲ ಮಳೆಯ ನಿರೀಕ್ಷೆಯಲ್ಲಿ ಇದ್ದವರಿಗೆ ಬಿದ್ದ ಒಂದೊಂದು ಹನಿಯೂ ಅಮೂಲ್ಯ. ಚಂಡಮಾರುತ, ಭೂಕಂಪ ಮುಂತಾದ ಹಿನ್ನೆಲೆಯಲ್ಲಿ ಆಗಾಗ ಮಳೆ ಎಂಬ ಶಬ್ದಕ್ಕೆ ವಿವಿಧ ದನಿಗಳೆಲ್ಲ ಸೇರಿ ಬಿದ್ದ ಮೊದಲ ಮಳೆಯ ಮೃದ್ಗಂಧ ಮೂಗಿಗೆ, ಮನಸಿಗೆ ತಾಗಿದಾಗಲೇ ಒಂದು ರೀತಿಯ ಗಡಿಬಿಡಿ ಶುರುವಾಗುತ್ತದೆ. ಕಿಟಕಿಯಾಚೆಯಿಂದ ಬೀಸಿದ ತಂಗಾಳಿ ಮೈರೋಮಗಳನ್ನೆಲ್ಲ ಅಲ್ಲಾಡಿಸಿ “ತಾನಿಲ್ಲೆ ಇರುವೆ’ ಎಂಬ ವಾರ್ತೆ ಬಿತ್ತರಿಸುತ್ತದೆ. ಇನ್ನು ಮಳೆ ಶುರುವಾಯ್ತು. “”ಮಾಡು ಸರಿಯಾಗಿ ಹೊದಿಸಿಕೊಂಡಿದ್ದೀರಾ ಅಪ್ಪಾ” ಎಂದು ಘಟ್ಟದ ಮೇಲೆ ಮದುವೆ ಮಾಡಿಕೊಟ್ಟ ಮಗಳು ಕರಾವಳಿಯ ತೀರದಲ್ಲಿ ಹಂಚಿನ ಮನೆ ಕಟ್ಟಿಕೊಂಡು ವಾಸವಾಗಿರುವ ಅಪ್ಪನಿಗೆ ಫೋನಾಯಿಸಿ ಕೇಳಿದ್ದಾಳೆ.
ಅಕ್ಷರಕ್ಕೆ ನಿಲುಕದ ಜೀವ ಜಲವನ್ನೀಯುವ ಮಳೆಹನಿಗಳ ವರ್ಣನೆ ಖಂಡಿತ ಅಸಂಭವ ಎಂದು ಅದೆಷ್ಟೋ ಬಾರಿ ಅನಿಸಿದ್ದಿದೆ.ಆದರೂ ಬೊಗಸೆಯಲ್ಲಿ ಒಂದಿಷ್ಟು ಮಳೆ ಹನಿಗಳ ಹಿಡಿದು ಲೆಕ್ಕ ಮಾಡುವ ಆಸೆ. ಅವನ ಬೊಗಸೆಗೂ ಒಂದಿಷ್ಟು ರವಾನಿಸುವ ಬಯಕೆ. ವಿರಹವೋ, ದಾಹವೋ, ಮೋಹವೋ ಎಂದು ಆದ್ರìತೆಯನ್ನು ಕಣ್ಣಲ್ಲಿ ತುಂಬಿಕೊಂಡು ಹೊಸ ಕನಸು ಕಟ್ಟುವ ಹೊತ್ತು. ಮೇ ತಿಂಗಳ ಬುಡದಲ್ಲಿ ಮಳೆ ಹುಟ್ಟುತ್ತದೆ ಎಂಬ ನಿರೀಕ್ಷೆ ಇದ್ದ ಕಾರಣ ಮುಂದಿನ ಮಳೆಗಾಲಕ್ಕೆ ಬೇಕಾದ ತಯಾರಿಗಳೆಲ್ಲ ಸೂಪರ್‌ಫಾಸ್ಟ್ ಆಗಿ ಮುಗಿದಿರುತ್ತದೆ. ಬೆಟ್ಟದ ತುದಿಯಲ್ಲಿ ಕರಿ ಮೋಡಗಳು ಗುಂಪಲ್ಲಿ ಭೇಟಿಯಾಗಿ ಮಳೆಯ ಖಾಸ್‌ಬಾತ್ ಆಡುತ್ತಿವೆ. ಸಾರಿಸಿದ ಮಣ್ಣಿನಂಗಳದಿಂದ ಮಳೆಯ ಮಾತು ಹೊರಡುತ್ತದೆ. ಅಂಗಳದ ಒಡಲಲ್ಲಿ ಒಣಗಿದ ಹಪ್ಪಳ-ಸಂಡಿಗೆಗಳೆಲ್ಲ ಮಳೆಗಾಲಕ್ಕೆ ಬೇಕು ಎಂದು ನೆನಪಿಸಿಕೊಂಡೆ ನಾಲಿಗೆ ರುಚಿ ಹೆಚ್ಚಿಸಿಕೊಂಡಿವೆ. ತೋಟದ ಅಡಿಕೆ, ತೆಂಗು, ಬಾಳೆಗಳೆಲ್ಲ ಬುಡ ಅಗಲಿಸಿಕೊಂಡು ಸೊಂಪಾಗಿ ಬೆಳೆಯುವ ಕನಸು ಕಾಣುತ್ತಿವೆ. ಬ್ಯಾಡಗಿ ಮೆಣಸು, ರಾಗಿಹಿಟ್ಟು , ಗೋಧಿ ಹಿಟ್ಟು, ಮಸಾಲೆ ಪೌಡರು ಗಳೆಲ್ಲ ಮಳೆಗಾಲ ಸ್ವಾಗತಿಸಲು ತಯಾರಿಗೊಂಡು ಡಬ್ಬದಲಿ ಕೂತಿವೆ. ಮದುವೆ, ನಾಮಕರಣ, ಗೃಹಪ್ರವೇಶ ಎಂಬಿತ್ಯಾದಿ ಕಾರಣದಿಂದ ಹೊರಬಿದ್ದ ರೇಷ್ಮೆ ಸೀರೆಗಳೆಲ್ಲ ಮಳೆಯ ತಂಪಿಗೆ ಕರಗಿ ಟ್ರಂಕು, ಕಪಾಟಿನೊಳಗೆ ಬೆಚ್ಚಗೆ ಕೂತಿವೆ. ಕಾಡಿನ ನಡುವಿನ ಮಾಡಿನ ಮನೆಯಲ್ಲಿನ ಕಟ್ಟಿಗೆಗಳೆಲ್ಲ ಅಟ್ಟಣಿಗೆಯಲ್ಲಿ ಕೂತು ನಗುತ್ತಿವೆ. ಪ್ರತಿಮನೆಯ ಎದುರಿನಲ್ಲಿಯೂ ಒಂದರ ಬೆನ್ನಿಗೊಂದು ಒಂದೇ ಅಳತೆಯಲ್ಲಿ ಕತ್ತರಿಸಿದ ಕಟ್ಟಿಗೆಗಳು ಸೇರಲ್ಪಟ್ಟು ದಾರಿಯಲ್ಲಿ ಹೋಗಿ ಬರುವವರನ್ನು ಮಾತಾಡಿಸಿದೆ. ಅದೊಂದು ಸುಂದರ ರೂಪಕವಾಗಿ ಕಣ್ಮನ ಸೆಳೆದಿದೆ.
ಕಣಿವೆಯಲ್ಲಿ ಮಳೆ ಬಂದರೆ ಬೆಚ್ಚನೆಯ ಹೊದಿಕೆಯಲಿ ಮೈಮನ ತೂರಿಸಿ ಅಡಗಿಕೊಳ್ಳಬೇಕನಿಸುತ್ತದೆ. ಇಲ್ಲೆಲ್ಲ ಮಳೆ ಬಂದರೆ ಚಳಿಯೂ ತನ್ನ ಮುಖ ಪರಿಚಯ ಮಾಡುತ್ತದೆ. ಹೀಗಾಗಿಯೇ ಮಳೆಯನ್ನು ಪ್ರೀತಿಸುವವರು ಬಹಳ ಜನ. ಮಳೆ ಸೌಂದರ್ಯದ ಗೂಡು. ಕಾನನದ ಒಳಗೆ ಹಗಲು- ಕತ್ತಲಾಗಿ ಕರಿಮೋಡಗಳೆಲ್ಲ ಕಣಿವೆಯ ಎತ್ತರದ ಮರಗಳ ಮೇಲೆ ಮಲಗಿರುವುದನ್ನು ನೋಡಿದಾಗಲೆಲ್ಲ ಕಣ್ಣ ರೆಪ್ಪೆಯ ಮೇಲೂ ಹನಿಗಳ ಚೆಲ್ಲಾಟ ಶುರುವಾಗುತ್ತದೆ. ಪೌರಾಣಿಕ ಧಾರಾವಾಹಿಯಲ್ಲಿ ಕಾಣಸಿಗುವ ಸ್ವರ್ಗಲೋಕದ ಹಾದಿಯೊಂದು ಕಣ್ಣೆದುರೆ ನಿಂತಂತೆ ಮಳೆ ಮೋಡಗಳು ನಮ್ಮ ಹಿಂದೆ ಮುಂದೆಲ್ಲ ಸುತ್ತಿ ಬಿಳಿಯಾಗಿ ಹೊಳೆಯುತ್ತದೆ. ಶುರುವಾದ ಮಳೆಗಾಲ ಎಲ್ಲೂ ನಿಲ್ಲುವುದೇ ಬೇಡ ಎಂದೇ ಮನಬಯಸುತ್ತದೆ. ನಾಲ್ಕೈದು ಮನೆಗಳಷ್ಟೇ ಇರುವ ಕಾಡಿನ ನಡುವೆ ಇರುವ ಸಣ್ಣ ಊರುಗಳಲ್ಲಿ ಮಾರಿಗೊಂದು ಹಳ್ಳ ಹುಟ್ಟಿಕೊಂಡಿವೆ. ಒಂದೇ ನಮೂನೆಯ ಕಟ್ಟಿಗೆಗಳೆಲ್ಲ ಸೇರಿಕೊಂಡು ಕಾಲು ಸೇತುವೆ ಸಹಕಾರ ತಣ್ತೀದಡಿಯಲ್ಲಿ ರಚನೆಗೊಳ್ಳುತ್ತದೆ. ಹೀಗಾಗಿ, ಶಾಲೆಗೆ ಬರುವ ಮಕ್ಕಳಿಗೆ ಈಗ ಹಳ್ಳ ದಾಟಲು ಯಾವುದೇ ಭಯವಿಲ್ಲ. ಆದರೂ ಒಮ್ಮೊಮ್ಮೆ ಶಾಲೆಗೆ ಹೋಗುವಾಗ ದಾಟಿದ ಸಂಕ ಮರಳಿ ಬರುವಷ್ಟರಲ್ಲಿ ಹೊಳೆ ನೀರು ಹೆಚ್ಚಿ ಕೊಚ್ಚಿಕೊಂಡು ಹೋಗಿರುತ್ತದೆ. ಸಾಮಾನ್ಯವಾಗಿ ದೂರದಿಂದ ಶಾಲೆಗೆ ಬರುವ ಮಕ್ಕಳು ಆರೇಳು ಮಂದಿ ಗುಂಪಲ್ಲಿ ಬರುತ್ತಾರೆ.ಹೊಳೆಯ ಹರವು ಕಡಿಮೆಯಾದ ಕೂಡಲೇ ಕೈ ಕೈ ಹಿಡಿದು ನಿಧಾನ ದಾಟುತ್ತಾರೆ.
ಮಳೆಯ ಆರಂಭದೊಡನೆ ಕೃಷಿ ಕೆಲಸವೂ ಕೂಡ ಚುರುಕಾಗುತ್ತದೆ. ಮನೆಯಿಂದ ದೂರವಿದ್ದ ಗದ್ದೆಗೆ ಹೋಗಿ ಬರಲು ಅಸಾಧ್ಯ ಅಂತಾದಾಗ ಗ¨ªೆಯ ಒಂದು ಬದಿಯಲ್ಲಿ ಒಂದು ಕೋಣೆಯ ಮನೆ ರೂಪಗೊಳ್ಳುತ್ತದೆ. ಮನೆಯವರೆಲ್ಲ ನಾಟಿ ಕಾರ್ಯ ಮುಗಿಸಿ ಬರುವಷ್ಟರಲ್ಲಿ ಎರಡು ತಿಂಗಳ ದೊಡ್ಡ ಮಳೆಗಾಲ ಮುಗಿದಿರುತ್ತದೆ. ಗದ್ದೆ ಕೆಲಸಕ್ಕೆಂದು ಹೋಗುವ ಅಪ್ಪ-ಅಮ್ಮ ಮನೆಯ ಹಿರಿಮಕ್ಕಳ ಜೊತೆ ಚಿಕ್ಕವರನ್ನು ಬಿಟ್ಟು ಸಾಗುತ್ತಾರೆ. ಹಿರಿಯ ಮಕ್ಕಳೇ ಮನೆಯ ಹಿರಿಯನಾಗಿ ಜವಾಬ್ದಾರಿ ಹೊರುತ್ತಾರೆ. ಶಾಲೆಯ ಕಾರಣದಿಂದ ಅಪ್ಪ-ಅಮ್ಮನೊಂದಿಗೆ ದೂರವಿರುವ ಮಕ್ಕಳ ಕಣ್ಣೀರು ಮಳೆಯ ಹನಿಯೊಡನೆ ಸೇರಿ ಕರಗುತ್ತಿದೆ. ಮಳೆ ಬಂತೆಂದರೆ ಕಣಿವೆಪೂರ್ತಿ ಜಲಪಾತಗಳೇ ತುಂಬಿಕೊಳ್ಳುತ್ತದೆ. ಕಲ್ಲು ಬಾಳೆಗಳೆಲ್ಲ ಚಿಗುರಿ ಇದ್ದಕ್ಕಿದ್ದಲ್ಲೇ ಬಾಳೆಯ ತೋಟವೊಂದು ಕಲ್ಲಿನ ಮೇಲೆ ಹುಟ್ಟಿ ಬೆರಗು ಮೂಡಿಸುತ್ತದೆ. “ಹೂದೋಟಕ್ಕೀಗ ಮಾಲೀಕರು ಯಾರು?’ ಎಂಬ ಹಾಡು ರೇಡಿಯೋದಲ್ಲಿ ಕೇಳಬರುತ್ತದೆ. ಕಲ್ಲರಳಿ ಮರ ಕೆಂಪಾಗಿ ಚಿಗುರಿ ಕಾಡು ತಾಂಬೂಲ ಜಗಿದಂತೆ ತೋರುತ್ತಿದೆ. ಕಡ್ಡಿಯಂತೆ ತರಗೆಲೆಗಳ ಒಳಗೆ ಬಿದ್ದುಕೊಂಡ ಉಂಬಳ ಒಂದು ಮಳೆ ಬಿದ್ದದ್ದೆ ಎದ್ದು ಆಕ್ರಮಣಕ್ಕೆ ಸಿದ್ದವಾಗಿ ನಿಂತಿದೆ.
ಮಳೆಯೊಡನೆ ಮಕ್ಕಳ ಶಾಲೆಯು ಪ್ರಾರಂಭೋತ್ಸವ ಆಚರಿಸಿಕೊಂಡಿದೆ. ಅಂಗಡಿಯಲ್ಲಿ ಮುಖ ತೋರಿಸಿದ ಬಣ್ಣ ಬಣ್ಣದ ಛತ್ರಿ, ರೇನ್‌ಕೋಟ್ ಈಗ ಶಾಲೆಯ ಭಾಗ್ಯ ಕಂಡಿವೆ.ಕೆ.ಜಿ. ಕ್ಲಾಸಿನಿಂದ,ಅಂಗನವಾಡಿಯಿಂದ ಒಂದನೆಯ ತರಗತಿಗೆ ದಾಖಲಾಗಲು ಬಂದ ಮಗುವಿನ ಕಣ್ಣಲ್ಲಿ ಸಣ್ಣ ಅಳುವಿನೊಂದಿಗೆ ಸೋಜಿಗವೂ ಆಟ ಆಡುತ್ತಿದೆ.ಅವರು ತೊಟ್ಟ ಬಣ್ಣದ ಅಂಗಿಗಳು ಸಮವಸ್ತ್ರ ತೊಟ್ಟವರ ನಡುವೆ ಮಂಕಾಗಿದೆ. ಹೊಸ ಪಟ್ಟಿಯಲ್ಲಿ ಹೊಸ ಅಕ್ಷರಗಳು ಮುದ್ದಾಗಿ ಹೊಸ ಹೂವಿನಂತೆ ಅರಳುತ್ತಿವೆ.
ಅಕ್ಷತಾ ಕೃಷ್ಣಮೂರ್ತಿ