Advertisement

ಕರಾವಳಿಯಲ್ಲಿ ಮುಂಗಾರು ಚುರುಕು

11:27 AM Jun 12, 2020 | mahesh |

ಮಂಗಳೂರು: ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಉತ್ತಮ ಮಳೆಯಾಗಿದೆ. ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಧರ್ಮಸ್ಥಳ, ಬಂಟ್ವಾಳ. ವಿಟ್ಲ, ಸುಳ್ಯ, ಸುರತ್ಕಲ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗಿನಿಂದ ಬಿಟ್ಟು ಬಿಟ್ಟು ಮಳೆಯಾಗಿದ್ದು, ಸಂಜೆ, ರಾತ್ರಿ ಮಳೆಯ ಪ್ರಮಾಣ ಹೆಚ್ಚಳವಾಗಿತ್ತು. ಕೆಲವು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ಕೆಲವು ಕಡೆಗಳಲ್ಲಿ ಭಾರೀ ಮಳೆ ಜತೆ ಗಾಳಿ, ಗುಡುಗು ಕೂಡ ಇತ್ತು. ಬೈಕಂಪಾಡಿ ಮೀನಕಳಿಯದಲ್ಲಿ ಸಂಜೆ ಬೀಸಿದ ಗಾಳಿಗೆ ಮನೆಯ ಮಾಡಿನ ಶೀಟುಗಳು ಹಾರಿ ಹೋಗಿವೆ.

Advertisement

ಅಲೆಗಳ ಅಬ್ಬರ
ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿತ್ತು. ಮುನ್ನೆಚ್ಚರಿಕೆ ದೃಷ್ಟಿಯಿಂದ ಬೀಚ್‌ಗಳಲ್ಲಿ ಲೈಫ್‌ಗಾರ್ಡ್‌ ಮತ್ತು ಗೃಹರಕ್ಷಕರನ್ನು ನಿಯೋಜಿಸಲಾಗಿದೆ. ಕಳೆದ ಕೆಲ ದಿನಗಳಿಂದ ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆ ಕಾಣುತ್ತಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಗುರುವಾರ ಪಣಂಬೂರಿನಲ್ಲಿ 29.2 ಡಿ.ಸೆ. ಗರಿಷ್ಠ ಮತ್ತು 22.4 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.

ಬಂಟ್ವಾಳ: ಉತ್ತಮ ಮಳೆ
ಬಂಟ್ವಾಳ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸಂಜೆಯ ವೇಳೆಗೆ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದ ಸಂಜೆಯವರೆಗೆ ಮಳೆ ದೂರವಾಗಿದ್ದು, ಆದರೆ ಸಂಜೆಯ ಬಳಿಕ ರಾತ್ರಿವರೆಗೂ ಉತ್ತಮ ಮಳೆಯಾಗಿದೆ.

ಸಿಡಿಲು ಬಡಿದು ಮನೆಗೆ ಹಾನಿ
ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ದಿನದ ಬಹುತೇಕ ಸಮಯ ಉತ್ತಮ ಮಳೆಯಾಗಿದೆ. ಬೈಂದೂರು ತಾಲೂಕಿನ ಅದಮಕ್ಕಿ ನಿವಾಸಿ ಅಪ್ಪಯ್ಯ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು 30,000 ರೂ. ನಷ್ಟ ಉಂಟಾಗಿದೆ. ಅದೇ ತಾಲೂಕಿನ ನೀಲಾ ಫೆರ್ನಾಂಡಿಸ್‌ ಅವರ ಮನೆಗೂ ಗಾಳಿ ಮಳೆಯಿಂದ ಹಾನಿಯಾಗಿ 30,000 ರೂ. ನಷ್ಟ ಸಂಭವಿಸಿದೆ.

ಮೂರು ದಿನ “ಆರೆಂಜ್‌ ಅಲರ್ಟ್‌’
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 3 ದಿನಗಳ ಕಾಲ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಕರಾವಳಿಯಲ್ಲಿ ಗಾಳಿ ಮತ್ತು ಗುಡುಗಿನ ಆರ್ಭಟ ಸಹಿತ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ.

Advertisement

ಕಾಸರಗೋಡು: 2 ದಿನ ಎಲ್ಲೋ ಅಲರ್ಟ್‌
ಕಾಸರಗೋಡು ಸಹಿತ ಕೇರಳದ ಕೆಲವು ಜಿಲ್ಲೆಗಳಲ್ಲಿ ಜೂ. 12 ಮತ್ತು 13ರಂದು ಬಿರುಸಿನ ಮಳೆ ಸುರಿಯುವ ಸಾಧ್ಯತೆಯಿದ್ದು, ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next