ಚಿಕ್ಕಮಗಳೂರು: ಹವಾಮಾನ ವೈಪರೀತ್ಯದಿಂದ ಜಿಲ್ಲೆಯ ಕೆಲವೆಡೆ ಶುಕ್ರವಾರ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ ಸುತ್ತಮುತ್ತ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಕಡೂರು, ತರೀಕೆರೆ ಭಾಗದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಹವಾಮಾನ ಇಲಾಖೆ ಫೆ.18 ರಿಂದ 20ರ ವರೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದ್ದು ಜಿಲ್ಲೆಯಲ್ಲಿ ಫೆ.18ರಂದು ಮೋಡ ಕವಿದ ವಾತಾವರಣ ಉಂಟಾಗಿತ್ತು. ರಾತ್ರಿ ವೇಳೆ ತುಂತುರು ಮಳೆಯಾಗಿತ್ತು. ಶುಕ್ರವಾರ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ಮಧ್ಯಾಹ್ನದ ವೇಳೆ ಚಿಕ್ಕಮಗಳೂರು ನಗರದಲ್ಲಿ ಮಳೆಯಾಗಿದೆ. ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ ಸುತ್ತಮುತ್ತಲ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಕಡೂರು ಕಸಬಾ, ಸಿಂಗಟಗೆರೆ, ಪಂಚನಹಳ್ಳಿ ಸಖರಾಯಪಟ್ಟಣ, ಬೀರೂರು, ಎಮ್ಮೆದೊಡ್ಡಿ, ಬಾಸೂರು ಗ್ರಾಮಗಳಲ್ಲಿ ಕನಿಷ್ಟ 8 ಮಿ.ಮೀ.ಯಿಂದ ಗರಿಷ್ಟ 46 ಮಿಮೀ ವರೆಗೂ ಮಳೆ ಬಿದ್ದಿದೆ. ತರೀಕೆರೆ ತಾಲೂಕು ಲಕ್ಕವಳ್ಳಿ, ರಂಗೇನಹಳ್ಳಿ, ಹುಣಸಘಟ್ಟ, ತಣಿಗೆಬೈಲು, ಉಡೇವಾ, ತ್ಯಾಗದಬಾಗಿ, ಲಿಂಗದಹಳ್ಳಿಯಲ್ಲಿ ಕನಿಷ್ಠ 4 ಮಿ.ಮೀ.ನಿಂದ ಗರಿಷ್ಟ 18 ಮಿಮೀವರೆಗೂ ಮಳೆಯಾಗಿದ್ದರೆ, ಅಜ್ಜಂಪುರ ತಾಲೂಕು ಶಿವನಿ, ಬುಕ್ಕಾಂಬುಧಿ ಮತ್ತು ಚೌಳಹಿರಿಯೂರಿನಲ್ಲೂ ಕನಿಷ್ಟ 2.3ಮಿ.ಮೀ.ನಿಂದ ಗರಿಷ್ಟ 20ಮಿಮೀ ವರೆಗೂ ಮಳೆಯಾಗಿದೆ.
ಕಾಫಿಗೆ ಮತ್ತೆ ಸಂಕಷ್ಟ: ಅರೇಬಿಕಾ ಕಾಫಿ ಕೊಯ್ಲು ಮುಗಿದು, ರೋಬಾಸ್ಟಾ ಕಾಫಿ ಕೊಯ್ಲು ಆರಂಭವಾಗಿದೆ. ಮೋಡ ಕವಿದ ವಾತಾವರಣದಿಂದ ಕಾಫಿ ಒಣಗಿಸಲು ತೊಂದರೆಯಾದರೆ ಮಳೆಯಿಂದ ಕಾಫಿ ಹಣ್ಣು ನೆಲಕಚ್ಚುತ್ತಿದ್ದು ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗಲಿದೆ.
ಕಾರ್ಮಿಕರ ಕೊರತೆಯಿಂದ ಕಾಫಿಕೊಯ್ಲಿಗೂ ಸಮಸ್ಯೆ ಎದುರಾಗಿದ್ದು, ಗಿಡಗಳಲ್ಲೇ ಕಾಫಿ ಬೀಜ ಒಣಗುತ್ತಿದೆ. ಕಾಫಿ ಬೀಜ ಹೂವಾಗಲು ಮಳೆ ಸಹಕಾರಿಯಾದರೂ ಕೊಯ್ಲು ಮುಗಿಯದೆ ಮಳೆ ಬಂದರೆ ಹಣ್ಣುಗಳ ನಡುವೆ ಹೂವಾಗಿ ಕೊಯ್ಲಿಗೆ ತೊಡಕಾಗುವ ಸಾಧ್ಯತೆಗಳಿವೆ ಎಂಬುದು ಬೆಳೆಗಾರರ ಅಭಿಪ್ರಾಯವಾಗಿದೆ.
ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆಗಾರರು ನಷ್ಟಕ್ಕೆ ತುತ್ತಾಗಿದ್ದಾರೆ. ಶೇ.40ರಷ್ಟು ಕಾಫಿ ಹೂವಾಗುತ್ತಿದ್ದು, ಈಗ ಬಿದ್ದ ಮಳೆಗೆ ಶೇ.25ರಷ್ಟು ಹೂವಾಗುತ್ತಿದೆ. ಮೂರು ಹಂತದಲ್ಲಿ ಹೂವು ಬಿಡುತ್ತಿದ್ದು, ಮಳೆಯಿಂದ ಯಾವ ಹಂತ ಉಳಿಯುತ್ತದೋ? ಯಾವ ಹಂತದ ಹೂವು ಹಾಳಾಗುತ್ತದೋ ತಿಳಿಯದಂತಾಗಿದೆ ಎಂದು ಕಾಫಿ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ತಿಳಿಸಿದ್ದಾರೆ.