ಚಿಕ್ಕಮಗಳೂರು: ಜಿಲ್ಲಾದ್ಯಂತ ಕಳೆದ ಕೆಲವು ದಿನಗಳಿಂದ ಮಾಯವಾಗಿದ್ದ ಮಳೆ ಶುಕ್ರವಾರ ಮುಂಜಾನೆಯಿಂದ ಮಲೆನಾಡು ಭಾಗದಲ್ಲಿ ಆರ್ಭಟಿಸಿದೆ. ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಭಾಗದಲ್ಲಿ ಮಳೆಯಾಗಿದೆ. ಅಲ್ಲಲ್ಲಿ ಧಾರಾಕಾರ ಮಳೆಯಾದರೆ, ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಜೂನ್ ತಿಂಗಳ ಮಧ್ಯಭಾಗದಲ್ಲಿ ಭಾರೀ ಮಳೆಯಾಗಿದ್ದು, ಬತ್ತಿ ಹೋಗಿದ್ದ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿತ್ತು. ಅತಿವೃಷ್ಟಿಯ ಭೀತಿ ಉಂಟಾಗಿತ್ತು. ಗಾಳಿ-ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದವು. ಮನೆಗಳಿಗೂ ಹಾನಿಯಾಗಿತ್ತು. ನಂತರದ ದಿನಗಳಲ್ಲಿ ಜಿಲ್ಲಾದ್ಯಂತ ಮಳೆ ಕ್ಷೀಣಿಸಿದ್ದು ಕೃಷಿಕರಲ್ಲಿ ಆತಂಕ ಸೃಷ್ಟಿಸಿತ್ತು.
ಶುಕ್ರವಾರ ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ಕಾಫಿನಾಡಿನಲ್ಲಿ ಉತ್ತಮ ಮಳೆಯ ಆರಂಭವಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಮೂಡಿಗೆರೆ ಪಟ್ಟಣ ಸೇರಿದಂತೆ ತಾಲೂಕಿನ ಕೊಟ್ಟಿಗೆಹಾರ, ಜಾವಳಿ, ಬಾಳೂರು, ಕಿರುಗುಂದ, ಅಂಗಡಿ, ಗೋಣಿಬೀಡು, ಕಳಸ, ಕುದುರೆಮುಖ, ಹಿರೇಬೈಲು, ಚಾರ್ಮಾಡಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ.
ಕೊಪ್ಪ ತಾಲೂಕಿನ ಜಯಪುರ, ಬಸರೀಕಟ್ಟೆ, ಹೇರೂರು, ಕೊಗ್ರೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದರೆ, ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ, ನೆಮ್ಮಾರ್, ಕುಂಚೇಬೈಲು, ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಎನ್.ಆರ್. ಪುರ ತಾಲೂಕಿನ ಮಾಗುಂಡಿ, ಬಾಳೆಹೊನ್ನೂರು, ಬನ್ನೂರು ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಾದ್ಯಂತ ಬೆಳಗ್ಗೆ ಯಿಂದ ತುಂತುರು ಮಳೆಯಾಗಿದ್ದು, ನಗರದ ಕೆಲವು ಕಡೆಗಳಲ್ಲಿ ಧಾರಾಕಾರ ಮಳೆಯಾದರೆ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಜಿಲ್ಲಾದ್ಯಂತ ಮತ್ತೆ ಮಳೆ ಆರಂಭವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.