ಬೇಸಗೆಯ ಬಿಸಿಲಿನಿಂದ ಬಾಡಿ ಹೋದಂತಾಗಿರುವ ಪ್ರಕೃತಿಯು ವರುಣನ ಆಗಮನಕ್ಕಾಗಿ ಕಾಯುತ್ತಾ ಕುಳಿತಿರುತ್ತದೆ. ಮಳೆರಾಯನ ಆಗಮನದಿಂದಾಗಿ ನಿಸರ್ಗ ಮಂದಹಾಸ ಬೀರುತ್ತದೆ. ಈ ಪ್ರಕೃತಿಯ ಜತೆಗೆ ಇಡೀ ಜೀವ-ಸಂಕುಲವೇ ಕುಣಿದು ಕುಪ್ಪಳಿಸುತ್ತದೆ. ರೈತನ ಬಾಳಿಗೆ ಬೆಳಕಾಗುತ್ತದೆ. ಒಣ ಬೇಸಾಯ ಹೊಂದಿದ ಊರಲ್ಲಿ ಮಳೆಯನ್ನೇ ನಂಬಿದ ಜನರಿಗೆ ಮಳೆರಾಯನ ಆಗಮನ ಹಬ್ಬದ ವಾತಾವರಣವನ್ನೇ ಸೃಷ್ಟಿಸುತ್ತದೆ. ಹಳ್ಳಿಗಳಲ್ಲಿ ಜನರು ಮಳೆಗಾಗಿ ಕಾಯುತ್ತಾ ಕುಳಿತಿರುತ್ತಾರೆ.
ಒಣ ಬೇಸಾಯದ ಹೊಲಗಳಿಗೆ ಮಳೆಯೇ ಜೀವನಾಧಾರ. ಮಳೆ ಬಂದರೆ ಸಾಕು ನೀರು ತುಂಬಿದ ಕೆರೆಗಳಲ್ಲಿ ಬಕ ಪಕ್ಷಿಗಳ ಓಡಾಟ, ನೀರಿನ ದಾಹವನ್ನು ತೀರಿಸಲು ಬಂದ ಪಕ್ಷಿಗಳ ಕೂಗು ಎಲ್ಲವೂ ಕಣ್ಣಿಗೆ ಮನೋಹರ. ಹಳ್ಳಿಗಳಲ್ಲಿ ಒಂದು ಮಾತು ಇದೆ, “”ರೋಣಿ ಮಳೆಯಾದ್ರೆ ಓಣೆಲ್ಲ ಜೋಳ” ಅಂತ. ಹೀಗೆ ಬೆಳೆಗಳ ಸಮೃದ್ಧಿಗೆ ಮಳೆಯೇ ಆಧಾರ. ವರ್ಷ ಎಲ್ಲರಿಗೆ ಹರ್ಷವನ್ನು ತಂದು ಕೊಡುತ್ತದೆ. ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ಮಳೆ ಕಂಡರೆ ಸಾಕು ದಿನವಿಡೀ ಅದರ ಜತೆಗೆ ನೆನೆದು, ಅದರೊಂದಿಗೆ ನೃತ್ಯವನ್ನು ಮಾಡುತ್ತಾರೆ. ಮಳೆಯಲ್ಲಿ ಬೀಸುವ ತಂಪಾದ ಗಾಳಿ ಮನಸ್ಸಿನಲ್ಲಿ ಮಂದಹಾಸ ಮೂಡುತ್ತದೆ.
ಮಳೆ ಅಂದರೆ ಪ್ರಾಣ ಬಿಡುತ್ತಿದ್ದ ನಾನು ಬೇಸಗೆ ರಜೆಗೆ ನಮ್ಮ ಅಜ್ಜಿ ಊರಿಗೆ ಹೋದಾಗ ಬಾಲ್ಯ ಸ್ನೇಹಿತೆ ಪುಟ್ಟಿ ಅವರ ಸಂಬಂಧಿಕರ ಮದುವೆಗೆ ಕರೆದುಕೊಂಡು ಹೋಗಿದ್ದರು. ಮದುವೆ ಮುಗಿಸಿ ಬರುವಾಗ ಮರದ ಬುಡದಲ್ಲಿ ಮುದುಕಿಯೊಬ್ಬಳು ಮಾವಿನಹಣ್ಣು ಮಾರುತ್ತ ಕುಳಿತ್ತಿದ್ದಳು. ಅದನ್ನು ಕಂಡ ನಾನು ಮಾವಿನಹಣ್ಣು ಬೇಕೆಂದು ಹೋಗುವಾಗ ಪುಟ್ಟಿ ನಮ್ಮ ಮನೆಯಲ್ಲಿ ಬೇಕಾದಷ್ಟು ಹಣ್ಣು ಇವೆ ಬಾ ಎಂದು ಕರೆದುಕೊಂಡು ಮುಂದೆ ಹೋದಳು. ಆ ಗುಡುಗು ಸಿಡಿಲು ಕಂಡು ನನಗೆ ಭಯವಾಯಿತು. ಅಲ್ಲೇ ಇರುವ ಮರದ ಕೆಳಗೆ ಮಳೆಯಿಂದ ತಪ್ಪಿಸಿಕೊಳ್ಳಲು ಹೊರಟಾಗ ಮರದ ಕೆಳಗೆ ನಿಲ್ಲಬೇಡ, ಸಿಡಿಲು ಬೀಳಬಹುದು ಎಂದು ಅಂಜಿಕೆ ತೋರಿಸಿದಳು ಪುಟ್ಟಿ. ಆಗ ಇಬ್ಬರು ಮನೆಯತ್ತ ವೇಗವಾಗಿ ಓಡುತ್ತಾ ಹೊರಟೆವು.
ಗುಡುಗು ಮಿಂಚಿನ ಶಬ್ದಕ್ಕೆ ಅರ್ಧ ನಡುಗಿ ಹೋಗಿ ಓಡೋಡಿ ಹೋಗಿ ಬಸವಣ°ಪ್ಪನ ಗುಡ್ಯಾಗ ಹೋಗಿ ನಿಂತು ಮಳೆ ನಿಂತ ನಂತರ ಮನೆಗೆ ಹೋದ್ವಿ. ಆ ದಿನ ಎಲ್ಲರ ಕೈಯಿಂದ ನನ್ನ ಸಲುವಾಗಿ ಬೈಸ್ಕೊಂಡು ಜ್ವರ ಬಂದ ನನ್ನ ಸ್ನೇಹಿತೆಯನ್ನು ಇನ್ನೂ ಮರೆತಿಲ್ಲ. ಮಳೆಯಲ್ಲಿ ಬೀಸುವ ಹಿತವಾದ ಗಾಳಿಯನ್ನು ತಬ್ಬಿಕೊಳ್ಳುವಷ್ಟು ಖುಷಿಯಾಗುತ್ತೆ.
ಅಂಬಿಕಾ ವಿ. ಘೋರ್ಪಡೆ
ವಿ.ವಿ. ವಿಜಯ