Advertisement

Rain ಹಲವೆಡೆ ಗುಡುಗು ಸಹಿತ ಉತ್ತಮ ಮಳೆ

10:51 PM Dec 10, 2023 | Team Udayavani |

ಮಂಗಳೂರು: ಕರಾವಳಿ ಭಾಗದಲ್ಲಿ ಮತ್ತೆ ಮಳೆ ಬಿರುಸು ಪಡೆಯುವ ಸಾಧ್ಯತೆ ಇದೆ. ಡಿ.11ರ ಬೆಳಗ್ಗೆವರೆಗೆ ಕರಾವಳಿಯಾದ್ಯಂತ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿ ಮತ್ತು ರವಿವಾರ ಸಂಜೆ ಬಳಿಕ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಕೆಲವು ಕಡೆ ಹಾನಿ ಉಂಟಾಗಿದೆ. ಉಡುಪಿ ಜಿಲ್ಲೆಯ ಕೆಲವು ಕಡೆ ಶನಿವಾರ ರಾತ್ರಿ ಮಳೆಯಾಗಿದೆ.

Advertisement

ಮಂಗಳೂರು ನಗರದಲ್ಲಿ ಶನಿವಾರ ರಾತ್ರಿ ರಾತ್ರಿ ಸುಮಾರು 12 ಗಂಟೆ ವೇಳೆಗೆ ಉತ್ತಮ ಮಳೆ ಸುರಿದಿದೆ. ಅದೇ ರೀತಿ, ರವಿವಾರ ಸಂಜೆ ಬಳಿಕ ಉಜಿರೆ, ಧರ್ಮಸ್ಥಳ ಬೆಳ್ತಂಗಡಿ, ಇಂದಬೆಟ್ಟು, ಮುಂಡಾಜೆ, ನಾರಾವಿ, ಅಳದಂಗಡಿ, ಗುರುವಾಯನಕೆರೆ, ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ಳಾರೆ, ಕುಕ್ಕೆ ಸುಬ್ರಹ್ಮಣ್ಯ, ಕಡಬ, ಮದ್ದಡ್ಕ, ಕಡಿರುದ್ಯಾವರ, ಕೊಂಬಾರು, ಆಲಂಕಾರು ಸುತ್ತಮುತ್ತ ಬಿರುಸಿನ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಕಳೆದ ಕೆಲವು ವಾರಗಳಿಂದ ಮಳೆ ಕ್ಷೀಣಗೊಂಡಿತ್ತು. ಸಂಜೆ ಬಳಿಕ ಸುರಿದ ಮಳೆಗೆ ಇಳೆ ತುಸು ತಂಪಾಗಿತ್ತು.

ಸಮಾರಂಭಗಳಿಗೆ ಅಡ್ಡಿ
ಜಿಲ್ಲೆಯಾದ್ಯಂತ ಕೋಲ, ಯಕ್ಷಗಾನ, ಜಾತ್ರೆ ಸಹಿತ ವಿವಿಧ ಕಾರ್ಯಕ್ರಮಗಳಿಗೆ ಮಳೆ ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಅಡಿಕೆ ಕೊçಲಿನ ಕಾರಣಕ್ಕೆ ಹಣ್ಣಡಕೆ ಮಳೆಯಿಂದಾಗಿ ಒದ್ದೆಯಾಗಿದೆ. ಕೆಲವೆಡೆ ವಿದ್ಯುತ್‌ ಕೈಕೊಟ್ಟಿತ್ತು.

ಬೆಳ್ತಂಗಡಿ ತಾಲೂಕಿನೆಲ್ಲೆಡೆ
ಭಾರಿ ಮಳೆ
ಬೆಳ್ತಂಗಡಿ: ತಾಲೂಕಿನಾದ್ಯಂತ ರವಿವಾರ ಸಂಜೆ ಭಾರೀ ಸಿಡಿಲಿನೊಂದಿಗೆ ಮಳೆಯಾಗಿದೆ. ಮಳೆಯಿಂದಾಗಿ ಲಕ್ಷದೀಪೋತ್ಸವಕ್ಕೆ ಬಂದಿದ್ದ ವ್ಯಾಪಾರಸ್ತರು ಕಷ್ಟ ಅನುಭವಿಸುವಂತಾಗಿದೆ. ಮಧ್ಯಾಹ್ನ ಬಳಿಕ ಮೋಡ ಸಹಿತ ವಾತಾವರಣ ಬಿಸಿ ಗಾಳಿಯಿಂದ ಕೂಡಿತ್ತು. ಸಂಜೆ 6.30 ರಿಂದ 7 ಗಂಟೆ ಸುಮಾರಿಗೆ ಧರ್ಮಸ್ಥಳ, ಅಳದಂಗಡಿ, ಗುರುವಾಯನಕೆರೆ, ಕುತ್ಲೂರು ಸಹಿತ ಇತರೆಡೆ ಮಳೆ ಸುರಿಯಿತು. ಮಿಂಚು, ಗುಡುಗು, ಸಿಡಿಲು ಸಹಿತ ಒಂದೂವರೆ ತಾಸಿಗೂ ಅಧಿಕ ಕಾಲ ಮಳೆಯಾಗಿದೆ. ಇದರಿಂದ ಕೃಷಿಕರು ಒಣ ಹಾಕಿದ್ದ ಅಡಿಕೆಗೆ ಹಾನಿಯಾಗಿದೆ.

ಧರ್ಮಸ್ಥಳ ಭಾರಿ ಮಳೆ
ರವಿವಾರ ಗುರುಕಿರಣ್‌ ನೈಟ್‌ ಸಂಗೀತ ಕಾರ್ಯಕ್ರಮಕ್ಕೂ ಮಳೆ ಸಿಡಿಲಿನ ಅವಾಂತರದಲ್ಲಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು. ಸಂಜೆ 5.45 ಕ್ಕೆ ಸಿದ್ಧವಾಗಿದ್ದ ವೇದಿಕೆ 8 ಗಂಟೆವರೆಗೂ ಆರಂಭಿಸಲು ಮಳೆ ಅಡ್ಡಿ ಪಡಿಸಿತು. ವ್ಯಾಪಾರಿಗಳು ಮಳೆಯಿಂದ ವಸ್ತುಗಳನ್ನು ರಕ್ಷಿಸಲು ಹರಸಾಹಸಪಟ್ಟರು.

Advertisement

ರವಿವಾರ ಧರ್ಮಸ್ಥಳ ಸಹಿತ, ನಿಡ್ಲೆ, ಕಳೆಂಜ, ಗುರಿಪಳ್ಳ, ಉಜಿರೆ, ಕಲ್ಮಂಜ, ಮುಂಡಾಜೆ, ದಿಡುಪೆ, ನೆರಿಯ, ಕೊಲ್ಲಿ, ಬೆಳ್ತಂಗಡಿ, ಮಡಂತ್ಯಾರು, ವೇಣೂರು, ಅಳದಂಗಡಿ, ಬಳಂಜ, ನಾರಾವಿ, ಗೇರುಕಟ್ಟೆ ಸಹಿತ ತಾಲೂಕಿನ ಬಹುತೇಕ ಕಡೆ ಗಾಳಿ, ಸಿಡಿಲು ಮಿಂಚಿನೊಂದಿಗೆ ಭಾರಿ ಮಳೆಯಾಗಿದೆ.

ಮಳೆಯಿಂದ ವಿದ್ಯುತ್‌ ವ್ಯತ್ಯಯವಾಗಿತ್ತು. ಜತೆಗೆ ಕೆಲವೆಡೆ ವಿದ್ಯುತ್‌ ಪರಿಕರಗಳಿಗೂ ಹಾನಿಯಾಗಿವೆ. ಮೆಸ್ಕಾಂ ಇಲಾಖೆ ಅಗತ್ಯ ಕ್ರಮ ವಹಿಸಿದೆ. ಕೆಲವೆಡೆ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್‌ ಸಮಸ್ಯೆ ಎದುರಾಯಿತು.

ಉಷ್ಣಾಂಶದಲ್ಲಿ ಇಳಿಕೆ
ಮಂಗಳೂರು ಸಹಿತ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ವಾಡಿಕೆಗಿಂತ ಅಧಿಕ ಉಷ್ಣಾಂಶ ಇತ್ತು. ಆದರೆ, ಮಳೆ ಸುರಿದ ಪರಿಣಾಮ ರವಿವಾರ ಉಷ್ಣಾಂಶಲ್ಲಿ ಇಳಿಕೆ ಕಂಡಿದೆ. ಮಂಗಳೂರಿನಲ್ಲಿ ರವಿವಾರ 32.8 ಡಿ.ಸೆ. ಗರಿಷ್ಠ ಮತ್ತು 23.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

ಮೂಲ್ಕಿ: ಸಿಡಿಲು ಬಡಿದು ಸಾವು ?
ಮೂಲ್ಕಿ: ಕಾರ್ನಾಡು ಸದಾಶಿವ ರಾವ್‌ ನಗರ ಬಳಿಯ ಬಸ್‌ ನಿಲ್ದಾಣದಲ್ಲಿ ಇಲ್ಲಿಯ ನಿವಾಸಿ ಜೋಕಿಂ ಕ್ರಾಸ್ತ (64) ಅವರ ಮೃತದೇಹ ಪತ್ತೆಯಾಗಿದೆ. ಕಾಲಿಗೆ ತೀವ್ರ ಗಾಯವಾಗಿದ್ದು ಸಿಡಿಲು ಬಡಿದು ಮೃತಪಟ್ಟಿರಬಹುದೆಂದು ಸಂಶಯಿಸಲಾಗಿದೆ.

ಹೊನ್ನಾವರದ ಆಸ್ಪತ್ರೆಯೊಂದರ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಊರಿಗೆ ಬಂದಾಗ ಅತಿಯಾಗಿ ಮದ್ಯ ಸೇವಿಸುತ್ತಿದ್ದು ಬಸ್‌ ನಿಲ್ದಾಣದಲ್ಲಿ ಇದ್ದಾಗ ಶನಿವಾರ ರಾತ್ರಿ ಭಾರಿ ಮಳೆ ವೇಳೆ ಸಿಡಿಲು ಬಡಿದು ಮೃತಪಟ್ಟಿರಬಹುದೆಂದು ನಿರೀಕ್ಷಿಸಲಾಗಿದೆ.

ಮೂಲ್ಕಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಶವ ಪರೀಕ್ಷೆ ವರದಿಯ ಅನಂತರ ಸಾವಿನ ಸ್ಪಷ್ಟ ಚಿತ್ರಣ ದೊರೆಯಲಿದೆ.

ಸಿಡಿಲು ಬಡಿದು ಮನೆಗೆ ಹಾನಿ
ವಿಟ್ಲ : ವಿಟ್ಲ ಸಮೀಪದ ಬೈರಿಕಟ್ಟೆ ಕುಡಿಯರ ಮೂಲೆಯಲ್ಲಿ ಸಿಡಿಲುಬಡಿದು ಮನೆಗೆ ಭಾರೀ ಹಾನಿಯಾಗಿದೆ. ಕುಡಿಯರಮೂಲೆ ಐತಪ್ಪ ನಾಯ್ಕ… ಅವರ ಮನೆಯಲ್ಲಿ ಶನಿವಾರ ರಾತ್ರಿ 11.15ರ ಹೊತ್ತಿಗೆ ಸಿಡಿಲು ಬಡಿದು ಅಪಾರ ಹಾನಿ ಉಂಟಾಗಿದೆ.

ಪುಣಚದಲ್ಲಿ ಹಾನಿ:
ಮಿಂಚು ಹಾಗೂ ಸಿಡಿಲಿಗೆ ಪುಣಚ ಗ್ರಾಮದ ಕೆಲ್ಲಾಳಿಯ ಮನೆಯ ವಿದ್ಯುತ್‌ ಉಪಕರಣಗಳು ಹಾಗೂ ಕೃಷಿ ಪಂಪ್‌ಹೌಸ್‌ಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾದ ಘಟನೆ ಡಿ.9ರಂದು ನಡೆದಿದೆ. ಪುಣಚ ಕೆಲ್ಲಾಳಿ ದೇವಪ್ಪ ನಾಯ್ಕರ ಮನೆಯಲ್ಲಿ ಡಿ. 9ರಂದು ರಾತ್ರಿ ಸುರಿದ ಭಾರೀ ಮಳೆ ಸಿಡಿಲು, ಮಿಂಚಿಗೆ ಮನೆಯ ವಿದ್ಯುತ್‌ ಉಪಕರಣಗಳು ಹಾಗೂ ಪಕ್ಕದಲ್ಲಿ ಕೃಷಿಗೆ ಅಳವಡಿಸಲಾದ ಪಂಪ್‌ ಶೆಡ್‌ಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ. ತಿಳಿಸಿದ್ದಾರೆ.

ಬೇಕರಿ ಕೊಠಡಿಗೆ ಹಾನಿ
ಕನ್ಯಾನ ಗ್ರಾಮದ ಕನ್ಯಾನ ಪೇಟೆಯಲ್ಲಿ ನಾರಾಯಣ ಶೆಟ್ಟಿ ಅವರ ಮಾಲಕತ್ವದ ರಾಧಾಕೃಷ್ಣ ಶೆಟ್ಟಿ ಅವರು ನಡೆಸುತ್ತಿರುವ ಬೇಕರಿ ತಿಂಡಿ ತಯಾರಿಸುವ ಕೊಠಡಿಗೆ ಸಿಡಿಲು ಬಡಿದು ಹಾನಿಯಾಗಿದೆ. ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪುಣಚ ಗ್ರಾಮದ ಕುಟ್ಟಿತ್ತಡ್ಕ ಎಂಬಲ್ಲಿ ಅಬ್ದುಲ್ಲ ಬ್ಯಾರಿ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.

ಬೈಕಂಪಾಡಿ: ಸಿಡಿಲು ಬಡಿದು ಮನೆಗೆ ಹಾನಿ
ಸುರತ್ಕಲ್‌: ಇಲ್ಲಿನ ಬೈಕಂಪಾಡಿ ಮೀನಕಳಿಯ ವಿದ್ಯಾರ್ಥಿ ಸಂಘ ಬಳಿಯ ವೆಂಕಟೇಶ್‌ ಕೆ. ಬಂಗೇರ ಅವರ ಮನೆಗೆ ಶನಿವಾರ ರಾತ್ರಿ ಸಿಡಿಲು ಬಡಿದು ಮನೆಯ ವಿದ್ಯುತ್‌ ಲೈನ್‌ ಸಹಿತ ಉಪಕರಣಗಳಿಗೆ, ಮನೆಗೆ ಲಕ್ಷಾಂತರ ರೂ. ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next