Advertisement

ಮಳೆ, ಪ್ರವಾಹ: ಹಿಮಾಚಲದಲ್ಲಿ ಮುಂದುವರಿದ ಅನಾಹುತ- ಇದುವರೆಗೆ 164 ಸಾವು

11:06 PM Jul 12, 2023 | Team Udayavani |

ನವದೆಹಲಿ: ಉತ್ತರ ಭಾರತದಲ್ಲಿ ಮಳೆಯ ಪ್ರಕೋಪ ಇನ್ನೂ ಆರಿಲ್ಲ. ಬುಧವಾರದ ಮಟ್ಟಿಗೆ ಹೇಳುವುದಿದ್ದರೆ ಮಳೆಯ ಅಬ್ಬರ ಕೊಂಚ ತಗ್ಗಿದ್ದರೂ, ಮುಂದಿನ ಐದು ದಿನಗಳಿಗೆ ಅನ್ವಯವಾಗುವಂತೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹಿಮಾಚಲ ಪ್ರದೇಶವೊಂದರಲ್ಲಿಯೇ ಸಾವಿನ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. ಪಂಜಾಬ್‌, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಇದುವರೆಗೆ ಮಳೆಯಿಂದಾಗಿ ಅಸುನೀಗಿದವರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ.

Advertisement

20 ಸಾವಿರ ಮಂದಿಗೆ ಸಂಕಷ್ಟ: ಹಿಮಾಚಲ ಪ್ರದೇಶದಲ್ಲಿ ಮಳೆ, ಪ್ರವಾಹ­ದಿಂದಾಗಿ ಇದು­ವರೆಗೆ 88 ಮಂದಿ ಅಸುನೀಗಿದ್ದಾರೆ. ಒಟ್ಟು 3 ಸಾವಿರ ಕೋಟಿ ರೂ.ಗಳಿಂದ 4 ಸಾವಿರ ಕೋಟಿ.ರೂ.ವರೆಗೆ ನಷ್ಟ ಉಂಟಾಗಿರುವ ಅಂದಾಜು ಇದೆ ಎಂದು ಸಿಎಂ ಸುಖ್ವೀಂದರ್‌ ಸಿಂಗ್‌ ಸುಖು ಬುಧವಾರ ತಿಳಿಸಿದ್ದಾರೆ. ಕುಲ್ಲು ಜಿಲ್ಲೆಯ ಕಸೋಲ್‌ ಎಂಬಲ್ಲಿಂದ 2 ಸಾವಿರ ಮಂದಿ ಪ್ರವಾಸಿ­­ಗ­ರನ್ನು ಪ್ರವಾಹ ಸಂಕಷ್ಟದಿಂದ ಪಾರು ಮಾಡಲಾಗಿದೆ. ಇದರ ಹೊರತಾಗಿಯೂ 20 ಸಾವಿರ ಮಂದಿ ವಿವಿಧ ಸ್ಥಳಗಳಲ್ಲಿ ಸಿಕ್ಕಿ ಹಾಕಿಕೊಂಡಿ­ದ್ದಾರೆ ಎಂದಿದ್ದಾರೆ. ಇದುವರೆಗೆ ಒಟ್ಟು 50 ಸಾವಿರ ಮಂದಿಯನ್ನು ಪಾರು ಮಾಡಿದ್ದೇವೆ. ಕುಲ್ಲು ಮತ್ತು ಮನಾಲಿಯಲ್ಲಿ ತಾತ್ಕಾಲಿಕವಾಗಿ ಮೊಬೈಲ್‌ ಸಂಪರ್ಕ ಪುನಸ್ಥಾಪಿಸ­ಲಾಗಿದೆ ಎಂದಿದ್ದಾರೆ ಹಿಮಾಚಲ ಸಿಎಂ.

ಲಾಹುಲ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ 300ಕ್ಕೂ ಅಧಿಕ ಪ್ರವಾಸಿಗರ ವಾಹನಗಳು ತಮ್ಮ ತಮ್ಮ ಗಮ್ಯಸ್ಥಾನಗಳತ್ತ ತೆರಳಲಾರಂಭಿಸಿವೆ. ಕಸೋಲ್‌-ಭುಂಟಾರ್‌ ರಸ್ತೆಯಲ್ಲಿ ಉಂಟಾಗಿದ್ದ ಭೂಕುಸಿತ­ವನ್ನು ತೆರವುಗೊಳಿಸುವ ಕೆಲಸ ನಡೆದಿದೆ. ನಾನೇ ಖುದ್ದಾಗಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ವಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಪ್ರವಾಹದಲ್ಲಿ ತೊಂದರೆಗೆ ಒಳಗಾಗಿರುವ ಪ್ರವಾಸಿಗರಿಗೆ ಹಲವಾರು ಹೋಟೆಲ್‌ಗ‌ಳು, ಪ್ರವಾಸಿ ಯುನಿಟ್‌ಗಳು ಉಚಿತವಾಗಿ ಆಹಾರ ಪೂರೈಕೆ ಮಾಡಿ ಗಮನ ಸೆಳೆದಿವೆ. ಎಟಿಎಂಗಳಿಗೆ ನೀರು ನುಗ್ಗಿದ್ದರಿಂದ ಹಿಮಾಚಲ ಪ್ರದೇಶದ ಹಲವೆಡೆ ದೂರದ ಊರುಗಳಿಂದ ಬಂದವರಿಗೆ ಹಣ ವಿಥ್‌ಡ್ರಾ ಮಾಡಲು ಸಮಸ್ಯೆಯಾಗಿದೆ. ಜು.15, ಜು.16ರಂದು ಕೂಡ ಬಿರುಸಿನ ಮಳೆಯಾಗುವ ಎಚ್ಚರಿಕೆ ಇದೆ. ರಾಜ್ಯಕ್ಕೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಹರ್ಯಾಣದಲ್ಲಿ ಮುಳುಗಿದ ಗೃಹ ಸಚಿವರ ನಿವಾಸ
ಪಂಜಾಬ್‌ ಮತ್ತು ಹರ್ಯಾಣಗಳಲ್ಲಿ ಪ್ರವಾಹ ಪರಿಸ್ಥಿತಿ ಕೈಮೀರಿದೆ. ಎರಡೂ ರಾಜ್ಯಗಳಲ್ಲಿ ವರ್ಷ ಪ್ರಕೋಪಕ್ಕೆ ಅಸುನೀಗಿದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಪಂಜಾಬ್‌ನ ಪಟಿಯಾಲ, ರೂಪ್‌ನಗರ, ಮೋಗಾ, ಲುಧಿಯಾನ, ಮೊಹಾಲಿ, ಎಸ್‌ಬಿಎಸ್‌ ನಗರ ಮತ್ತು ಫ‌ತೇಘರ್‌ ಸಾಹಿಬ್‌ ಜಿಲ್ಲೆಗಳಿಂದ ತೊಂದರೆಗೆ ಒಳಗಾದ ಸುಮಾರು 10 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪಂಜಾಬ್‌ನಲ್ಲಿ 11 ಮಂದಿ ಅಸುನೀಗಿದ್ದಾರೆ. ರಾಜ್ಯದ ಸುಲ್ತಾನ್‌ಪುರದಲ್ಲಿ ತೊಂದರೆಗೆ ಈಡಾಗಿದ್ದ 200 ಮಂದಿಯನ್ನು ಎನ್‌ಡಿಆರ್‌ಎಫ್, ಭೂಸೇನೆ ಪಾರು ಮಾಡಿದೆ. ಇನ್ನು ಹರ್ಯಾಣದ ಅಂಬಾಲದಲ್ಲಿ ಗೃಹ ಸಚಿವ ಅನಿಲ್‌ ವಿಜ್‌ ಅವರ ನಿವಾಸ ನೀರಿನಲ್ಲಿ ಮುಳುಗಿದೆ. ಅವರ ಜಿಲ್ಲೆ ಅಂಬಾಲದಲ್ಲಿಯೇ ಮಳೆಯಿಂದ ಹೆಚ್ಚು ಹಾನಿ ಉಂಟಾಗಿದೆ.

Advertisement

ಉತ್ತರ ಪ್ರದೇಶದಲ್ಲಿ ಸಾವು ನೋವು
ಮೂರು ದಿನಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಮಳೆಯಿಂದಾಗಿ ಅಸುನೀಗಿದವರ ಸಂಖ್ಯೆ 42 ಮಂದಿ ಅಸುನೀಗಿದ್ದಾರೆ. ಹವಾಮಾನ ಇಲಾಖೆ ವತಿಯಿಂದಲೂ ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಮುನ್ನೆಚ್ಚರಿಕೆ ಲಭ್ಯವಾಗಿದೆ. ಹೀಗಾಗಿ, ರಾಜ್ಯದ ನದಿಗಳ­ ಲ್ಲಿನ ಪ್ರವಾಹದ ಮಟ್ಟ ಏರುವ ಆತಂಕ ಉಂಟಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಬಿರುಸಾಗಿವೆ. ಒಟ್ಟು 53 ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣ­ದಲ್ಲಿ ಮಳೆಯಾಗಲಿದೆ. ರಾಜ್ಯ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ 24 ಜಿಲ್ಲೆಗ ಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ.

4 ದಿನ ಭಾರೀ ಮಳೆ
ಮಧ್ಯಪ್ರದೇಶದ ಹದಿನಾರು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಖರಗೋನ್‌ ಜಿಲ್ಲೆಯಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದ ಪರಿಣಾಮವಾಗಿ 8 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಉತ್ತರಾಖಂಡದಲ್ಲಿ ಕೂಡ ಮಳೆ ಪ್ರಕೋಪ ಮುಂದುವರಿದಿದೆ. ಬುಧವಾರ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ “ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ, ಸಾರ್ವಜನಿಕರು ವಿನಾಕಾರಣ ಪ್ರಯಾಣ ಮಾಡಬಾರದು’ ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next